ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇಂದು ನಡೆಯಲಿದ್ದು, ಮಹಾರಾಷ್ಟ್ರ ಸರ್ಕಾರದ ಅರ್ಜಿಯ ವಿಚಾರಣಾಹರ್ತೆಯನ್ನು ಕೋರ್ಟ್ ಅಂತಿಮಗೊಳಿಸಲಿದೆ.
ಗಡಿ ವಿವಾದ ಸಂಬಂಧ 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬೆಳಗಾವಿ ಸೇರಿ 865 ಪ್ರದೇಶಗಳು ನಮ್ಮದು ಎಂಬುದು ಮಹಾರಾಷ್ಟ್ರದ ವಾದ. 19 ವರ್ಷಗಳ ಬಳಿಕ ಉಭಯ ರಾಜ್ಯಗಳ ಗಡಿ ವಿವಾದದ ಅಂತಿಮ ವಿಚಾರಣೆ ತೆರೆದುಕೊಳ್ಳಲಿದೆ.
ಕಾನೂನು ಸಮರದಲ್ಲಿ ಮೇಲುಗೈ ಸಾಧಿಸಲು ಕರ್ನಾಟಕ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಅತ್ತ ಮಹಾರಾಷ್ಟ್ರ ಕೂಡ ಗಡಿ ವಿವಾದ ನೋಡಿಕೊಳ್ಳಲೆಂದೇ ಇಬ್ಬರ ಸಚಿವರ ನೇಮಕ ಮಾಡಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಕರ್ನಾಟಕದ ವಾದವಾಗಿದೆ. ಬರುತ್ತದೆ ಎಂಬುದು ಮಹಾರಾಷ್ಟ್ರದ ವಾದವಾಗಿದೆ. ಉಭಯ ರಾಜ್ಯಗಳ ವಕೀಲರ ವಾದ- ಪ್ರತಿವಾದವನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ನಾಳೆ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಬೆಳಗಾವಿ ಸೇರಿ 865 ಗ್ರಾಮಗಳು ಕರ್ನಾಟಕದ ಅವಿಭಾಜ್ಯ ಅಂಗಗಳೇ ಎಂದು ಕೇಂದ್ರ ಸರ್ಕಾರ ರಚಿಸಿದ್ದ ಎರಡು ಆಯೋಗಗಳ ವರದಿಗಳು ಹೇಳುತ್ತವೆ. ಭಾಷಾವಾರು ಪ್ರಾಂತ್ಯರಚನೆಗೆ ಕೇಂದ್ರ ಸರ್ಕಾರದಿಂದ 1953ರಲ್ಲಿ ರಚನೆಯಾಗಿದ್ದ ಫಸಲ್ ಅಲಿ ಆಯೋಗ ರಚನೆಯಾಗಿತ್ತು. 1955ರಲ್ಲಿ ಫಸಲ್ ಅಲಿ ಸಮಿತಿಯಿಂದ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿ 865 ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿದ್ದವು.
ಫಸಲ್ ಅಲಿ ಆಯೋಗದ ವರದಿಯನ್ನು ಮಹಾರಾಷ್ಟ್ರ ಆಕ್ಷೇಪಿಸಿ ಮತ್ತೊಂದು ಸಮಿತಿ ರಚನೆಗೆ ಆಗ್ರಹಿಸಿತ್ತು. ಮಹಾರಾಷ್ಟ್ರ ಒತ್ತಡಕ್ಕೆ ಮಣಿದು 1965ರಲ್ಲಿ ನಿವೃತ್ತ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ನೇತೃತ್ವದಲ್ಲಿ ಆಯೋಗವನ್ನು ಇಂದಿರಾ ಗಾಂಧಿ ರಚಿಸಿದ್ದರು. 1967ರಲ್ಲಿ ಮಹಾಜನ್ ನೇತೃತ್ವದ ಸಮಿತಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 1967ರಲ್ಲಿ ಮಹಾಜನ್ ವರದಿಯನ್ನೂ ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿತ್ತು. 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯೂ ಕುತೂಹಲ ಕೆರಳಿಸಿದೆ. ಕರ್ನಾಟಕ- ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಆದರೆ ಮಹಾರಾಷ್ಟ್ರ ಹೂಡಿರುವ ದಾವೆಯಲ್ಲಿ ಮೊದಲನೇ ಪ್ರತಿವಾದಿ ಕೇಂದ್ರ ಸರ್ಕಾರವಾಗಿದ್ದು, ಎರಡನೇ ಪ್ರತಿವಾದಿ ಕರ್ನಾಟಕವಾಗಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳೂ ಸುಪ್ರೀಂ ಕೋರ್ಟ್‌ಗೆ ಹಾಜರಾಗುವ ಅನಿವಾರ್ಯತೆ ಬಂದಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಯೇ ಫಸಲ್ ಅಲಿ ಆಯೋಗ, ಮಹಾಜನ್ ಆಯೋಗ ರಚನೆ ಆಗಿದ್ದವು. ಹೀಗಾಗಿ ಕೇಂದ್ರದ ವಕೀಲರ ತಂಡವೂ ಸುಪ್ರೀಂಗೆ ಹಾಜರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Border Dispute | ಡಿ. 3ರಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಭೇಟಿ ಫಿಕ್ಸ್; ಗಡಿಯಲ್ಲಿ ಸರಣಿ ಸಭೆ