ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ವಿವಾದ (Maha Politics) ಇದೀಗ ದೇಶಾದ್ಯಂತ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ವಿಚಾರ ತಮ್ಮ ರಾಜ್ಯದ ಕುರಿತು ಹಾಗೂ ಮುಂಬರುವ ಲೋಕಸಭೆ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎಂಬ ಚಿಂತನೆ ನಡೆಯುತ್ತಿದೆ. ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.
ರಾಜ್ಯದ ಸಚಿವರು, ವಿರೋಧ ಪಕ್ಷದ ಪ್ರಮುಖರು ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ನಾವೇನು ಸನ್ಯಾಸಿಗಳಲ್ಲ ಎಂದ ಸಚಿವರ ಮುರುಗೇಶ್ ನಿರಾಣಿ
ಮಹಾರಾಷ್ಟ್ರ ಗಾಡಿ ಸರಿಯಾಗಿ ಓಡಲ್ಲ ಅಂತ ಗೊತ್ತಿತ್ತು. ಸ್ಟೇರಿಂಗ್ ಒಬ್ಬರ ಕೈಯಲ್ಲಿ ಬ್ರೇಕ್ ಒಬ್ಬರ ಕೈಯಲ್ಲಿ ಕ್ಲಚ್ ಇನ್ನೊಬ್ಬರ ಕೈಯಲ್ಲಿ ಇತ್ತು. ಹೀಗಾಗಿ ಗಾಡಿ ಸುಸೂತ್ರ ಓಡಲು ಸಾಧ್ಯವಿಲ್ಲ ಎಂದು ಮೊದಲೇ ಗೊತ್ತಿತ್ತು. ಇದರಲ್ಲಿ ಬಿಜೆಪಿಯ ಯಾವ ಕೈವಾಡವೂ ಇಲ್ಲ. ಅವರೆಲ್ಲರೂ ಸೇರಿ ನಮ್ಮ ಹತ್ತಿರ ಬಂದರೆ ಸುಮ್ಮನೆ ಕೂರಲು ನಾವು ಸನ್ಯಾಸಿಗಳಲ್ಲ.
ಕಲಬುರಗಿ: ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು ಎಂದ ಮಾಜಿ ಸಚಿವ ಡಾ. ಜಿ. ಪರಮೇಶ್ವರ್
ದೇಶದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದೆ. ಮಹಾರಾಷ್ಟ್ರ ದಲ್ಲಿ ಕೂಡಾ ಇದೇ ಕೆಲಸ ಮಾಡುತ್ತಿದೆ. ದೇಶದಲ್ಲಿ ಎಲ್ಲರೂ ಸೇರಿ ಈ ವ್ಯವಸ್ಥೆ ಗೆ ಸುಧಾರಣೆ ತರಬೇಕಿದೆ. ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಹೋಗೋ ಬಗ್ಗೆ ಎಲ್ಲರೂ ಸೇರಿ ಚರ್ಚೆ ಮಾಡಬೇಕು. ಆ ಮೂಲಕ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು
ಕಲಬುರಗಿ: ಮೋದಿಯವರು ಅಧಿಕಾರಕ್ಕೆ ಬಂದ ನಂತರ ಈ ಬೆಳವಣಿಗೆ ಎಂದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿವೋ ಅಲ್ಲಿ ಅಸಾಂವಿಧಾನಿಕ ದಾರಿಗಳ ಮೂಲಕ ಅಧಿಕಾರಕ್ಕೆ ಯತ್ನ ಮಾಡುತ್ತದೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಇಂತಹ ಬೆಳವಣಿಗಳು ನಡೆಯುತ್ತಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಆಸ್ಸಾಂ ಸೇರಿದಂತೆ ಬಹುತೇಕ ಕಡೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ತಮ್ಮ ಅಧಿಕಾರದ ಹಸಿವು ನೀಗಿಸಿಕೊಳ್ಳಲು ಬಿಜೆಪಿ ಅಸಾಂವಿಧಾನಿಕ ಕ್ರಮಕ್ಕೆ ಮುಂದಾಗಿದೆ. ಮಹಾರಾಷ್ಟ್ರದ ವಿಚಾರದಲ್ಲಿ ಬಿಜೆಪಿ ಕೈವಾಡಯಿಲ್ಲ ಎಂಬ ಮಾತು ಒಪ್ಪುವುದಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಸಿದ್ದಾಂತಗಳನ್ನು ಬಲಿಕೊಟ್ಟು ಆರ್‌ಎಸ್‌ಎಸ್ ಹಾಗೂ ಕೋಮುವಾದಿ ವಿಚಾರಗಳಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಇದಕ್ಕೆ ಅಧಿಕಾರದ ಆಸೆ ಹಾಗೂ ಹಣದ ಆಮಿಷ ಕಾರಣ.
ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸಂಜಯ್ ಪಾಟೀಲ ಹೇಳಿಕೆ
ಬಾಳಾಸಾಹೇಬ್ ಠಾಕ್ರೆ ಹಿಂದುತ್ವದ ವಿಚಾರಧಾರೆಯನ್ನು ಖಡಕ್ ಆಗಿ ಪಾಲನೆ ಮಾಡಿದ್ದರು. ಅವರೆಂದೂ ಕಾಂಗ್ರೆಸ್-ಎನ್‌ಸಿಪಿ ಜತೆಗೆ ಕೈಜೋಡಿಸಿರಲಿಲ್ಲ. ಆದರೆ ಅವರ ಪುತ್ರ ಉದ್ಧವ್ ಠಾಕ್ರೆ ಬಾಳಾಸಾಹೇಬ್ ಠಾಕ್ರೆ ವಿಚಾರಧಾರೆಗೆ ತಿಲಾಂಜಲಿ ಕೊಟ್ಟರು. ಮುಖ್ಯಮಂತ್ರಿ ಆಸೆಗೆ ಉದ್ಧವ್ ಅನೈತಿಕ ಮೈತ್ರಿ ಮಾಡಿಕೊಂಡಿದ್ದರು. ಮಹಾವಿಕಾಸ ಅಘಾಡಿ ಸರ್ಕಾರ ಶಿವಸೇನೆ ಶಾಸಕರಿಗೆ ಅನುದಾನ ನೀಡುತ್ತಿರಲಿಲ್ಲ. ಇತ್ತ ಹಿಂದುತ್ವವೂ ಇಲ್ಲ, ಅಭಿವೃದ್ಧಿಯೂ ಆಗಿಲ್ಲ ಎಂಬ ಬೇಸರ ಶಿವಸೇನೆ ಶಾಸಕರಿಗಿತ್ತು. ಶಿವಸೇನೆ ಮುಗಿಸಲೆಂದೇ ಕಾಂಗ್ರೆಸ್-ಎನ್‌ಸಿಪಿ ನಿರ್ಧರಿಸಿದ್ದವು. ಸುರಕ್ಷತೆ ದೃಷ್ಟಿಯಿಂದ ಶಿವಸೇನೆ ಬಂಡಾಯ ಶಾಸಕರು ಗುವಾಹಟಿಯಲ್ಲಿದ್ದಾರೆ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಕ್ಕೆ ಹೋದರೆ ಬಂಧನದ ಸಾಧ್ಯತೆ ಇತ್ತು.
ಸಂಜಯ್ ರಾವತ್ ನಾಟಕ ಮಾಡುತ್ತಾರೆ ಎಂಬುದು ಏಕನಾಥ ಶಿಂಧೆಗೆ ಗೊತ್ತಿದೆ. ಏಕನಾಥ ಶಿಂಧೆ ತಳಮಟ್ಟದದಿಂದ ಬೆಳೆದು ಬಂದು ರಾಜಕಾರಣ ಮಾಡುತ್ತಿದ್ದಾರೆ. ಸಂಜಯ್ ರಾವತ್ ಬ್ಯಾಕ್ ಡೋರ್ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಸಂಜಯ್ ರಾವತ್ ಚಮಚಾಗಿರಿ ಮಾಡಿ ಈವರೆಗೆ ಉನ್ನತ ಹುದ್ದೆಗೇರಿದ್ದಾರೆ. ನಾನು ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದೇನೆ, ನಾನೂ ಶಿವಸೈನಿಕ. ನಾನೂ ಬಾಳಾಸಾಹೇಬ್ ಠಾಕ್ರೆಯ ಶಿವಸೈನಿಕ, ಆದರೀಗ ಬಿಜೆಪಿಯಲ್ಲಿದ್ದೇನೆ ಅಷ್ಟೆ. ಶಿವಸೇನೆ ಬಗ್ಗೆ ನನಗೆ ಗೊತ್ತಿರುವಷ್ಟು ರಾಜ್ಯದ ಯಾರಿಗೂ ಗೊತ್ತಿಲ್ಲ. ಏಕನಾಥ ಶಿಂಧೆ ರಾತ್ರಿ-ಹಗಲು ಶಿವಸೈನಿಕರಿಗೆ, ಪಕ್ಷಕ್ಕೆ ದುಡಿದಿದ್ದಾರೆ.
ಚಿತ್ರದುರ್ಗ: ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಹೇಳಿಕೆ
ಕರ್ನಾಟಕ ಆಯಿತು, ಮಧ್ಯಪ್ರದೇಶ ಆಯಿತು, ಈಗ ಮಹಾರಾಷ್ಟ್ರದಲ್ಲಿ ಬಿಜೆಪಿಯು ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಪ್ರಯತ್ನ ನಡೆಸುತ್ತಿದೆ. ಸಮ್ಮಿಶ್ರ ಸರ್ಕಾರ ಇರುವ ಕಡೆಯೆಲ್ಲ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಮಾತನಾಡಿದರೆ ಪಕ್ಷದ ಅಭಿಪ್ರಾಯವಾಗುತ್ತದೆ. ಇದಕ್ಕೆ ಜನರೇ ಪ್ರತಿಕ್ರಿಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ, ಹಾಗಾಗಿ ಜನರೇ ಈ ಬಗ್ಗೆ ಮಾತನಾಡಬೇಕು. ಆದರೆ ಜನರೇ ಸುಮ್ಮನಿರುವಾಗ ನಾವೇನು ಮಾಡುವುದು?
ಬಳ್ಳಾರಿ: ಸರ್ಕಾರ ಉಳಿಯುವ ಮಾತೇ ಇಲ್ಲ ಎಂದ ಸಚಿವ ಶ್ರೀರಾಮುಲು
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ರಾಜೀನಾಮೆ ಎನ್ನುವುದನ್ನು ಕೇಳಿದ್ದೇನೆ. ಈ ರೀತಿಯ ಹಲವಾರು ರೀತಿಯ ರಾಜಕೀಯ ಘಟನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿವೆ. ಅಲ್ಲಿನ ಶಾಸಕರೇ ಆ ಸರ್ಕಾರದಲ್ಲಿ ಇರುವುದಿಲ್ಲ ಎಂದ ಮೇಲೆ ಅಘಾಡಿ ಸರ್ಕಾರ ಉಳಿಯುವ ಮಾತೇ ಇಲ್ಲ.
ಉಡುಪಿ: ಜನರೇ ಪಾಠ ಕಲಿಸುತ್ತಾರೆ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್
ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಆಪರೇಷನ್ ಕಮಲ ಮಾಡುತ್ತಿದೆ. ರಾಜ್ಯದಲ್ಲಿ ಗಣಿಧಣಿಗಳು ಆರಂಭಿಸಿದ ಆಪರೇಷನ್ ಕಮಲ ಈಗ ದೇಶವ್ಯಾಪಿ ಪಸರಿಸುತ್ತಿದೆ. ಕಾಂಗ್ರೆಸ್ ಯಾವ ಕಾಲಕ್ಕೂ ಆಪರೇಷನ್ ಮಾಡುವುದಿಲ್ಲ. ಶಾಸಕರನ್ನು ಖರೀದಿಸುವ ಕೆಟ್ಟ ಸಂಪ್ರದಾಯವನ್ನು ಹುಟ್ಟಿಸಿದ್ದೆ ಬಿಜೆಪಿ. ಎಲ್ಲದಕ್ಕೂ ಅಂತ್ಯ ಇದೆ, ಜನ ತಕ್ಕ ಪಾಠ ಕಲಿಸುತ್ತಾರೆ.