ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆಸಿದ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ರಾಜ್ಯ ಸರ್ಕಾರ ಇದೀಗ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದಲ್ಲಿ ಭವ್ಯ ಸಮಾರಂಭ ಆಯೋಜನೆ ಮಾಡಿ ಪ್ರದಾನ ಮಾಡಲು ಮುಂದಾಗಿದೆ.
ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈಗಾಗಲೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ನೆನಪನ್ನು ಉಳಿಸಿಕೊಳ್ಳುವಂತೆ ಅವರ ಜನಪ್ರಿಯತೆಗೆ ತಕ್ಕಂತೆ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬುದು ಸರ್ಕಾರದ ಆಶಯ. ಪ್ರತಿ ಬಾರಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನೂ ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ಏಕೀಕರಣವಾಗಿ ಎಷ್ಟು ವರ್ಷವಾಗಿದೆಯೋ ಅಷ್ಟೇ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಸುಮಾರು ಒಂದು ಸಾವಿರ ಜನರು ಆಸೀನರಾಗಬಹುದು. ಪ್ರತಿ ವರ್ಷ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಒಂದೊಂದರಂತೆ ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹತ್ತು ಸಂಸ್ಥೆಗಳಿಗೆ ವಿಶೇಷ ಬಹುಮಾನವನ್ನೂ ಘೋಷಿಸಲಾಗಿದ್ದರಿಂದ ಜನಸಂದಣಿ ಹೆಚ್ಚಾಗಿತ್ತು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ 75 ಸ್ಥಳಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಪುಸ್ತಕಗಳನ್ನು ಪ್ರಕಟಿಸಲಾಗಿತ್ತು. ಈ 75 ಸ್ಥಳಗಳಲ್ಲೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಇದು ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಇದನ್ನು ಉಲ್ಲೇಖಿಸಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ಅಪ್ಪು ಅಭಿಮಾನಿಗಳ ಉತ್ಸಾಹ
ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವುದಾಗಿ ಈಗಾಗಲೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೇ ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಥಳ ಸಾಕಾಗುತ್ತಿಲ್ಲ. ಇನ್ನು ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಎಂದ ಮೇಲೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವುದು ಖಚಿತ.
ಇದರ ಜತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವೂ ಆಗಿರುವುದರಿಂದ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ನಿರ್ಧರಿಸಿದ್ದಾರೆ. ಅದರಂತೆ ನವೆಂಬರ್ 1ರಂದು ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಸಲಾಗುತ್ತದೆ. ಬೃಹತ್ ಸಂಖ್ಯೆಯ ಸಾರ್ವಜನಿಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ವಿಸ್ತಾರ TOP 10 NEWS | ʻಅಪ್ಪುʼಗೆ ಕರ್ನಾಟಕ ರತ್ನ ಘೋಷಣೆಯಿಂದ ರೆಪೊ ದರ ಹೆಚ್ಚಳವರೆಗಿನ ಪ್ರಮುಖ ಸುದ್ದಿಗಳಿವು
ಕೋಟಿ ಕಂಠ ಗಾಯನ
2021ರಲ್ಲಿ ಕರ್ನಾಟಕದಾದ್ಯಂತ ಏಕಕಾಲದಲ್ಲಿ 27 ಲಕ್ಷ ಜನರು ಮೂರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ನಾಡಗೀತೆ ಜತೆಗೆ ಎರಡು ಗೀತೆಗಳನ್ನು ಆಯ್ಕೆ ಮಾಡಿಕೊಂಡು ಹಾಡಿಸಲಾಗಿತ್ತು. ಪ್ರಾರಂಭದಲ್ಲಿ, ಎರಡು ಲಕ್ಷ ಜನರು ಹಾಡಬೇಕೆಂಬ ಗುರಿ ಇತ್ತಾದರೂ ಎಲ್ಲೆಡೆ ಉತ್ಸಾಹ ಹೆಚ್ಚಾಗಿ ಜನರೇ ಸ್ವಯಂಪ್ರೇರಿತವಾಗಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ಕುರಿತು ಇದು ಉತ್ತಮ ಭಾವನೆ ಮೂಡಿಸಲು ಸಹಕಾರಿಯಾಗಿತ್ತು. ಇದರಿಂದ ಸಚಿವ ಸುನಿಲ್ ಕುಮಾರ್ ಉತ್ತೇಜಿತರಾಗಿದ್ದು, ಈ ಬಾರಿ ಒಂದು ಕೋಟಿ ಕಂಠದಿಂದ ಹಾಡಿಸಲು ತೀರ್ಮಾನಿಸಿದ್ದಾರೆ.
ಅಕ್ಟೋಬರ್ 28ರಂದು ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 40 ಸಾವಿರ ಜನರು ಏಕಕಾಲದಲ್ಲಿ ಮೂರು ಗೀತೆ ಹಾಡಲಿದ್ದಾರೆ. ಇದೇ ಸಮಯದಲ್ಲಿ ರಾಜ್ಯಾದ್ಯಂತ ಹಾಗೂ ಹೊರದೇಶಗಳಲ್ಲೂ ಹಾಡಲಾಗುತ್ತದೆ. ಒಟ್ಟು ಒಂದು ಕೋಟಿಗೂ ಹೆಚ್ಚಿನ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ದೇಶದ ಹಾಗೂ ರಾಜ್ಯದ ಗಣ್ಯಾತಿಗಣ್ಯರನ್ನು ಆಹ್ವಾನಿಸಲು ಚಿಂತನೆ ನಡೆಸಲಾಗಿದೆ.
ಅಕ್ಟೋಬರ್ 29, 30 ಹಾಗೂ 31ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕರ್ನಾಟಕ ಸಾಂಸ್ಕೃತಿಕ ವೈಭವ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖ ಸಾಂಸ್ಕೃತಿಕ ಕಲಾವಿದರು, ಕಲಾತಂಡಗಳಿಂದ ಕರ್ನಾಟಕದ ಸಂಸ್ಕೃತಿಯ ಅನಾವರಣ ಇಲ್ಲಿ ನಡೆಯಲಿದೆ. ರಾಜ್ಯೋತ್ಸವಕ್ಕೂ ಮುನ್ನ ಸುಮಾರು ಒಂದು ವಾರ ಇಡೀ ಕರ್ನಾಟಕವನ್ನು ಕನ್ನಡಮಯವಾಗಿಸಲು ಸಚಿವರು ಕಾರ್ಯಪ್ರವೃತ್ತರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಸದ್ಯದಲ್ಲೆ ಅಧಿಕೃತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ | ಸರ್ಕಾರಿ ರಂಗಮಂದಿರಗಳ ಬಾಡಿಗೆ ಹೆಚ್ಚಳ: ಪ್ರತಿ ವರ್ಷ 5% ಏರಿಕೆ ಮಾಡಲು ಆದೇಶ