ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಅವಧಿ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದ್ದು, ಈ ಅವಧಿಯನ್ನು ವಿಸ್ತರಣೆ ಮಾಡಬೇಕೆ ಅಥವಾ ಹೊಸ ಅಧ್ಯಕ್ಷರ ನೇಮಕ ಮಾಡಬೇಕೆ ಎಂಬ ಮಾರ್ಗದಲ್ಲಿ ʻದಕ್ಷಿಣ ಕನ್ನಡʼ ಎಂಬ ವಿಚಾರ ಅಡ್ಡಬಂದಿದೆ.
ಬಿಜೆಪಿ ಅಧ್ಯಕ್ಷರ ಅವಧಿ ಮೂರು ವರ್ಷವಿರುತ್ತದೆ. ಒಮ್ಮೆ ಅಧ್ಯಕ್ಷರಾದವರು ಎರಡನೇ ಅವಧಿಗೆ ಮುಂದುವರಿಯುವಂತಿಲ್ಲ ಎಂದು ಈ ಹಿಂದಿನ ಬಿಜೆಪಿ ಸಂವಿಧಾನದಲ್ಲಿತ್ತು. ಆದರೆ ನಿತಿನ್ ಗಡ್ಕರಿ ಅವರ ಅವಧಿಯಲ್ಲಿ ಈ ಸಂವಿಧಾನದಲ್ಲಿ ಬದಲಾವಣೆ ತರಲಾಯಿತು. ಒಂದು ಬಾರಿಗೆ ಅವಧಿಯನ್ನು ವಿಸ್ತರಣೆ ಮಾಡಬಹುದು ಎಂದು ಬದಲಾವಣೆ ಮಾಡಿದ್ದರಿಂದ, ಒಟ್ಟು ಆರು ವರ್ಷದವರೆಗೆ ನಿರಂತರ ಅಧ್ಯಕ್ಷರಾಗಿರಬಹುದು. ಮತ್ತೆ ಅವರನ್ನೇ ಅಧ್ಯಕ್ಷರಾಗಿ ಮಾಡಬೇಕೆಂದರೆ ನಡುವೆ ಮೂರು ವರ್ಷ ಮತ್ತೊಬ್ಬರನ್ನು ನೇಮಕ ಮಾಡಬೇಕು.
2019ರಲ್ಲಿ ನೇಮಕವಾದ ನಳಿನ್‌ಕುಮಾರ್ ಕಟೀಲ್ ಅವಧಿ 2022ರ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆ ವರ್ಷದಲ್ಲಿ ಪಕ್ಷಕ್ಕೆ ಹೊಸ ಹುರುಪು ನೀಡುವ ಹಾಗೂ ಭೌಗೋಳಿಕ, ಜಾತಿ ಸಮೀಕರಣದಿಂದಲೂ ಜನತೆಗೆ ಸಂದೇಶ ನೀಡುವ ನಿಟ್ಟಿನಲ್ಲಿ ಬದಲಾವಣೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.
ಜಾತಿವಾರು ಸಮೀಕರಣ
ಇದೀಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ರಾಜ್ಯದಲ್ಲಿ ವೀರಶೈವ ಲಿಂಗಾಯತರ ಜತೆಗೆ ಜನಸಂಖ್ಯೆ ಹಾಗೂ ಪ್ರಭಾವದಲ್ಲಿ ಸರಿಸಮನಾದ ಮತ್ತೊಂದು ಸಮುದಾಯ ಎಂದರೆ ಒಕ್ಕಲಿಗ ಸಮುದಾಯ. ಮುಖ್ಯವಾಗಿ ಒಕ್ಕಲಿಗ ಸಮುದಾಯ ಪ್ರಾಬಲ್ಯ ಇರುವ ಹಳೆ ಮೈಸೂರಿನಲ್ಲಿ ಬಿಜೆಪಿ ಬಲವರ್ಧನೆ ಆಗಬೇಕಿದೆ. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ರಾಜ್ಯ ಅಧ್ಯಕ್ಷರ ಹುದ್ದೆ ನೀಡಬೇಕು ಎಂಬ ಚರ್ಚೆ ನಡೆದಿದೆ.
ಆದರೆ ಒಕ್ಕಲಿಗ ಸಮುದಾಯಕ್ಕೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಿದರೆ ಎಷ್ಟರಮಟ್ಟಿಗೆ ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಮಾತೂ ಬಲವಾಗಿದೆ. ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಿದ್ದಾರಾದರೂ ನಿಜವಾಗಿ ಸಮುದಾಯದ ಮೇಲೆ ಅವರಿಗೆ ಬಲವಾದ ಹಿಡಿತವಿಲ್ಲ. ಆರ್. ಅಶೋಕ್ ಅವರು ಬೆಂಗಳೂರು, ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಪ್ರಭಾವಿಯಾಗಿದ್ದಾರೆ. ಬೆಂಗಳೂರಿನ ಮಟ್ಟಿಗೆ ಸಾಮ್ರಾಟ್ ಎಂದೇ ಗುರುತಿಸಿಕೊಂಡಿದ್ದಾರೆ. ಸಚಿವರಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಅದರಿಂದಾಚೆಗೆ ವಿಶೇಷವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಅಷ್ಟೇನೂ ಹಿಡಿತವಿಲ್ಲ. ಉಳಿದಂತೆ ಒಕ್ಕಲಿಗ ನಾಯಕರಾದ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ಮುಂತಾದವರು ಬೇರೆ ಪಕ್ಷದಿಂದ ವಲಸೆ ಬಂದವರು. ಅವರಿಗೆ ಅಧ್ಯಕ್ಷ ಗಾದಿ ನೀಡಿದರೆ ಸಂಘಟನೆಯಲ್ಲಿ ವ್ಯತಿರಿಕ್ತ ಸಂದೇಶ ರವಾನೆ ಆಗುತ್ತದೆ.
ಪಕ್ಷದವರೇ ಆದ ಡಾ. ಸಿ.ಎನ್. ಅಶ್ವತ್ಥನಾರಾಯಣ ಇತ್ತೀಚಿನ ದಿನಗಳಲ್ಲಿ ಪ್ರಬಲ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪನೆಗೆ ಮುಂದಾಳತ್ವ ವಹಿಸಿದ್ದಾರೆ. ಇತ್ತೀಚೆಗಷ್ಟೆ ನಾಡಪ್ರಭು ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿ, ಅದನ್ನು ಒಕ್ಕಲಿಗ ಹಾಗೂ ಅಭಿವೃದ್ಧಿ ವಿಚಾರಗಳೆರಡರಲ್ಲೂ ಗುರುತಿಸಲ್ಪಡುವ ಎಸ್.ಎಂ. ಕೃಷ್ಣ ಅವರಿಗೆ ಪ್ರದಾನ ಮಾಡಿದರು. ಇತ್ತೀಚೆಗೆ ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಪ್ರಭಾವ ಹೆಚ್ಚಿಸಿಕೊಂಡು, ಡಿ.ಕೆ. ಬ್ರದರ್ಸ್ ವಿರುದ್ಧವೂ ತೊಡೆತಟ್ಟಿದ್ದಾರೆ. ಇಷ್ಟೆಲ್ಲ ಇದ್ದರೂ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಅಶ್ವತ್ಥನಾರಾಯಣ ಅವರನ್ನು ಆಯ್ಕೆ ಮಾಡಲು ಪಕ್ಷದಲ್ಲಿ ಒಮ್ಮತ ವ್ಯಕ್ತವಾಗಿಲ್ಲ.
ಒಕ್ಕಲಿಗ ಸಮುದಾಯದವರು ಎನ್ನಬಹುದಾದ ಮತ್ತೊಬ್ಬ ನಾಯಕರು ಸಿ.ಟಿ. ರವಿ. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ನಂತರ ದೆಹಲಿ ಮಟ್ಟದಲ್ಲಿ ಉತ್ತಮ ಸಂಪರ್ಕ ಸಾಧಿಸಿದ್ದಾರೆ. ಇತ್ತೀಚೆಗೆ ಸಿ.ಟಿ. ರವಿ ಅವರ ಹುಟ್ಟು ಹಬ್ಬಕ್ಕೆ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪೂರ್ಣ ಪುಟ ಜಾಹೀರಾತು ನೀಡಿ ಶುಭ ಕೋರಿದ್ದೇ ಇದಕ್ಕೆ ಉದಾಹರಣೆ. ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕೊರಗೂ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ.
ಅಧಿಕಾರದಲ್ಲಿದ್ದಾಗ ಕೆಲವು ಆರೋಪಗಳಿದ್ದರೂ ಅವು ಅವರು ರಾಜ್ಯ ಅಧ್ಯಕ್ಷರಾಗಲು ತೊಡಕಾಗುವಷ್ಟು ಬಲವಾಗಿಲ್ಲ. ಸಂಘಟನಾ ಕೌಶಲ್ಯ ಉತ್ತಮವಾಗಿದೆ ಎಂದಾದರೂ ಒಕ್ಕಲಿಗ ನಾಯಕ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಮಾತನ್ನು ಸ್ವತಃ ಸಿ.ಟಿ. ರವಿ ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪಕ್ಷದ ಕಾರ್ಯಕರ್ತ ಅಥವಾ ಸಂಘಟನಾ ಕುಶಲಿ ಎಂಬ ಕಾರಣಕ್ಕೆ ನೇಮಕ ಮಾಡಬಹುದೇ ವಿನಃ ಒಕ್ಕಲಿಗ ಕೋಟಾ ಅಡಿಯಲ್ಲಿ ರಾಜ್ಯ ಅಧ್ಯಕ್ಷರಾಗುವುದು ಕಷ್ಟ.
ಸುನಿಲ್‌ಕುಮಾರ್‌ಗೆ ಅವಕಾಶ?
ನಳಿನ್‌ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವುದು ಎಂದು ತೀರ್ಮಾನವಾದರೆ ಈ ಸ್ಥಾನಕ್ಕೆ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಇಂಧನ ಸಚಿವ ವಿ. ಸುನಿಲ್‌ಕುಮಾರ್ ಅವರದ್ದು. ಸಂಘಟನಾತ್ಮಕವಾಗಿ ಬಹುತೇಕರ ಒಪ್ಪಿಗೆ ಇದ್ದು, ಭ್ರಷ್ಟಾಚಾರ ವಿಚಾರದಲ್ಲೂ ರಾಜ್ಯಮಟ್ಟದಲ್ಲಿ ಯಾವುದೇ ಆರೋಪಗಳಿಲ್ಲ. ಸ್ಥಳೀಯವಾಗಿ ಕೆಲ ಆರೋಪಗಳಿವೆ, ಆದರೆ ಅವುಗಳು ತೀವ್ರವಾಗಿ ಚರ್ಚೆಯಾಗಿಲ್ಲ. ಒಟ್ಟಾರೆ ಒಂದು ಯಂಗ್, ಡೈನಮಿಕ್ ಫೇಸ್ ಎನ್ನುವ ಭಾವನೆ ಇದೆ. ಜತೆಗೆ ದಕ್ಷಿಣ ಕನ್ನಡದಲ್ಲಿ ಪ್ರಭಾವಿಯಾದ ಈಡಿಗ ಸಮುದಾಯದವರು ಎಂಬ ಧನಾತ್ಮಕ ಅಂಶವೂ ಇದೆ.
ದಕ್ಷಿಣ ಕನ್ನಡ ಎಂಬುದು ಸಮಸ್ಯೆ
ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲು, ದಕ್ಷಿಣ ಕನ್ನಡದವರು ಎಂಬ ಸಮಸ್ಯೆ ಅಡ್ಡಿಯಾಗುತ್ತದೆ. ಸುನಿಲ್ ಕುಮಾರ್ ಪ್ರತಿನಿಧಿಸುವ ಕಾರ್ಕಳ ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲೆಗೆ ಸೇರಿದ್ದರೂ ಅವಿಭಜಿತ ದಕ್ಷಿಣ ಕನ್ನಡಕ್ಕೆ ಸೇರುತ್ತದೆ. ಅದೇ ರೀತಿ, ಸಮುದ್ರ ತೀರದಿಂದ ದೂರವಿದ್ದರೂ ಕರಾವಳಿ ತಾಲೂಕು ಎಂದೇ ಪರಿಗಣಿತವಾಗುತ್ತದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿರುವ ಮತ್ತೊಂದು ಹೆಸರು ಶೋಭಾ ಕರಂದ್ಲಾಜೆ ಅವರದ್ದು. ಆಡಳಿತದಲ್ಲಿ ಕಟ್ಟುನಿಟ್ಟು ಎಂದೇ ಹೆಸರು ಪಡೆದಿರುವ ಶೋಭಾ ಅವರ ನಾಯಕತ್ವ ಗುಣದ ಬಗ್ಗೆ ಈಗಾಗಲೆ ಅನೇಕ ಬಾರಿ ಸಾಬೀತಾಗಿದೆ. ಕೇಂದ್ರ ಸಚಿವೆಯಾದ ನಂತರವಂತೂ ರಾಜ್ಯ ರಾಜಕೀಯದಿಂದ ಸಂಪೂರ್ಣ ದೂರವೇ ಇದ್ದಾರೆ, ಹಾಗೆಯೇ ವಿವಾದಗಳಿಂದಲೂ ದೂರವಿದ್ದಾರೆ.
ಸದ್ಯ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್‌ಕುಮಾರ್ ಕಟೀಲ್ ಅವರೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಇದಷ್ಟೆ ಅಲ್ಲದೆ, ಕಳೆದ ವಾರವಷ್ಟೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದ ರಾಜೇಶ್ ಸಹ ದಕ್ಷಿಣ ಕನ್ನಡದವರು. ಸುನಿಲ್ ಕುಮಾರ್ ಅವರಾಗಲಿ, ಶೋಭಾ ಕರಂದ್ಲಾಜೆ ಅವರಾಗಲಿ, ದಕ್ಷಿಣ ಕನ್ನಡದವರಿಗೆ ಮಾತ್ರವೇ ಸಂಘಟನೆಯಲ್ಲಿ ಮಹತ್ವ ನೀಡಲಾಗುತ್ತದೆ ಎಂಬ ಆರೋಪ ಬರುತ್ತದೆ. ಜತೆಗೆ, ಈಗಾಗಲೆ ದಕ್ಷಿಣ ಕನ್ನಡದಲ್ಲಿ ಪಕ್ಷ ಸದೃಢವಾಗಿದೆ. ಅಲ್ಲಿಯವರೇ ಅಧ್ಯಕ್ಷರಾಗುವುದರಿಂದ ಹೊಸದಾಗಿ ಚುನಾವಣೆಯಲ್ಲಿ ಆಗುವ ಲಾಭ ಏನೂ ಇಲ್ಲ ಎನ್ನುವುದು ಪ್ರಬಲವಾಗಿರುವ ವಾದ. ಈ ಕಾರಣಕ್ಕೆ, ಉತ್ತರ ಕರ್ನಾಟಕದವರೊಬ್ಬರನ್ನು ಸ್ಥಾನಕ್ಕೆ ಆಯ್ಕೆ ಮಾಡಬಹುದು ಎಂಬ ವಾದವೂ ಇದೆ.
ಇದನ್ನೂ ಓದಿ | ರಾಜ್ಯಸಭೆಯಲ್ಲಿ ಬಂದ ಮಾನ ಪರಿಷತ್‌ನಲ್ಲಿ ಹೋಯಿತು: ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ದೌಡು
ಇಡೀ ಟೀಂ ಬದಲಾದರೆ ಕಷ್ಟ
ರಾಜ್ಯ ಅಧ್ಯಕ್ಷರ ಅವಧಿ ಮುಗಿಯುತ್ತಿದ್ದರೂ, ಅವರನ್ನು ಬದಲಾವಣೆ ಮಾಡದೆ ಇನ್ನೊಂದು ಅವಧಿಗೆ ಮುಂದುವರಿಸಬೇಕು ಎಂಬ ವಾದವೂ ಬಿಜೆಪಿಯಲ್ಲಿ ಬಲವಾಗಿದೆ. ನಳಿನ್‌ಕುಮಾರ್ ಕಟೀಲ್ ಅವರು ಮಾಸ್ ಲೀಡರ್ ಅಲ್ಲ. ಆದರೆ ಸಂಘಟನಾತ್ಮಕವಾಗಿ ಆಗಬೇಕಾಗ ಅನೇಕ ಕೆಲಸಗಳನ್ನು ಮೌನವಾಗಿ ಮಾಡಿದ್ದಾರೆ. ಎಲ್ಲ ಜಿಲ್ಲೆ, ತಾಲೂಕು, ಬೂತ್ ಮಟ್ಟದಲ್ಲಿ ಸಂಘಟನೆಯ ಬಲವರ್ಧನೆ ಆಗುತ್ತಿದೆ. ಆಗಿಂದಾಗ್ಗೆ ಕಾರ್ಯಾಗಾರಗಳು, ಬೈಠಕ್‌ಗಳು, ತರಬೇತಿ ಶಿಬಿರಗಳು ನಡೆಯುತ್ತಿವೆ. ನಳಿನ್‌ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡದವರು ಎನ್ನುವುದೂ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ತೊಡಕಾಗಿದೆ.
ಇತ್ತೀಚೆಗಷ್ಟೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯನ್ನಾಗಿ ರಾಜೇಶ್ ಅವರನ್ನು ನೇಮಿಸಲಾಗಿದೆ. ಸಂಘಟನೆಯ ಆಳ ಅಗಲ ಅರಿಯಲು ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ, ನಳಿನ್‌ಕುಮಾರ್ ಅವರೇ ಇದ್ದರೆ ಸಹಾಯಕವಾಗುತ್ತದೆ. ಅಧ್ಯಕ್ಷರನ್ನೂ ಬದಲಾವಣೆ ಮಾಡಿದರೆ 2023ರ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನೆಯ ಬಿಗಿ ತಪ್ಪಬಹುದು ಎಂಬ ಚರ್ಚೆಯೂ ಇದೆ.
ನವದೆಹಲಿಯಲ್ಲಿ ಬಿರುಸಿನ ಚರ್ಚೆ
ನೂತನವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾಗಿರುವ ರಾಜೇಶ್ ಅವರು ನವದೆಹಲಿಯಲ್ಲಿದ್ದಾರೆ. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸಹ ನವದೆಹಲಿಯಲ್ಲಿದ್ದಾರೆ. ರಾಜ್ಯ ಅಧ್ಯಕ್ಷರ ಆಯ್ಕೆಯಲ್ಲಿ ಬೊಮ್ಮಾಯಿ ಅವರ ಅಭಿಪ್ರಾಯವೇ ಅಂತಿಮವಲ್ಲ, ಆದರೆ ಅವರಿಗೆ ಮಾಹಿತಿಯಂತೂ ಇರಲಿದೆ. ಅದೇ ರೀತಿ ರಾಜೇಶ್ ಅವರಿಗೂ ಪಕ್ಷ ಹೊಸದಾದ್ದರಿಂದ ಅವರ ಮಾತೇ ಅಂತಿಮ ಎನ್ನಲಾಗದು. ಆದರೆ ಅವರೂ ಒಟ್ಟಾರೆ ಪ್ರಕ್ರಿಯೆಯಲ್ಲಿ ಇರುತ್ತಾರೆ. ಪ್ರಮುಖವಾಗಿ ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಪಾತ್ರ ಪ್ರಮುಖವಾಗುತ್ತದೆ. ಆಗಸ್ಟ್ ಮೊದಲ ವಾರದಲ್ಲಿ ಈ ಕುರಿತು ಅಂತಿಮ ತೀರ್ಮಾನ ಆಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇದನ್ನೂ ಓದಿ | ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗದ ಬಿ.ಎಲ್. ಸಂತೋಷ್: ಕಾಂಗ್ರೆಸ್ ಟೀಕೆ