ಬೆಂಗಳೂರು: ರಾಜ್ಯದಲ್ಲಿ ಇನ್ನೊಂದು ವಾರ ಬಹುತೇಕ ಕಡೆ ಬಿಸಿಲು ಹಾಗೂ ಚಳಿಯ ವಾತಾವರಣ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bangalore Weather) ಇಂದು (ಜನವರಿ 18) ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಉಳಿದಂತೆ ಜನವರಿ 23ರವರೆಗೆ 17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ (Meteorological Department) ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather) ತಿಳಿಸಿದೆ. ಇನ್ನು ಒಳನಾಡು ಜಿಲ್ಲೆಗಳು ಹಾಗೂ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿಯೂ ಚಳಿ ಇರಲಿದೆ. ಆದರೆ, ಪ್ರದೇಶದಿಂದ ಪ್ರದೇಶಗಳಿಗೆ ಭಿನ್ನವಾಗಿರಲಿದೆ. ಕೆಲವು ಕಡೆ ಚಳಿಯ ಪ್ರಮಾಣ ಅಷ್ಟಾಗಿ ಇರುವುದಿಲ್ಲ ಎನ್ನಲಾಗಿದ್ದು, ಒಣ ಗಾಳಿ ಬೀಸಲಿದೆ.
ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ ಇರಲಿದ್ದರೆ, ರಾತ್ರಿ ವೇಳೆ ಚಳಿ ಚಳಿಯಾಗಲಿದೆ. ಗುರುವಾರ ಮುಂಜಾನೆ ಅಲ್ಲಲ್ಲಿ ದಟ್ಟ ಮಂಜು ಆವರಿಸಿತ್ತು. ಗುರುವಾರ (ಜನವರಿ 18) ಸಹ ಹಲವು ಕಡೆ ಚಳಿ ಇರಲಿದೆ ಎಂದು ಹೇಳಲಾಗಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 16 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.
ಆದರೆ, ಜನವರಿ 19ರಿಂದ 23ರ ವರೆಗೆ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ಹೇಳಿದೆ. ಹೀಗಾಗಿ ಕೆಲವು ಕಡೆ ಇಬ್ಬನಿ ಇದ್ದರೆ, ಮತ್ತೆ ಕೆಲವು ಕಡೆ ಮಂಜು ಮುಸುಕಿದ ವಾತಾವರಣ ಇರಲಿದೆ.
ಉತ್ತರ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಹೆಚ್ಚಳವಾದರೆ, ಉಳಿದಂತೆ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಲಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಇನ್ನು ಎರಡು – ಮೂರು ದಿನಗಳ ಕಾಲ ಉಷ್ಣಾಂಶವು ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನಲ್ಲಿ 1.5 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ಬೆಚ್ಚಗಿರಬೇಕು ಅಂತ ಹೀಗೆಲ್ಲ ಮಾಡಬೇಡಿ, ಹುಷಾರ್!
ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನಂತೆ ಚಳಿಯೂ ಹೆಚ್ಚು
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬೆಳಗ್ಗೆ ಹೊತ್ತು ಬಿಸಿಲು ಹೇಗಿರಲಿದೆಯೋ? ರಾತ್ರಿಯಾಗುತ್ತಿದ್ದಂತೆ ಚಳಿಯೂ ಹಾಗೆಯೇ ಇರಲಿದೆ. ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಹುತೇಕ ಇನ್ನೈದು ದಿನ 22 ಡಿಗ್ರಿ ಸೆಲ್ಸಿಯಸ್‌ನಲ್ಲಿಯೇ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಶುಷ್ಕ ವಾತಾವರಣ ಇರಲಿದೆ.
ಮಲೆನಾಡಿನಲ್ಲಿ ಚಳಿ ಹೆಚ್ಚು
ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ ಇರಲಿದೆ. ರಾತ್ರಿ ಹಾಗೂ ಬೆಳಗಿನ ಜಾವ ಸ್ವಲ್ಪ ಚಳಿ ಜಾಸ್ತಿಯೇ ಇರಲಿದೆ. ಶಿವಮೊಗ್ಗದಲ್ಲಿ ಗುರುವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಚಳಿ ಹೆಚ್ಚು ಎಂದು ಹೇಳಲಾಗಿದೆ.
ಉತ್ತರ ಒಳನಾಡಿನಲ್ಲೂ ಚಳಿ
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಜತೆಗೆ ಚಳಿಯೂ ಇರಲಿದೆ. ಬೆಳಗಾವಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜನವರಿ 23ರವರೆಗೆ ಕನಿಷ್ಠ ಉಷ್ಣಾಂಶವು ಇದೇ ರೀತಿ ಇರುತ್ತದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.
ಕಲಬುರಗಿಯಲ್ಲಿ ಬಿಸಿಲು ತುಸು ಹೆಚ್ಚೇ ಇರಲಿದೆ. ಅಂದರೆ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೀದರ್, ಬಾಗಲಕೋಟೆಯಲ್ಲಿಯೂ ಒಣ ಹವೆ ಹಾಗೂ ಚಳಿಯ ವಾತಾವರಣ ಇರಲಿದೆ. ರಾತ್ರಿ ಮತ್ತು ಮುಂಜಾನೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶುಷ್ಕ ವಾತಾವರಣ
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಬಳ್ಳಾರಿ, ವಿಜಯನಗರದಲ್ಲೂ ಶುಷ್ಕ ವಾತಾವರಣ ಇರಲಿದೆ. ಕೆಲವು ಕಡೆ ಮಾತ್ರ ಚಳಿಯ ವಾತಾವರಣ ಇರಲಿದ್ದು, ರಾತ್ರಿ ವೇಳೆ ಬೀಸುವ ಗಾಳಿಗೆ ಮೈಯೊಡ್ಡುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Skin Care Secrets In winter: ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ -16 ಡಿ.ಸೆ
ಮಂಗಳೂರು: 30 ಡಿ.ಸೆ – 16 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 15 ಡಿ.ಸೆ
ಗದಗ: 32 ಡಿ.ಸೆ – 16 ಡಿ.ಸೆ
ಹೊನ್ನಾವರ: 31 ಡಿ.ಸೆ- 20 ಡಿ.ಸೆ
ಕಲಬುರಗಿ: 33 ಡಿ.ಸೆ – 18 ಡಿ.ಸೆ
ಬೆಳಗಾವಿ: 31 ಡಿ.ಸೆ – 13 ಡಿ.ಸೆ
ಕಾರವಾರ: 33 ಡಿ.ಸೆ – 20 ಡಿ.ಸೆ