Site icon Vistara News

Karnataka Weather : ಸಂಡೆ ಆದ್ಮೇಲೆ ಮಂಡೆ ಬರ್ತದೆ; ಮಳೆಯೇ ಆಗದೆ ಮಂಡೆ ಬಿಸಿ ಆಗ್ತಿದೆ!

umbrella in road

ಬೆಂಗಳೂರು: ಸಂಡೆ ಆದ ಮೇಲ್ ಮಂಡೇ ಬರ್ತದೇ.. ಟೆಂತ್ ಆದ್ರೆ ಪಿಯು ಬರ್ತದೇ ಎಂಬ “ಡ್ರಾಮಾ” ಸಿನಿಮಾ ಹಾಡನ್ನು ಈಗ ಸ್ವಲ್ಪ ಬದಲಾಯಿಸಬೇಕಿದೆ. ಸಂಡೆ ಆದ ಮೇಲ್ ಮಂಡೇ ಏನೋ ಬರ್ತದೆ. ಆದರೆ, “ಕರ್ನಾಟಕದಲ್ಲಿ ಮಳೆ ಬರದೇ ಮಂಡೆ ಬಿಸಿ ಆಗ್ತಿದೆ..” ಎಂದು ಹೇಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಮಳೆ (Rain News) ಆಗದೆ ಪರಿಸ್ಥಿತಿ ದಿನೇ ದಿನೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರಾಜ್ಯದ ಬಹುತೇಕ ಕಡೆ ಮಳೆ ಇಲ್ಲ. ಶುಷ್ಕ ವಾತಾವರಣ ಇರಲಿದ್ದು, ಹೆಚ್ಚಿಗೆ ಬಿಸಿಲಿನಿಂದ ಕೂಡಿರುತ್ತದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಹೇಳಿದೆ.

ಮುಂದಿನ 48 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಅಲ್ಪ ಮಳೆ ಬೀಳಲಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಈಗಲೇ ಬೇಸಿಗೆ ಕಾಲದ ಅನುಭವವನ್ನು ಜನರು ಹೊಂದಬೇಕಾಗುತ್ತದೆ.

ದಕ್ಷಿಣ ಒಳನಾಡಿನಲ್ಲಿ ಅಲ್ಪ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಕೆಲವು ಕಡೆ ಅಲ್ಪ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ. ಇನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ರಾಮನಗರದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಇನ್ನು ಉಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶುಷ್ಕ ಹವಾಮಾನ ಇರಲಿದೆ.

ಉತ್ತರ ಒಳನಾಡಿನಲ್ಲಿ ಬೆಳಗಾವಿಯನ್ನು ಹೊರತುಪಡಿಸಿದರೆ, ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ. ಇದರಿಂದ ಈ ಭಾಗದಲ್ಲಿ ಬಿಸಿಲಿನ ಪ್ರಮಾಣ ತುಸು ಹೆಚ್ಚೇ ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಹಲವು ಕಡೆ ಅಲ್ಲಲ್ಲಿ ಮಳೆಯಾಗಲಿದೆ.

ಕರಾವಳಿ – ಮಲೆನಾಡಿನಲ್ಲಿ ಅಲ್ಪ ಮಳೆ

ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜಿಟಿ ಜಿಟಿ ಮಳೆಯಾಗಬಹುದಾಗಿದ್ದು, ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲೂ ಇದೆ ಜಿಟಿ ಜಿಟಿ ಮಳೆ

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೆ, ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣ ಇರಲಿದೆ. ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Basavaraj Bommai : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಇಲ್ಲೆಲ್ಲ ಗರಿಷ್ಠ ಉಷ್ಣಾಂಶ

ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಯಾದಗಿರಿ, ರಾಯಚೂರು ಸೇರಿ ಕಲಬುರಗಿ ದಕ್ಷಿಣ ಒಳನಾಡಿನ ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version