ಬೆಂಗಳೂರು: ರಾಜ್ಯಾದ್ಯಂತ ಬಿಸಿಲು ತೀವ್ರತೆ ಪಡೆದುಕೊಂಡಿರುವುದರಿಂದ ಜನರು ಹೈರಾಣಾಗಿದ್ದಾರೆ. ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶಗಳಲ್ಲಿ ಏರಿಕೆ ಕಾಣುತ್ತಿರುವುದು ಜನರನ್ನು ಕಂಗೆಡಿಸಿದೆ. ಬೇಸಿಗೆ ಬಿಸಿಲಿನ ಹೊಡೆತ ಬಲವಾಗಿ ಬೀಳುತ್ತಿದೆ. ಈ ಮಧ್ಯೆ ಉತ್ತರ ಭಾರತದ ಹಲವು ಕಡೆ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಹ ಮಾರ್ಚ್ ಮೊದಲ ವಾರದಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಆದರೆ, ಸದ್ಯದ ವರದಿ ಪ್ರಕಾರ ಅಂತಹ ಯಾವುದೇ ವಾತಾವರಣದ ಮುನ್ಸೂಚನೆ ಇಲ್ಲ. ಆದರೆ, ಬಿಸಿಲು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನದ ವಾತಾವರಣವನ್ನು ಗಮನಿಸುವುದಾದರೆ, ಗುರುವಾರ ಮತ್ತು ಶುಕ್ರವಾರ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳಲ್ಲಿ (Maximum and Minimum Temperature) 1 – 2 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗಬಹುದು. ಇದು ರಾಜ್ಯದ ಜನರ ನೆತ್ತಿಯನ್ನು ಸುಡಲಿದೆ.
ಬೆಂಗಳೂರಲ್ಲಿ ಇನ್ನೊಂದು ವಾರದ ಸ್ಥಿತಿ ಹೇಗೆ?
ಬೆಂಗಳೂರು ಭಾಗದ ಸುತ್ತಮುತ್ತ ಭಾಗಶಃ ಮಂಜು ಮುಸುಕಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಮುಂದಿನ ಒಂದು ವಾರದ ವಾತಾವರಣವನ್ನು ಗಮನಿಸುವುದಾದರೆ, ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ತೀವ್ರ ಪ್ರಮಾಣದಲ್ಲಿ ಸೆಕೆ ಇರಲಿದೆ.
ಇನ್ನು ಬೆಂಗಳೂರಿನಲ್ಲಿ ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಯಿದೆ. ಇದರಿಂದಾಗಿ ಹಗಲಿರುಳು ಗಾಳಿ ವೇಗವು ಹೆಚ್ಚಾಗಿ ಇರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ 35-36 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇರಲಿದೆ. ಗದಗದಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇನ್ನು ಈ ಭಾಗದ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನ ಸಹ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ.
ಕರಾವಳಿಯಲ್ಲಿ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳ
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
ದಕ್ಷಿಣ ಒಳನಾಡಲ್ಲೂ ಬಿಸಿಲ ಧಗೆ
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣವು ಹೆಚ್ಚಳವಾಗಲಿದೆ. ಈ ಭಾಗದ ಕೆಲವು ಕಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಹೆಚ್ಚಾಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ: Yadgiri News: ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 31 ಡಿ.ಸೆ – 20 ಡಿ.ಸೆ
ಮಂಗಳೂರು: 35 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 21 ಡಿ.ಸೆ
ಗದಗ: 36 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 22 ಡಿ.ಸೆ
ಕಲಬುರಗಿ: 36 ಡಿ.ಸೆ – 22 ಡಿ.ಸೆ
ಬೆಳಗಾವಿ: 35 ಡಿ.ಸೆ – 18 ಡಿ.ಸೆ
ಕಾರವಾರ: 36 ಡಿ.ಸೆ – 23 ಡಿ.ಸೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ