ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Karwar News) ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿಯ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ನದಿಯಲ್ಲಿ ಈಜಲು ಇಳಿದಿದ್ದ ವೇಳೆ ದುರಂತ ನಡೆಸಿದ್ದು, ಮೃತ ದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.
ಹುಬ್ಬಳ್ಳಿಯ ನಜೀರ್ ಅಹ್ಮದ್ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್(6), ರೇಷಾ ಉನ್ನಿಸಾ (38), ಇಫ್ರಾ ಅಹ್ಮದ್ (15), ಅಬೀದ್ ಅಹ್ಮದ್(12) ಮೃತ ದುರ್ದೈವಿಗಳು. ಮೃತರು ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾಗಿದ್ದು, ಪ್ರವಾಸಕ್ಕೆಂದು ಅಕ್ವಾಡಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಈಜಲು ಹೋಗಿದ್ದಾಗ ಮುಳುಗಿದ್ದಾರೆ.
ಇದನ್ನೂ ಓದಿ | Murder Case : ಕುಡಿದಾಗ ಯಾವಾಗಲೂ ಬೈಯುತ್ತಾನೆಂದು ಗೆಳೆಯನನ್ನೇ ಕೊಂದುಬಿಟ್ಟರು
ಒಟ್ಟು ಎಂಟು ಮಂದಿ ನದಿಯಲ್ಲಿ ಈಜಲು ಹೋಗಿದ್ದರು. ಆದರೆ, ಈ ಪೈಕಿ ಆರು ಮಂದಿ ಮುಳುಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಆರು ಮಂದಿಯ ಮೃತ ದೇಹಗಳನ್ನು ಪೊಲೀಸರು ಹೊರತೆಗೆದು, ದಾಂಡೇಲಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮದುವೆಗೆ ಬಂದವಳು ಮಸಣಕ್ಕೆ
ಕೊಡಗು: ಕಾರು ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಮಹಿಳೆ ಮೃತಪಟ್ಟ ಘಟನೆ ಕೊಡಗಿನ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ. ಕಾಸರಗೋಡುವಿನ ರಾಬಿಯ ಮೃತ ದುರ್ದೈವಿ. ಸಂಬಂಧಿಕರ ವಿವಾಹಕ್ಕೆಂದು ಆಗಮಿಸಿದ್ದ ರಾಬಿಯಾ, ರಸ್ತೆ ಬದಿ ನಿಂತಿದ್ದರು. ಆದರೆ ವೇಗವಾಗಿ ಬಂದ ಮಾರುತಿ ಕಾರು ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಮೂವರು ಗಾಯಾಳುಗಳಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟಿಪ್ಪರ್ ಲಾರಿ ಹರಿದು 4 ವರ್ಷದ ಮಗು ಛಿದ್ರ ಛಿದ್ರ; ತಾಯಿ ಕಣ್ಣೇದುರಿಗೆ ನಡೆಯಿತು ದುರಂತ
ಬೆಂಗಳೂರು: ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಂಡರು ಕಡಿಮೆಯೇ.. ಪೋಷಕರು ಸದಾ ಮಕ್ಕಳ ಮೇಲೊಂದು ಕಣ್ಣೀಡಲೆಬೇಕು, ಇಲ್ಲದಿದ್ದರೆ ದುರಂತಗಳೇ ನಡೆದು ಹೋಗುತ್ತವೆ. ಸದ್ಯ ಇದಕ್ಕೆ ಪೂರಕ ಎಂಬಂತೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ (Road Accident) ನಾಲ್ಕು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟಿದೆ.
ಟಿಪ್ಪರ್ ಲಾರಿ ಹರಿದು 4 ವರ್ಷದ ಮಗುವೊಂದು ಮೃತಪಟ್ಟಿದೆ. ಲಾರಿ ಚಕ್ರಕ್ಕೆ ಸಿಲುಕಿದ ಮಗುವಿನ ತಲೆ ಹಾಗೂ ದೇಹ ಛಿದ್ರ ಛಿದ್ರವಾಗಿತ್ತು. ಬೆಂಗಳೂರಿನ ರಾಮೋಹಳ್ಳಿ ಬಸ್ ನಿಲ್ದಾಣದಲ್ಲಿ ಬಳಿ ಶನಿವಾರ ಸಂಜೆ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಆಯುಷ್ಯ್ (4) ಮೃತ ದುರ್ದೈವಿ.
ಅಮರ್ ಹಾಗೂ ಪೂಜಾ ದಂಪತಿಗೆ ಅವಳಿ ಮಕ್ಕಳಿದ್ದು, ಉತ್ತರ ಭಾರತದಿಂದ ಬೆಂಗಳೂರಿನ ರಾಮೋಹಳ್ಳಿಯಲ್ಲಿ ಪೇಟಿಂಗ್ ಕೆಲಸ ಮಾಡಲು ಬಂದಿದ್ದರು. ನಿನ್ನೆ ಶನಿವಾರ ಸಂಜೆ ಪೂಜಾ ತನ್ನಿಬ್ಬರು ಮಕ್ಕಳ ಜತೆಗೆ ಮೊಬೈಲ್ ಅಂಗಡಿಗೆ ಬಂದಿದ್ದರು. ಒಬ್ಬ ಮಗು ತಾಯಿ ಜತೆಗೆ ಅಂಗಡಿಯೊಳಗೆ ಇದ್ದ.
ಈ ವೇಳೆ ಮತ್ತೊಬ್ಬ ಮಗ ಆಯ್ಯುಷ್ ತಾಯಿ ಕೈ ಬಿಡಿಸಿಕೊಂಡಿದ್ದ. ಬಳಿಕ ಆಟವಾಡುತ್ತಾ ಏಕಾಏಕಿ ರಸ್ತೆಗೆ ಓಡಿದ್ದ. ಇದೇ ವೇಳೆ ಆ ರಸ್ತೆಯಲ್ಲಿ ಬಸ್ ಅನ್ನು ಓವರ್ ಟೆಕ್ ಮಾಡಲು, ವೇಗವಾಗಿ ಬಂದ ಟಿಪ್ಪರ್ ಲಾರಿಯು ಆಯ್ಯುಷ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಆಯ್ಯುಷ್‌ನ ಮೇಲೆ ಚಕ್ರ ಹರಿದಿದ್ದು, ಮಾಂಸದ ಮುದ್ದೆಯಾಗಿತ್ತು. ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಲಾರಿ ಗ್ಲಾಸ್ ಪುಡಿ ಪುಡಿ ಮಾಡಿದ ಸ್ಥಳೀಯರು
ನೋಡನೋಡುತ್ತಿದ್ದ ತಾಯಿ ಕಣ್ಮುಂದೆಯೇ ಮಗ ಆಯ್ಯುಷ್ ಲಾರಿ ಚಕ್ರಕ್ಕೆ ಸಿಲುಕಿ ಛಿದ್ರ ಛಿದ್ರವಾಗಿದ್ದ. ಇನ್ನು ಘಟನೆಯಿಂದ ಸಿಟ್ಟಾದ ಸ್ಥಳೀಯರು ಟಿಪ್ಪರ್ ಲಾರಿಗೆ ಕಲ್ಲು ತೂರಿ, ಲಾರಿ ಗ್ಲಾಸ್ ಪುಡಿ ಪುಡಿ ಮಾಡಿದರು. ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಸದ್ಯ ಮೃತ ಕುಟುಂಬಸ್ಥರಿಂದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಲಾರಿಯನ್ನು ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.