ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ನೇಮಕ ಮಾಡಿದ್ದು ಪಕ್ಷದಲ್ಲಿ ಹೊಸ ಚೈತನ್ಯವನ್ನು ನೀಡಿದೆ. ಚುನಾವಣೆಗೆ ಸಜ್ಜಾಗುವ ಮುನ್ನ ಬಿಜೆಪಿಯಲ್ಲಿ ನಡೆಯುತ್ತಿದ್ದ ವಿಭಿನ್ನ ರೀತಿಯ ಹೇಳಿಕೆಗಳು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದೇ ದಿನದಲ್ಲಿ, ಯಡಿಯೂರಪ್ಪ ಅವರ ನಿವಾಸ ‘ಕಾವೇರಿʼ ಹೊಸ ಶಕ್ತಿ ಕೇಂದ್ರವಾಗಿ ಬದಲಾಗಿದೆ.
ಸಂಸದೀಯ ಮಂಡಳಿಗೆ ಆಯ್ಕೆಯಾದ ಕೂಡಲೆ ಬುಧವಾರ ಸಂಜೆಯೇ ರಾಜ್ಯ ಬಿಜೆಪಿ ಕಚೇರಿಗೆ ತೆರಳಿದ ಯಡಿಯೂರಪ್ಪ, ನಂತರ ಆರ್‌ಎಸ್‌ಎಸ್ ಕಚೇರಿಗೆ ಧಾವಿಸಿ ಪ್ರಮುಖರನ್ನು ಭೇಟಿ ಮಾಡಿದರು. ಅಲ್ಲಿಂದ ಕಾವೇರಿ ನಿವಾಸಕ್ಕೆ ಆಗಮಿಸಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಆದಿಯಾಗಿ ರಾಜ್ಯ ಸರ್ಕಾರದ ಪ್ರಮುಖ ಸಚಿವರುಗಳು, ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಗುರುವಾರ ಬೆಳಗ್ಗೆಯಿಂದಲೂ ಕಾವೇರಿ ನಿವಾಸ ಅತ್ಯಂತ ಹೆಚ್ಚಿನ ಜನಜಂಗುಳಿಯಿಂದ ಕೂಡಿದೆ. ಮೊದಲಿಗೆ ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಭೇಟಿಯಾಗಿ ಶುಭ ಕೋರಿದರು. ಈ ಸಮಯದಲ್ಲಿ ಮಾತನಾಡಿದ ಅರುಣ್ ಸಿಂಗ್, ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾದವರು. 3 ಬಾರಿ ವಿಪಕ್ಷ ನಾಯಕರಾಗಿದ್ದವರು. ಪಕ್ಷದ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿರುವುದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಶಕ್ತಿ ಮತ್ತು ಲಾಭ ಬಂದಿದೆ. ಅವರ ರಾಜಕೀಯ ಅನುಭವ ಪಕ್ಷಕ್ಕೆ ಲಾಭ ತಂದಿದೆ. ಯಡಿಯೂರಪ್ಪನವರಿಂದ ಕರ್ನಾಟಕವಲ್ಲದೇ ಇಡೀ ದಕ್ಷಿಣ ಭಾರತಕ್ಕೆ ಲಾಭ ಸಿಗಲಿದೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತೇವೆ. ಈ ನೇಮಕ ಮಾಡಿದ ಪ್ರಧಾನಿ ಮೋದಿಯವರಿಗೂ ಕೂಡ ಧನ್ಯವಾದ ತಿಳಿಸುತ್ತೇನೆ ಎಂದರು.
ಸಚಿವರಾದ ಅಶ್ವತ್ಥನಾರಾಯಣ, ಬೈರತಿ ಬಸವರಾಜು, ಶಾಸಕ ರೇಣುಕಾಚಾರ್ಯ ಸೇರಿ ಅನೇಕರು ಆಗಮಿಸಿ ಶುಭಾಶಯ ಕೋರಿದರು. ಈ ಸಮಯದಲ್ಲಿ ಮಾತನಾಡಿದ ರೇಣುಕಾಚಾರ್ಯ, ನಮ್ಮ ನಾಯಕರಾದ ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯ ಸ್ಥಾನ ಸಿಕ್ಕಿರುವುದು ಸಂತೋಷ ಆಗಿದೆ. ಅವರನ್ನು ಅಭಿನಂದಿಸಲು ಹೊನ್ನಾಳಿಯಿಂದ ಕಾರ್ಯಕರ್ತರು ಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಸೈಡ್‌ಲೈನ್ ಮಾಡಲಾಗಿದೆ ಎಂದು ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಕಾಂಗ್ರೆಸ್‌ನದ್ದು ಒಡೆದು ಆಳುವ ನೀತಿ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರು ಯಾರು? ತಾಕತ್ತಿದ್ದರೆ ಕಾಂಗ್ರೆಸ್‌ನವರು ಅವರ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಲಿ. ನಾನು ಸಿಎಂ ನಾನು ಸಿಎಂ ಎನ್ನುತ್ತಿದ್ದವರಿಗೆ ಬಿಜೆಪಿ ವರಿಷ್ಠರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಎಲ್ಲ ನಾಯಕರು ಒಟ್ಟಾಗಿ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.
ಅಶ್ವತ್ಥನಾರಾಯಣ ಮಾತನಾಡಿ, ಯಡಿಯೂರಪ್ಪ ಅವರು ಸಂಸದೀಯ ಮಂಡಳಿ ಸದಸ್ಯರಾಗಿರುವುದು ನಮಗೆಲ್ಲ ಸಂತೋಷದ ವಿಷಯ. ನಮ್ಮ ನಾಯಕರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿರುವುದು ನಮಗೆ ಹೆಮ್ಮೆ ತಂದಿದೆ. ಇದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರಿಗೆ ಅಭಿನಂಧನೆ ಸಲ್ಲಿಸುತ್ತೇವೆ ಎಂದರು. ಯಡಿಯೂರಪ್ಪ ಅವರನ್ನು ಚುನಾವಣೆಗೆ ಬಳಸಿಕೊಳ್ಳಲು ಹುದ್ದೆ ನೀಡಲಾಗಿದೆ ಎಂಬ ಕಾಂಗ್ರೆಸ್ ಟೀಕೆ ಕುರಿತು ಪ್ರತಿಕ್ರಿಯಿಸಿ, ಇದು ಬಹಳ ತಪ್ಪು ಕಲ್ಪನೆ. ನಮಗೆ ಬಿಜೆಪಿ ತಾಯಿ ಸ್ಥಾನದಲ್ಲಿ ಇದೆ. ಕಾಂಗ್ರೆಸ್‌ಗೆ ಇದನ್ನು ಸಹಿಸಲು ಆಗುತ್ತಿಲ್ಲ, ಆದ್ಧರಿಂದ ಟೀಕೆ ಮಾಡುತ್ತಿದ್ದಾರೆ ಎಂದರು.
ಅನ್ಯ ಪಕ್ಷಗಳಿಂದಲೂ ಶುಭಾಶಯ
ಸುರಪುರ ಶಾಸಕ ರಾಜುಗೌಡ ಸೇರಿ ರಾಜ್ಯ ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಿಜೆಪಿಯವರಷ್ಟೆ ಅಲ್ಲದೆ, ಅನ್ಯ ಪಕ್ಷದ ಮುಖಂಡರೂ ಆಗಮಿಸಿ ಶುಭಾಶಯ ಕೋರುತ್ತಿರುವುದು ವಿಶೇಷವಾಗಿದೆ. ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಆಗಮಿಸಿ ಮಾತುಕತೆ ನಡೆಸಿದರು.
ನಂತರ ಮಾತನಾಡಿದ ತಮ್ಮಣ್ಣ, ನಾನು ಹಾಗೂ ಯಡಿಯೂರಪ್ಪ ಸಹಪಾಠಿಗಳು. ಜತೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೆವು. ರಾಷ್ಟ್ರೀಯ ಮಟ್ಟದಲ್ಲಿ ಇಂದು ಅವರಿಗೆ ಸ್ಥಾನ ಸಿಕ್ಕಿದೆ, ಹಾಗಾಗಿ ಶುಭಾಶಯ ಕೊರಲು ಬಂದಿದ್ದೆ. ಇದರಲ್ಲಿ ಪಕ್ಷ ಎಂಬ ಭೇದವಿಲ್ಲ, ಇದು ರಾಜಕೀಯ ಚರ್ಚೆ ಭೇಟಿ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ | ವಿಸ್ತಾರ TOP 10 NEWS | ಯಡಿಯೂರಪ್ಪ ಪುನರಾಗಮನದಿಂದ ಸೆನ್ಸೆಕ್ಸ್ ಸಂಭ್ರಮದವರೆಗಿನ ಪ್ರಮುಖ ಸುದ್ದಿಗಳಿವು