ಬೆಂಗಳೂರು\ಹಾಸನ: ರಾಜ್ಯದಲ್ಲಿ ಉತ್ಪಾದನೆ ಆಗುವ ಕಾಕಂಬಿಯನ್ನು (ಮೊಲ್ಯಾಸಿಸ್) ರಫ್ತು ಮಾಡಲು ಕಾರವಾರ ಬಂದರಿನಲ್ಲೇ ಸೌಲಭ್ಯವಿದ್ದರೂ ಗೋವಾ ಮೂಲಕ ರಫ್ತು ಮಾಡಲು ಮುಂಬೈ ಮೂಲಕ ಕಂಪನಿಗೆ ಗುತ್ತಿಗೆ ನೀಡಿದ ಆರೋಪ ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಕೇಳಿಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು ಆರೋಪವನ್ನು ಅಲ್ಲಗಳೆದಿದ್ದಾರೆ.
ರಾಜ್ಯದ ಕಾಕಂಬಿಯನ್ನು ಮುಂಬೈನ ಕೆ.ಎನ್. ರಿಸೋರ್ಸ್ ಕಂಪನಿಗೆ ರಫ್ತು ಅನುಮತಿ ನೀಡಲು ಕೆ.ಗೋಪಾಲಯ್ಯ ಒತ್ತಾಯ ಹೇರುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯ ಬಂದರುಗಳ ಮೂಲಕ ರಫ್ತು ಮಾಡಲು ಸ್ಥಳೀಯ ಹೂಡಿಕೆದಾರರು ಐವತ್ತು ಕೋಟಿಗೂ ಹೆಚ್ಚು ಬಂಡವಾಳ ಹೂಡಿದ್ದಾರೆ. 400 ರಿಂದ 500 ಟ್ಯಾಂಕರ್ ಟ್ರಕ್ ಮಾಲೀಕರು ಹಾಗೂ ನೂರಾರು ಜನರು ಇದರ ಮೇಲೆ ಅವಲಂಬಿತರಾಗಿದ್ದಾರೆ.
ಕರ್ನಾಟಕದ ಬಂದರು ಮೂಲಕ ರಫ್ತುಗಳನ್ನು ಮಾಡಿದರೆ ಸರ್ಕಾರದ ಆದಾಯ ದ್ವಿಗುಣವಾಗುತ್ತದೆ. ರಫ್ತುದಾರರು ಬಂದರು ಇಲಾಖೆಗೆ ಸುಂಕ, ಸೇರಿ ಹಲವು ರೀತಿಯಲ್ಲಿ ಪಾವತಿಸುತ್ತಾರೆ, ಆದರೆ ಬೇರೆ ರಾಜ್ಯದಿಂದ ರಫ್ತಿಗೆ ಅನುಮತಿ ನೀಡಿದರೆ ರಾಜ್ಯ ಅಬಕಾರಿ ಇಲಾಖೆಯ ನಿಯಂತ್ರಣಕ್ಕೆ ಸಿಗುವುದಿಲ್ಲ.
ಈ ಹಿಂದೆಯೂ ಕೆ.ಎನ್. ರಿಸೋರ್ಸ್ ಕಂಪನಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ರಾಜ್ಯದ ಬಂದರಿನಿಂದಲೇ ರಫ್ತು ಮಾಡುವುದಾಗಿ ತಿಳಿಸಿದ್ದ ಅಬಕಾರಿ ಇಲಾಖೆ, ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು ಎನ್ನಲಾಗಿದೆ. ಇದೀಗ ಕಂಪನಿ ಮತ್ತೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಒಪ್ಪಿಗೆ ನೀಡಲು ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವಿದೆ.
ಇಷ್ಟೇ ಅಲ್ಲದೆ, ಪ್ರತಿ ಟನ್ ಕಾಕಂಬಿಗೆ 400 ರೂ.ನಂತೆ 2 ಲಕ್ಷ ಮೆಟ್ರಿಕ್ ಟನ್‌ಗೆ ಸುಮಾರು 8 ಕೋಟಿ ರೂ. ಲಂಚವನ್ನು ಗೋಪಾಲಯ್ಯ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ದೇಶದ ಯಾವುದೇ ರಾಜ್ಯ ಸರ್ಕಾರವೂ ಈ ರೀತಿ ತನ್ನ ಉತ್ಪನ್ನವನ್ನು ಬೇರೆ ರಾಜ್ಯದ ಬಂದರಿನಿಂದ ರಫ್ತು ಮಾಡಲು ಅನುಮತಿ ನೀಡಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರವೇ ಈ ರೀತಿ ನಿರ್ಧಾರ ಕೈಗೊಂಡಿರುವುದರ ಹಿಂದೆ ಭ್ರಷ್ಟಾಚಾರದ ಮಾತುಗಳು ಕೇಳಿಬಂದಿವೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 25ಲಕ್ಷ ಮೆಟ್ರಿಕ್ ಟನ್ ಕಾಕಂಬಿ ಉತ್ಪಾದನೆಯಾಗುತ್ತದೆ. ಭಾರತದಲ್ಲಿ ಪ್ರತಿ ಟನ್‌ಗೆ 1-7 ಸಾವಿರ ರೂ. ಇದ್ದರೆ ಯುರೋಪ್ ಸೇರಿ ವಿವಿಧ ದೇಶಗಳಲ್ಲಿ ಸಾಗಣೆ ವೆಚ್ಚ ಸೇರಿ 10-15 ಸಾವಿರ ರೂ. ಆಗುತ್ತದೆ.
ಆರೋಪ ನಿರಾಕರಿಸಿದ ಗೋಪಾಲಯ್ಯ
ತಮ್ಮ ಮೇಲಿನ ಆರೋಪದ ಕುರಿತು ಸಚಿವ ಕೆ. ಗೋಪಾಲಯ್ಯ ಅವರು ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದವರಿಗೆ, ಹಾಗೆಯೇ ಹೊರಗಡೆಯವರಿಗೆ ರಫ್ತು ಅನಿಮತಿ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಇಲ್ಲಿಯವರೆಗೂ ನನ್ನ ಕಚೇರಿಯಿಂದ ಆ ರೀತಿ ಭ್ರಷ್ಟಾಚಾರ ನಡೆದಿಲ್ಲ. ಅಬಕಾರಿ ಇಲಾಖೆಗೆ ಕಾನೂನಿನಲ್ಲಿ ಏನು ಅವಕಾಶವಿದೆ ಅದನ್ನು ಮಾಡಬಹುದು. ನಾನು ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಕಾನೂನನ್ನು ಬಿಟ್ಟು ಯಾರೂ ಏನನ್ನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ನಾನು ಮೂರು ದಿನದಿಂದ ಪ್ರವಾಸದಲ್ಲಿದ್ದೇನೆ. ಮತ್ತೆ ಅಕ್ಟೋಬರ್ 16ರಂದು ಬೆಂಗಳೂರಿಗೆ ತೆರಳುತ್ತೇನೆ. ಈ ರೀತಿಯ ಒಪ್ಪಿಗೆ ನನ್ನಿಂದ ಯಾವುದೂ ಆಗಿಲ್ಲ. ನನ್ನ ಮೇಲೆ ಬಂದಿರುವ ಆರೋಪ ಶುದ್ಧ ಸುಳ್ಳು. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ | ನಿತಿನ್ ಗಡ್ಕರಿ ಅಂಗಳಕ್ಕೆ ದಶಪಥ ಫೈಟ್: ತಾವೂ ಭೇಟಿಯಾಗುವುದಾಗಿ ತಿಳಿಸಿದ ಸಚಿವ ಕೆ. ಗೋಪಾಲಯ್ಯ