Site icon Vistara News

KIDNAP CASE | ಹಣದ ವಿಚಾರಕ್ಕಾಗಿ ಮೊಮ್ಮಗನನ್ನೇ ಕಿಡ್ನ್ಯಾಪ್‌ ಮಾಡಿದ್ದ ತಾತ; ಪ್ರಕರಣ ಸುಖಾಂತ್ಯ!

kidnap case

ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶನಿವಾರ (ಆ.20) ಸಂಜೆ ನಡೆದಿದ್ದ ಬಾಲಕನ ಅಪಹರಣ (KIDNAP CASE) ಪ್ರಕರಣ ಸುಖಾಂತ್ಯ ಕಂಡಿದೆ. ಹಣದ ವಿಚಾರವಾಗಿ ಕೌಟುಂಬಿಕ ಕಲಹದಿಂದಾಗಿ ಮೊಮ್ಮಗನನ್ನೇ ಅಜ್ಜ ಅಪಹರಿಸಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಡಿ.ಪೆನ್ನೇಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 20ರ ಸಂಜೆ ಅಂಗಡಿಗೆ ತೆರಳಿದ್ದ ಭಟ್ಕಳ ಆಜಾದ್ ನಗರದ ಎಂಟು ವರ್ಷದ ಬಾಲಕನೊಬ್ಬನನ್ನು ಅಪಹರಣ ಮಾಡಲಾಗಿತ್ತು. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಮಧ್ಯರಾತ್ರಿ ಪ್ರಕರಣ ದಾಖಲಾಗಿತ್ತು.

ಬಾಲಕನ ಹುಡುಕಾಟಕ್ಕಾಗಿ ಹಾಗೂ ಆತನನ್ನ ಸುರಕ್ಷಿತವಾಗಿ ಕರೆತರಲು ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು. ಸಿಸಿ ಟಿವಿ ದೃಶ್ಯಾವಳಿಯ ನೆರವಿನಿಂದ ಹಾಗೂ ಕುಟುಂಬದವರ ವಿಚಾರಣೆ ನಡೆಸಿದಾಗ ಹಣದ ವ್ಯವಹಾರವೇ ಇದಕ್ಕೆ ಕಾರಣ ಎಂಬುದು ಪೊಲೀಸರಿಗೆ ತಿಳಿದು ಬಂದಿತ್ತು.

ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿರುವ ಪೊಲೀಸರು

ಮಾರುತಿ ಸುಜುಕಿ ಇಕೋ ವಾಹನದಲ್ಲಿ ಅಪಹರಣ

ಬಾಲಕನನ್ನು ಮಾರುತಿ ಸುಜುಕಿ ಇಕೋ ವಾಹನದಲ್ಲಿ ಆಜಾದ್ ನಗರದಿಂದ ಅಪಹರಿಸಿ, ಬಳಿಕ ಮತ್ತೊಂದು ವಾಹನ ಬಳಸಿ ಗೋವಾಕ್ಕೆ ಬಾಲಕನನ್ನು ಕರೆದೊಯ್ಯಲಾಗಿತ್ತು. ಸೋಮವಾರ (ಆ.22) ಬೆಳಗ್ಗೆ ಅಲ್ಲಿನ ಕಲಂಗುಟ್ ಬೀಚ್‌ನ ರೂಮೊಂದರಲ್ಲಿ ಬಾಲಕ ಪತ್ತೆಯಾಗಿದ್ದು, ಆರೋಪಿ ಅನೀಶ್ (29) ಎಂಬಾತ ಜತೆಗಿಟ್ಟುಕೊಂಡಿದ್ದ.

ಬಾಲಕನ ತಾಯಿಯ ಸೋದರ ಮಾವ (ಬಾಲಕನ ಅಜ್ಜ), ಸೌದಿ ಅರೇಬಿಯಾದಲ್ಲಿರುವ ಇನಾಯತ್ ಉಲ್ಲಾ ಎಂಬಾತನ ಸೂಚನೆಯ ಮೇರೆಗೆ ಈ ಅಪಹರಣ ನಡೆದಿದೆ. ಐವರು ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಸುಮನಾ ತಿಳಿಸಿದರು.

ಬಾಲಕನ ತಂದೆ ಮತ್ತು ಅಜ್ಜನಿಗೆ ಹಣದ ವ್ಯವಹಾರವಿತ್ತು. ಅದಕ್ಕಾಗಿ ಬಾಲಕನನ್ನು ಅಪಹರಣ ಮಾಡಿಸಲಾಗಿತ್ತು. ಬಾಲಕನಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಸುರಕ್ಷಿತವಾಗಿ ಕರೆತರಲಾಗಿದೆ ಎಂದ ಅವರು, ಈ ಅಪಹರಣದಿಂದ ಭಟ್ಕಳಿಗರು ಅಥವಾ ಉತ್ತರ ಕನ್ನಡ ಜಿಲ್ಲೆಯ ಜನತೆ ಭಯಪಡುವಂಥದ್ದೇನೂ ಇಲ್ಲ. ಇದು ಕೌಟುಂಬಿಕ ಕಲಹದಿಂದ ನಡೆದ ಅಪಹರಣವಷ್ಟೇ ಎಂದವರು ಹೇಳಿದ್ದಾರೆ.

ಇದನ್ನೂ ಓದಿ | Honeytrap Case | ಡ್ರಾಪ್ ಕೊಡುವ ನೆಪದಲ್ಲಿ ಕಿಡ್ನಾಪ್: ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಚಿನ್ನದ ವ್ಯಾಪಾರಿ

Exit mobile version