ಬೆಂಗಳೂರು: ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ವರ್ಷದ ಮಗನನ್ನು ಕೊಂದ (Murder Case) ಆರೋಪದ ಮೇಲೆ ಬಂಧಿಸಲ್ಪಟ್ಟ ಬೆಂಗಳೂರು ಮೂಲದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ (Killer CEO Suchana Seth) ಮಗನ ಕೊಲೆಗೆ ಮೊದಲೇ ಸಂಚು ರೂಪಿಸಿದ್ದಳು (pre planned murder) ಎಂದು ಪೊಲೀಸರು ತಿಳಿಸಿದ್ದಾರೆ.
ಸುಚನಾ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಕೊಠಡಿಯಲ್ಲಿ ಕೆಮ್ಮಿನ ಸಿರಪ್‌ನ ಖಾಲಿ ಬಾಟಲಿಗಳನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ. ಹಂತಕಿ ಮಗನಿಗೆ ಹೆಚ್ಚಿನ ಪ್ರಮಾಣದ ಔಷಧಿಯನ್ನು ಕುಡಿಸಿ ಮತ್ತು ಬರುವಂತೆ ಮಾಡಿದ್ದಾಳೆ ಎಂದು ಅದು ಸೂಚಿಸಿದೆ. ಅಧಿಕಾರಿಗಳು ಹೇಳುವ ಪ್ರಕಾರ ಮಗುವನ್ನು ಬಟ್ಟೆ ಅಥವಾ ದಿಂಬಿನಿಂದ ಮುಚ್ಚಿ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಇದು ಪೂರ್ವಯೋಜಿತ ಕೊಲೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆ ಉಳಿದುಕೊಂಡಿದ್ದ ಸರ್ವಿಸ್ ಅಪಾರ್ಟ್‌ಮೆಂಟ್ ಕೊಠಡಿಯ ತಪಾಸಣೆಯ ವೇಳೆ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು (ಒಂದು ದೊಡ್ಡದು ಮತ್ತು ಇನ್ನೊಂದು ಚಿಕ್ಕವು) ಪತ್ತೆಯಾಗಿವೆ. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಹೋರಾಟದ ಲಕ್ಷಣಗಳು ಕಂಡುಬಂದಿಲ್ಲ. ಹಂತಕಿ ಮಗುವನ್ನು ಸಾಯಿಸುವ ಮೊದಲು ಕೆಮ್ಮು ಸಿರಪ್‌ನ ಹೆಚ್ಚಿನ ಪ್ರಮಾಣದ ಡೋಸ್ ನೀಡಿರುವ ಸಾಧ್ಯತೆ ಇದೆ. ಸೇವಾ ಅಪಾರ್ಟ್‌ಮೆಂಟ್ ಸಿಬ್ಬಂದಿಯ ವಿಚಾರಣೆಯ ವೇಳೆ, ಸುಚನಾ ತನಗೆ ಕೆಮ್ಮು ಇದೆ ಎಂದು ಹೇಳಿಕೊಂಡು ಕೆಮ್ಮಿನ ಸಿರಪ್‌ನ ಬಾಟಲಿಯನ್ನು ಖರೀದಿಸಲು ಕೇಳಿದ್ದಳು ಎಂದು ಗೊತ್ತಾಗಿದೆ.
ಪೊಲೀಸರು ಸುಚನಾ ಸೇಠ್ ಅವರ ಕಂಪನಿಯ ವಿಳಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ಆಕೆಯ ಕಂಪನಿಗೆ ಯಾವುದೇ ನಿರ್ದಿಷ್ಟ ಕಚೇರಿ ಇಲ್ಲದಿರುವುದನ್ನು ಕಂಡುಕೊಂಡಿದ್ದಾರೆ. ಬದಲಿಗೆ ಆಕೆ ಕೋ ವರ್ಕಿಂಗ್ ಸ್ಪೇಸ್ ಅನ್ನು ಹಂಚಿಕೊಂಡಿದ್ದಾಳೆ. ಸೇಠ್ ಬೆಂಗಳೂರಿನ ಥಣಿಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಳು. ಆದರೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆ ನಾಲ್ಕು ತಿಂಗಳ ಹಿಂದೆಯೇ ಅಪಾರ್ಟ್‌ಮೆಂಟ್ ಖಾಲಿ ಮಾಡಿರುವುದು ಕಂಡುಬಂದಿದೆ.
ಸೇಠ್ ಲಿಂಕ್ಡ್‌ಇನ್ ಪುಟದ ಪ್ರಕಾರ ಆಕೆ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ; ಎಐ ಎಥಿಕ್ಸ್‌ನಲ್ಲಿ 2021ರ 100 ಬ್ರಿಲಿಯಂಟ್ ಮಹಿಳೆಯರಲ್ಲಿ ಒಬ್ಬಳು ಎಂಬ ಮೀಡಿಯಾ ಪಟ್ಟಿಯಲ್ಲಿ ಆಕೆಯೂ ಕಾಣಿಸಿಕೊಂಡಿದ್ದಳು. ಈಕೆ AI ನೀತಿಶಾಸ್ತ್ರ ತಜ್ಞೆ ಮತ್ತು ಡೇಟಾ ವಿಜ್ಞಾನಿಯಾಗಿದ್ದು, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವುದರಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾಳೆ ಎಂದು ಈಕೆಯ ಪ್ರೊಫೈಲ್ ವಿವರ ನೀಡಿದೆ. 39 ಸುಚನಾ, 2020ರ ಸೆಪ್ಟೆಂಬರ್‌ನಲ್ಲಿ ನೋಂದಾಯಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ಸಂಸ್ಥೆಯ ನಿರ್ದೇಶಕಳಾಗಿ ಸೇವೆ ಸಲ್ಲಿಸುತ್ತಿದ್ದಳು.
ಸುಚನಾ ಹಾರ್ವರ್ಡ್ ವಿಶ್ವವಿದ್ಯಾಲಯದ ಸೈಬರ್‌ಸ್ಪೇಸ್ ಸಂಶೋಧನಾ ಕೇಂದ್ರ ಬರ್ಕ್‌ಮನ್ ಕ್ಲೈನ್ ಸೆಂಟರ್ ಫಾರ್ ಇಂಟರ್‌ನೆಟ್‌ನ ಫೆಲೋ, ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನಾ ಸಹವರ್ತಿಯಾಗಿದ್ದಳು. ಸೈಬರ್‌ಸ್ಪೇಸ್ ಸಂಶೋಧನಾ ಕೇಂದ್ರದ ಅಲ್ಯುಮ್ನಿ ಪುಟವು ಸುಚನಾಳನ್ನು “AI ನೀತಿಶಾಸ್ತ್ರ ತಜ್ಞೆ ಮತ್ತು ಡೇಟಾ ವಿಜ್ಞಾನಿ” ಎಂದು ವಿವರಿಸಿದೆ.
ಸುಚನಾ ಪಶ್ಚಿಮ ಬಂಗಾಳ ಮೂಲದವಳು. ಆಕೆ ಮತ್ತು ಪತಿ ಕೇರಳ ಮೂಲದ ವೆಂಕಟರಾಮನ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಬ್ಬರ ನಡುವೆ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ. ತನ್ನ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಪ್ರತಿಕೂಲ ತೀರ್ಪಿನ ಬಗ್ಗೆ ಸುಚನಾ ಆಕ್ರೋಶಗೊಂಡಿದ್ದಳು. ವೆಂಕಟರಾಮನ್ ಈ ಅಪರಾಧದ ಸಮಯದಲ್ಲಿ ಇಂಡೋನೇಷ್ಯಾದಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ದಾಖಲಿಸಲು ಗೋವಾಕ್ಕೆ ಬರುವಂತೆ ಅವರಿಗೆ ತಿಳಿಸಲಾಗಿದೆ. ಗೋವಾದ ಸ್ಥಳೀಯ ನ್ಯಾಯಾಲಯವು ಸುಚನಾಳನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಇದನ್ನೂ ಓದಿ: Killer CEO: ಎತ್ತಿ ಆಡಿಸಿದ ತೋಳಲ್ಲಿ ಮಗು ಚಿನ್ಮಯ್ ಅಂತ್ಯಕ್ರಿಯೆ; ಈ ನೋವು ಮತ್ತಾವ ತಂದೆಗೂ ಬೇಡ