ರಾಮನಗರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತು ತಾವು ಆಡಿದ ಮಾತಿಗೆ ಖುದ್ದು ಭೇಟಿಯಾಗಿ ಕ್ಷಮೆ ಯಾಚಿಸುವೆ ಎಂದು ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರೂ ಅವರ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು, ಹೇಳಿಕೆಗಳು ನಿಂತಿಲ್ಲ. ರಾಜಣ್ಣ ಆಡಿದ ಮಾತು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಶಾಸಕಿ ಅನಿತಾ ಕುಮಾರಸ್ವಾಮಿ, ರಾಜಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ದೇವೇಗೌಡರ ಕಾಲಿನ ಧೂಳಿಗೆ ಸಮನಿಲ್ಲದ ವ್ಯಕ್ತಿಗೆ, ಅವರ ಹೆಸರು ಹೇಳಲು ಯೋಗ್ಯತೆ ಇಲ್ಲ. ಆಚಾರವಿಲ್ಲದ ನಾಲಗೆ ಅವರದ್ದು. ಇವರ ನೀಚಬುದ್ಧಿಯನ್ನ ನೋಡಿಯೇ ಮಧುಗಿರಿ ಜನ ಸೋಲಿಸಿದ್ದು ಎಂದು ಕಿಡಿಕಾರಿದರು. ಮಾಜಿ ಪ್ರಧಾನಿಗಳ ಬಗ್ಗೆ ಕನಿಷ್ಟ ಗೌರವವಿಲ್ಲದೆ ಮಾತನಾಡಿ, ಈಗ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಅವರನ್ನು ಭೇಟಿ ಮಾಡುವುದು ಬೇಡವೆಂದು ನಮ್ಮ ಮಾವನವರಿಗೆ ಹೇಳುವೆ ಎಂದರು.
ಇದನ್ನೂ ಓದಿ | ದೇವೇಗೌಡರನ್ನು ಭೇಟಿಯಾಗಿ ಕ್ಷಮೆ ಯಾಚಿಸುವೆ, ಆದರೆ ಬೆದರಿಕೆಗೆ ಜಗ್ಗುವುದಿಲ್ಲ: ಕೆ.ಎನ್. ರಾಜಣ್ಣ
ವೈಯಕ್ತಿಯ ಟೀಕೆ ಸರಿಯಲ್ಲ
ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಕರ್ನಾಟಕದ ಗೌರವ ಹೆಚ್ಚಿಸಿದವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ರಾಜಕೀಯವಾಗಿ ಏನು ಬೇಕಾದರೂ ಚರ್ಚೆ ಮಾಡಿ, ಆದರೆ ಅವರ ಆರೋಗ್ಯದ ಬಗ್ಗೆ ವೈಯುಕ್ತಿಕ ಟೀಕೆ ಮಾಡಬಾರದು. ಈಗಾಗಲೇ ರಾಜಣ್ಣ ಕ್ಷಮೆ ಕೇಳಿದ್ದಾರೆ. ಆದರೆ ದೇವೇಗೌಡರನ್ನು ವೈಯುಕ್ತಿಕವಾಗಿ ಭೇಟಿಯಾಗಿ ಕ್ಷಮೆಯಾಚಿಸಬೇಕು ಎಂದರು.
ಕಾಂಗ್ರೆಸ್ ಉಚ್ಚಾಟನೆ ಮಾಡಲಿ
ಕೆ.ಎನ್.ರಾಜಣ್ಣ ಒಬ್ಬ ಅನಾಗರಿಕ ಎಂದು ಮಂಡ್ಯದಲ್ಲಿ ಮಾಜಿ ಎಂಎಲ್‌ಸಿ ಕೆ.ಟಿ. ಶ್ರೀಕಂಠೇಗೌಡ ಕಟುವಾಗಿ ಟೀಕೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ, ಶಾಸಕ ಆಗಲೂ ರಾಜಣ್ಣಗೆ ದೇವೇಗೌಡರ ಆಶೀರ್ವಾದ ಬೇಕಿತ್ತು. ದೇವೇಗೌಡರು ಅಪ್ರತಿಮೆ ಹೋರಾಟಗಾರ, ಅಂತಹವರ ಬಗ್ಗೆ ಮಾತನಾಡಿರುವುದು ಖಂಡನೀಯ. ಸಾರ್ವಜನಿಕ ಬದುಕಿನಲ್ಲಿ ಇರಲು ನಾಲಾಯಕ್ಕಾಗಿರುವ ರಾಜಣ್ಣನನ್ನು ಕಾಂಗ್ರೆಸ್ ಪಕ್ಷ ಉಚ್ಛಾಟನೆ ಮಾಡಿದರೆ ಗೌರವ ಬರಲಿದೆ ಎಂದರು.
ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ
ದೇವೇಗೌಡರ ಬಗ್ಗೆ ಕೆ.ಎನ್ ರಾಜಣ್ಣ ಆಡಿದ ಮಾತಿಗೆ ರಾಮನಗರ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ರಾಮನಗರ ಡಿಸಿ ಕಚೇರಿ ಮುಂಭಾಗ ರಾಜಣ್ಣ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದರು. ʼಮಧುಗಿರಿ ಮಾನ ತೆಗೆದ ರಾಜಣ್ಣಂಗೆ ಧಿಕ್ಕಾರʼ ಎಂದು ಘೋಷಣೆ ಕೂಗಿ ತುಮಕೂರಿನಲ್ಲಿ ಪ್ರತಿಭಟನೆ ನಡೆಯಿತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ, ಹಾಸನದ ಹೇಮಾವತಿ ವೃತ್ತದಲ್ಲಿ ಕೆ.ಎನ್. ರಾಜಣ್ಣ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆದು ಆಕ್ರೋಶ ಹೊರಹಾಕಲಾಯಿತು.
ಇದನ್ನೂ ಓದಿ | ಟೀಕಿಸುವ ಭರದಲ್ಲಿ ಮಾಜಿ ಪ್ರಧಾನಿಯ ಸಾವು ಬಯಸಿದ ಕೆ.ಎನ್. ರಾಜಣ್ಣ