Site icon Vistara News

Murder Case : ತೆಲಂಗಾಣ ಉದ್ಯಮಿ ಕೊಲೆ ಕೇಸ್‌; ಸ್ಥಳ ಮಹಜರು ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಲ್ಕಿತ್ತ ಆರೋಪಿ

Murder Case

ಬೆಂಗಳೂರು: ಕೊಲೆ ಆರೋಪಿಯನ್ನು (Murder Case) ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣ ರಾಜ್ಯದ ಉಪ್ಪಳ್‌ನಲ್ಲಿ ನಡೆದಿದೆ. ತೆಲಂಗಾಣದಲ್ಲಿ ಉದ್ಯಮಿಯನ್ನು ಹತ್ಯೆ ನಡೆಸಿ ಬಳಿಕ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಪನ್ಯದ ಎಸ್ಟೇಟ್‌ನಲ್ಲಿ ಸುಟ್ಟುಹಾಕಿದ್ದರು. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದರು.

ಓರ್ವ ನ್ಯಾಯಾಂಗ ಬಂಧನವಾಗಿದ್ದು, ಉಳಿದ ಇಬ್ಬರು ಆರೋಪಿಗಳ ಪೈಕಿ ಅಂಕುರ್ ರಾಣಾ ಠಾಕೂರ್‌ನನ್ನು ಎರಡು ದಿನಗಳ ಹಿಂದೆ ತೆಲಂಗಾಣಕ್ಕೆ ಮಹಜರು ನಡೆಸಲು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಸದ್ಯ ಆರೋಪಿ ಪರಾರಿ ಸಂಬಂಧ ತೆಲಂಗಾಣ ಉಪ್ಪಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ ಕೊಡಗಿನ ಎರಡು ಎಕ್ಸ್ ಪರ್ಟ್ ಟೀಮ್ ಕೂಡ ತೆಲಂಗಾಣಕ್ಕೆ ತೆರಳಿದ್ದು ಹುಟುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?

ಕೊಡಗು: ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ (Murder case) ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಭೇದಿಸಿ ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ನಿಹಾರಿಕ (29), ಪಶು ವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತರು.

ಈ ಮೂವರು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿ ಕಾಲ್ಕಿತ್ತಿದ್ದರು. ಆಸ್ತಿಗಾಗಿ ನಿಹಾರಿಕ ಪ್ರಿಯಕರರ ಜತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದಳು. ಹತ್ಯೆ ಮಾಡಿ ನಂತರ ಕೊಡಗಿನ ಸುಂಟಿಕೊಪ್ಪದಲ್ಲಿ ಸುಟ್ಟು ಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧಾರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರುಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿತ್ತು.

ಬಂಧಿತ ಆರೋಪಿಗಳು

ನಿಹಾರಿಕ ತಾನು 10ನೇ ತರಗತಿಯಲ್ಲಿ ಇರುವಾಗಲೇ ಮದುವೆಯಾಗಿದ್ದಳು. ಎರಡು ಮಕ್ಕಳಾದ ಮೇಲೆ ಪತಿಗೆ ಡಿವೋಸ್‌ ಕೊಟ್ಟು ದೂರವಾಗಿದ್ದಳು. ಬಳಿಕ ಜೈಲಿನಲ್ಲಿದ್ದ ಅಂಕುರ್ ಎಂಬಾತನ ಪರಿಚಯವಾಗಿತ್ತು. ಈ ಅಂಕುರ್‌ ಮೂಲಕ ರಮೇಶ್‌ನ ಪರಿಚಯವಾಗಿ ಮದುವೆಯಾಗಿದ್ದಳು. ರಮೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ನಡುವೆ ನಿಹಾರಿಕ, ನಿಖಿಲ್‌ ಜತೆಗೂ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿ ಇದ್ದಳು.

ನಿಹಾರಿಕ ಅಂಕುರ್‌ನೊಂದಿಗೆ ಸೇರಿ ಆಸ್ತಿ ನೀಡುವಂತೆ ರಮೇಶ್‌ನಿಗೆ ಕಿರುಕುಳ ನೀಡುತ್ತಿದ್ದರು. ಆಸ್ತಿ ನೀಡದೇ ಇದ್ದದ್ದಕ್ಕೆ ಹೈದರಾಬಾದ್ ಸಮೀಪ ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು. ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್‌ ಬಾಡಿಯನ್ನು ಸುಟ್ಟು ಹಾಕಿದ್ದರು. ಕೊಲೆ ಬಳಿಕ ಅಂಕುರ್ ದೆಹಲಿ, ಹರಿಯಾಣ ಅಂತ ಸುತ್ತಾಡಿದ್ದ.

Exit mobile version