ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಮಾಂಸಾಹಾರಿಯಾದರೆ, ಅವರ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಅವರು ಸಸ್ಯಾಹಾರಿ. ಈ ವಿಚಾರವನ್ನು ಸ್ವತಃ ಅವರೇ ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಮಾಂಸಾಹಾರ ಸೇವಿಸಿ ಹೋಗಬಾರದು ಎಂದು ಎಲ್ಲಿದೆ? ಆಹಾರ ನನ್ನ ಇಷ್ಟ, ಅದನ್ನು ಕೇಳಲು ನೀನ್ಯಾರು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಪುತ್ರ ಯತೀಂದ್ರ ಟ್ವೀಟ್ ಮಾಡಿದ್ದಾರೆ.
ಧರ್ಮದ ಆಧಾರದ ಮೇಲೆ ಆದದ್ದು ಪಾಕಿಸ್ತಾನದ ರಚನೆ. ನಮ್ಮ ಸ್ವತಂತ್ರ ಭಾರತದ ನಿರ್ಮಾತೃಗಳು ದೇಶವನ್ನು ಧರ್ಮದ ಆಧಾರದ ಮೇಲೆ ಕಟ್ಟುವ ಬದಲಾಗಿ ಎಲ್ಲ ಧರ್ಮೀಯರಿಗೂ ಸಮಾನತೆಯನ್ನು ಕೊಡುವ ಸಂವಿಧಾನದ ಆಧಾರದ ಮೇಲೆ ಕಟ್ಟಿದರು. ಧರ್ಮಾಧಾರಿತ ದ್ವಿ-ರಾಷ್ಟ್ರ ನೀತಿಯಲ್ಲಿ ನಂಬಿಕೆ ಇಟ್ಟಿದ್ದು ಮುಸ್ಲಿಂ ಲೀಗ್ ಮತ್ತು ಆಗಿನ ಹಿಂದುತ್ವವಾದಿ ಸಂಘಟನೆಗಳು.
ನಾನು ಸಂಪೂರ್ಣ ಶಾಕಾಹಾರಿ, ತಂದೆಯವರು ಮಾಂಸಾಹಾರಿ. ಶಾಕಾಹಾರಿಯೋ, ಮಾಂಸಾಹಾರಿಯೋ ಎಲ್ಲರೊಳಗಿನ ಪರಮಾತ್ಮ ಒಬ್ಬನೇ. ಆತನಿಗಿಲ್ಲದ ಭೇದ ಭಾವ ನಮಗೇಕೆ? ನನ್ನ ಆಹಾರ ನನ್ನ ಆಯ್ಕೆ ಎಂದು ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ
ಈ ಕುರಿತು ಚಾಮರಾಜನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯತೀಂದ್ರ, ಇದರ ಬಗ್ಗೆ ನಾವು ಚರ್ಚೆ ಮಾಡುವುದು ಅನಗತ್ಯ. ಇದರಿಂದ ಯಾರಿಗೂ ಪ್ರಯೋಜನ ಇಲ್ಲ. ಇದು ಬಿಜೆಪಿ ಕೆಲಸ, ಇದಕ್ಕೆ ಹೆಚ್ಚಿನ ಪ್ರಚಾರ ಕೊಡಬಾರದು ಎಂದರು.
ಶಾಸಕ ಜಮೀರ್ ಅಹ್ಮದ್ ಅವರಿಗೆ ಸಿದ್ದರಾಂಯ್ಯ ಅವರು ಹಂದಿ ಮಾಂಸ ತಿನ್ನಿಸಲಿ ಎಂಬ ಸಂಸದ ಪ್ರತಾಪ್ ಸಿಂಹ ಮಾತಿಗೆ ಪ್ರತಿಕ್ರಿಯಿಸಿದ ಯತೀಂದ್ರ, ನಮ್ಮ ತಂದೆ ಬೀಫ್ ತಿನ್ನುವುದಿಲ್ಲ. ಅವರಿಗೆ ಯಾರಾದರೂ ಬೀಫ್ ತಿನ್ನಿ ಎಂದು ಬಲವಂತ ಮಾಡುವುದಕ್ಕೆ ಆಗುತ್ತದ? ಅವರವರ ಆಹಾರ ಅವರ ಇಚ್ಛೆ. ಬಲವಂತವಾಗಿ ಪ್ರತಾಪ್ ಸಿಂಹ ಬಂದು ತಿನ್ನಿಸುವುದಕ್ಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಕೊಡಗಿನ ಜನ ಟಿಪ್ಪು ಸುಲ್ತಾನ್‌ಗೆ ಹೆದರಲಿಲ್ಲ, ಸಿದ್ದು ಸುಲ್ತಾನ್‌ಗೆ ಹೆದರುತ್ತಾರ? ಎಂಬ ಪ್ರತಾಪ್ ಸಿಂಹ ಮಾತಿಗೆ ಪ್ರತಿಕ್ರಿಯಿಸಿ, ಪ್ರಚೋದನಾಕಾರಿ ಹೇಳಿಕೆ ಕೊಟ್ಟು, ಇಲ್ಲದಿರುವ ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ. ಕೊಡಗಿನ ಜನ ಧೈರ್ಯವಂತರು, ವೀರರು ಹಾಗೂ ಒಳ್ಳೆಯ ಜನ. ಅಂತಹವರನ್ನು ಹೇಡಿಗಳಾಗಿ, ಕಲ್ಲೆಸೆಯುವ ಮಟ್ಟಕ್ಜೆ ತಂದಿದ್ದಾರೆ ಬಿಜೆಪಿಯವರು. ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಕಾರ್ಯಕರ್ತನ ಮೂಲಕ ಮೊಟ್ಟೆ ಎಸೆದಿದ್ದಾರೆ. ಕೊನೆಗೆ ಆತ ನಮ್ಮ ಕಾರ್ಯಕರ್ತನೇ ಅಲ್ಲ, ಕಾಂಗ್ರೆಸ್ ಕಾರ್ಯಕರ್ತ ಎಂದು ಸುಳ್ಳು ಹೇಳಿ ಹೇಡಿತನ ತೋರಿಸುತ್ತಿದ್ದಾರೆ. ಬಿಜೆಪಿಯವರ ರಾಜಕೀಯ ಅಸಹ್ಯ ಹುಟ್ಟಿಸುತ್ತಿದೆ ಎಂದರು.
ಸಿದ್ದರಾಮಯ್ಯ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾತಿಗೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಬಿಜೆಪಿಯವರ ಹಾಗೂ ಹಿಂದುತ್ವವಾದಿ ಸಂಘಟನೆಗಳ ಇತಿಹಾಸ ಗಮನಿಸಿದಾಗ, ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಅವರು ಏನನ್ನು ಮಾಡಲೂ ಹೇಸುವವರಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ, ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದರು.
ಇದನ್ನೂ ಓದಿ | ಜುಲೈ 5ಕ್ಕೆ ಹಂದಿ ಹೊಡೆಯೋರನ್ನ ಕಳಿಸಬೇಡಿ ಎಂದ ಲಕ್ಷ್ಮಣ್: ಪ್ರತಾಪ್ ಸಿಂಹಗೆ ಮತ್ತೆ ಆಹ್ವಾನ