ಕೋಲಾರ : ಮೊರಾರ್ಜಿ ದೇಸಾಯಿ (Morarji Desai School) ವಸತಿ ಶಾಲೆ ಶಿಕ್ಷಕನ ಮೊಬೈಲ್‌ನಲ್ಲಿ ಬರೋಬ್ಬರಿ ಐದು ಸಾವಿರ ನಗ್ನ ವಿಡಿಯೊ ಪತ್ತೆಯಾಗಿದೆ. ವಸತಿ ಶಾಲೆಯ ಹೆಣ್ಣು ಮಕ್ಕಳ ಫೋಟೊ ಹಾಗೂ ವಿಡಿಯೋ ಪತ್ತೆಯಾಗಿದ್ದು, ಕರ್ನಾಟಕ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಪೋಕ್ಸೋ ಪ್ರಕರಣದ ಎಫ್.ಐ.ಆರ್. ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾವಾಗಿದೆ.
ರಾಜ್ಯಾದ್ಯಂತ ಹಾಸ್ಟೆಲ್ ಕರ್ಮ ಕಾಂಡ ಪ್ರಕರಣ ಸದ್ದು ಮಾಡಿತ್ತು. ವಸತಿ ಶಾಲೆಯ ಮಕ್ಕಳ ಕೈಯಲ್ಲಿ ಶೌಚಗುಂಡಿ ಶುಚಿಗೊಳಿಸಿದ ಆರೋಪದಲ್ಲಿ ತನಿಖೆ ನಡೆಯುತ್ತಿತ್ತು. ತನಿಖೆ ವೇಳೆ ಶಿಕ್ಷಕ ಮುನಿಯಪ್ಪನ 4 ಮೊಬೈಲ್ ಸೀಜ್ ಮಾಡಿದಾಗ ನಗ್ನ ವಿಡಿಯೋ, ಫೋಟೋ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕ ಮುನಿಯಪ್ಪ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿತ್ತು. 2023 ಡಿಸೆಂಬರ್ 17 ರಂದು ನಡೆದಿದ್ದ ಪ್ರಕರಣದಲ್ಲಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕನಾಗಿರುವ ಮುನಿಯಪ್ಪ ಮಕ್ಕಳಿಗೆ ಚಿತ್ರಹಿಂಸೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.
ಏನಿದು ಘಟನೆ?
ಕೋಲಾರದ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ (Toilet Pit cleaning) ಪ್ರಕರಣ ಹೊರಬಂದಿತ್ತು. ಇದರ ಜತೆಗೆ ಶಾಲೆಯ ಒಂದೊಂದೇ ಹುಳುಕುಗಳು ಗೊತ್ತಾಗತೊಡಗಿತ್ತು. ಶಾಲೆಯ ಶಿಕ್ಷಕರ (School Teacher) ವಿರುದ್ಧ ಮಕ್ಕಳು ಸಿಡಿದೆದ್ದಿದ್ದರು. ವೈಯರ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು. ರಾತ್ರಿ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಶಿಕ್ಷೆ ನೀಡಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇನ್ನು ತಾವು ಬಟ್ಟೆ ಬದಲಾಯಿಸುವಾಗ ಫೋಟೊ ಹಾಗೂ ವಿಡಿಯೊವನ್ನು (Photo and video of changing clothes) ಸೆರೆ ಹಿಡಿಯಲಾಗಿದೆ ಎಂದು ಹೆಣ್ಣು ಮಕ್ಕಳು ಸಮಸ್ಯೆಯ ಗಂಭೀರತೆಯನ್ನು ಬಿಚ್ಚಿಟ್ಟಿದ್ದರು.
ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪೋಷಕರು ಬೇಸರ ವ್ಯಕ್ತಪಡಿಸಿ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದರು. ಈ ಕುರಿತ ವಿಡಿಯೊ ಹಾಗೂ ಫೊಟೊ ಎಲ್ಲೆಡೆ ಹರಿದಾಡಿ ವಿರೋಧ ವ್ಯಕ್ತಗೊಂಡಿತ್ತು. ದೂರು ನೀಡಿದ ಬಳಿಕ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: Manual Scavenging: ಯಲವಳ್ಳಿ ಮೊರಾರ್ಜಿ ವಸತಿ ಶಾಲೆ ಲಾಕರ್ ಒಡೆದ ಅಧಿಕಾರಿಗಳು!
ಚಿಕ್ಕಮಗಳೂರಿನಲ್ಲಿ ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ
ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿ ಬಂದಿದೆ. ಚಿಕ್ಕಮಗಳೂರಿನ ಕೊಪ್ಪ ಪಿ.ಎಸ್.ಐ.ಬಸವರಾಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕೊಪ್ಪ ಡಿವೈಎಸ್ಪಿ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಯುತ್ತಿದ್ದು, ಐವರು ಮಹಿಳಾ ಸಿಬ್ಬಂದಿಯಿಂದ ಡಿವೈಎಸ್ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮಹಿಳಾ ಸಿಬ್ಬಂದಿ ಪಿಎಸ್ಐ ಬಸವರಾಜುರಿಂದ ಬೇಸತ್ತಿದ್ದಾರೆ. ಕಳೆದ 2 ದಿನಗಳ ಹಿಂದೆ ಮಹಿಳಾ ಪೇದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಸಹ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಸದ್ಯ ಮೇಲಾಧಿಕಾರಿಗಳಿಂದ ಡೆತ್ ನೋಟ್ ನಾಶಪಡಿಸಿರುವ ಆರೋಪವೂ ಕೇಳಿ ಬಂದಿದೆ. ಈ ಹಿಂದೆ ಕೆಲಸ ಮಾಡಿದ್ದ ಹಲವು ಠಾಣೆಗಳಲ್ಲೂ ಬಸವರಾಜ್ ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ