ಕೋಲಾರ/ಕೊಪ್ಪಳ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿರುವ ಬೆನ್ನಿಗೇ ಇದು ಕೇವಲ ಚುನಾವಣೆ ಗಿಮಿಕ್ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಕೋಲಾರದಲ್ಲಿ ದಿನಪೂರ್ತಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಸಿದ್ದರಾಮಯ್ಯ, ಅಲ್ಲಿನ ಕೋಲಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಭಾರತೀಯ ಮೆಥಡಿಸ್ಟ್ ಚರ್ಚ್‌ಗೆ ಭೇಟಿ ನೀಡಿದರು. ಅಲ್ಲಿನ ಪಾದ್ರಿಗಳು, ಸಿದ್ದರಾಮಯ್ಯ ಸಿಎಂ ಆಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ಈಗಿನ ರೀತಿಯಲ್ಲೇ ಮುಂದೆ ನಾಮಿನೇಷನ್ ಫೈಲ್ ಮಾಡಲು ಬಂದಾಗಲೂ ಬೆಂಬಲ ನೀಡಬೇಕು ಎಂದರು. ಅಲ್ಲಿಗೆ ಕೋಲಾರದಿಂದಲೇ ತಮ್ಮ ಸ್ಪರ್ಧೆ ಎನ್ನುವುದನ್ನು ಘೋಷಣೆ ಮಾಡಿದರು.
ಆದರೆ ಈ ಕುರಿತು ಕಾಂಗ್ರೆಸ್ ನಾಯಕ ಸುದರ್ಶನ್ ಅವರು ಪ್ರತಿಕ್ರಿಯಿಸಿ, ಅವರು ರಾಜ್ಯ ಮಟ್ಟದ ನಾಯಕರಾಗಿ ವಿವಿಧೆಡೆ ನಾಮನಿರ್ದೇಶನಕ್ಕೆ ತೆರಳಬೇಕಾಗುತ್ತದೆ. ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಅನೇಕ ಕ್ಷೇತ್ರಗಳಿಗೆ ತೆರಳುತ್ತಾರೆ. ಅದರಂತೆಯೇ ಕೋಲಾರಕ್ಕೂ ಆಗಮಿಸುತ್ತಾರೆ. ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುವುದರ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ಕೊಪ್ಪಳದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು, ಇದೆಲ್ಲ ಚುನಾವಣೆ ಗಿಮಿಕ್ ಎಂದಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಸಿದ್ದರಾಮಯ್ಯ ಈ ತಂತ್ರ ರೂಪಿಸಿದ್ದಾರೆ. ಅವರು ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ ಎನ್ನುವುದು ಖಚಿತ. ಈ ಮೂಲಕ, ತಮಗೆ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನತೆಗೆ ದ್ರೋಹ ಮಾಡಿದ್ದಾರೆ. ಈ ದ್ರೋಹವನ್ನು ಬಾದಾಮಿ ಜನತೆ ಎಂದಿಗೂ ಕ್ಷಮಿಸುವುದಿಲ್ಲ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಘೊಷಣೆ ಮಾಡಿವುದು ಕೇವಲ ಚುನಾವಣೆ ಗಿಮಿಕ್. ಅವರು ಅಂತಿಮವಾಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆ. ಆದರೆ ಅಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಯಾರೂ ಊಹಿಸಲಾಗದ ಅಭ್ಯರ್ಥಿಯನ್ನು ಅಲ್ಲಿ ಕಣಕ್ಕಿಳಿಸುತ್ತೇವೆ, ಅಲ್ಲಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ ಎಂದರು.
ಇದನ್ನೂ ಓದಿ | Election 2023 | ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಮಾಜಿ ಸಿಎಂ ಘೋಷಣೆ