ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದ ಕ್ಷೇತ್ರಗಳೆಂದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಮೈಸೂರಿನ ಚಾಮುಂಡೇಶ್ವರಿ. ಈ ಎರಡೂ ಕ್ಷೇತ್ರಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಇನ್ನೇನು ಸಿದ್ದರಾಮಯ್ಯ ಎರಡೂ ಕಡೆ ಸೋತು ರಾಜಕೀಯ ಜೀವನ ಮುಗಿಸಿದರು ಎನ್ನುವಷ್ಟರಲ್ಲೆ ಕೇವಲ 1,696 ಮತಗಳ ಅಂತರದಲ್ಲಿ ಗೆದ್ದು ಮರುಜೀವ ಪಡೆದರು. ಈ ಕುರಿತು, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ವತಃ ಶ್ರೀರಾಮುಲು ಆಡಿರುವ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಶ್ರೀರಾಮುಲು ಹೇಳಿರುವ ಮಾತುಗಳು ಈಗ ಚರ್ಚೆಗೀಡಾಗಿವೆ. ಈ ಸಭೆಯಲ್ಲಿ ಮಾತನಾಡಿದ ಶ್ರೀರಾಮುಲು, ಬಾದಾಮಿ ಕ್ಷೇತ್ರದಲ್ಲಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿದ್ದೆ. ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಅವರು ಒಂದು ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದರು, ನಾನು ಬಾದಾಮಿಯಲ್ಲಿ ಸೋತು ಮೊಳಕಾಲ್ಮೂರಿನಲ್ಲಿ ಗೆದ್ದೆ. ಒಟ್ಟಿನಲ್ಲಿ ಇಬ್ಬರೂ ವಿಧಾನಸಭೆ ಪ್ರವೇಶ ಮಾಡಿದೆವು.
ಹಿಂದುಗಳಿದ ವರ್ಗಗಳ ಎಲ್ಲರೂ ಮುಂದೆ ಬರಬೇಕು. ರಾಜಕೀಯದಲ್ಲಿ ನಾವು ಗುದ್ದಾಡುತ್ತೇವೆ. ಆದರೆ ಒಳಗೆ ಇಂಥದ್ದೆಲ್ಲ ನಡೆದಿರುತ್ತವೆ. ಹೀಗೆ ಇಬ್ಬರೂ ಗೆಲ್ಲಬೇಕು ಎಂದರೆ ಹಿಂದೆ ಏನೆಲ್ಲ ನಡೆದಿರಬಹುದು ನೀವೇ ಯೋಚಿಸಿ ಎಂದಿದ್ದಾರೆ. ಜತೆಗೆ, ಈ ಮಾತಿನಲ್ಲಿ ಮುಚ್ಚುಮರೆ ಏನೂ ಇಲ್ಲ. ನಾನು ಸ್ಪಷ್ಟವಾಗಿಯೇ ಹೇಳುತ್ತೇನೆ. ನಾನು ಯಾರಿಗೂ ಗುಲಾಮನಾಗಿಲ್ಲ ಎಂದೂ ತಿಳಿಸಿದ್ದಾರೆ.
2018ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಡೆದಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವುದು ಖಚಿತ ಎಂದು ನಂಬಿದ್ದ ಸಿದ್ದರಾಮಯ್ಯ, ಬಾದಾಮಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಅಲ್ಲಿಯೂ ಸೋಲುಂಡರು ಎಂದೇ ತಿಳಿಯಲಾಗಿತ್ತಾದರೂ ಅಂತಿಮ ಹಂತದಲ್ಲಿ ಕೇವಲ 1,696 ಮತಗಳ ಅಂತರದಲ್ಲಿ ಜಯಿಸಿದರು. ಇದು ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಹಾಗೂ ರಾಜ್ಯ ರಾಜಕೀಯದಲ್ಲಿ ಮರುಜೀವ ಪಡೆದಿತ್ತು.
ಎರಡು ದಿನ ಶ್ರೀರಾಮುಲು ಎಲ್ಲಿ ಹೋಗಿದ್ದರು?
ಬಾದಾಮಿ ಕ್ಷೇತ್ರದಲ್ಲಿ ತಾವು ಸೋಲಲು ಪ್ರತಿಪಕ್ಷಗಳಿಗಿಂತಲೂ ಬಿಜೆಪಿಯವರೇ ಕಾರಣ ಎಂದು 2021ರಲ್ಲಿ ಮೊಳಕಾಲ್ಮೂರಿನ ಕಾರ್ಯಕ್ರಮವೊಂದರಲ್ಲಿ ಶ್ರೀರಾಮುಲು ಹೇಳಿದ್ದರು. ಬೇಡರ ಕುಲದವನು ಗೆದ್ದು ಮುಂದೆ ಬರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದರು ಎಂದು ಆರೋಪ ಮಾಡಿದ್ದರು.
ಈ ಸಮಯದಲ್ಲೇ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆದಿದ್ದವು. ಅಸಲಿಗೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಶ್ರೀರಾಮುಲು ಅವರಿಗೆ ಇಷ್ಟ ಇರಲಿಲ್ಲ. ಕುರುಬ ಸಮುದಾಯದ ಮುಖಂಡನನ್ನು ಸೋಲಿಸಿ ಮನೆಗೆ ಕಳಿಸಿದ ಶಾಶ್ವತ ಕಳಂಕ ಅಂಟಿಕೊಳ್ಳುತ್ತದೆ. ತಮ್ಮ ಕ್ಷೇತ್ರದಲ್ಲಿ ಹಾಗೂ ಒಟ್ಟಾರೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿರುವ ಕುರುಬ ಸಮುದಾಯ ಇದರಿಂದ ಸಿಟ್ಟಾಗುತ್ತದೆ ಎಂದು ಭಾವಿಸಿದ್ದರು.
ಪ್ರಾರಂಭದಲ್ಲಿ ಭರ್ಜರಿ ಪ್ರಚಾರ ನಡೆಸಿದ ಶ್ರೀರಾಮುಲು, ಚುನಾವಣೆಗೆ ಎರಡು ದಿನ ಇರುವಂತೆ ಬಾದಾಮಿಯತ್ತ ಆಗಮಿಸಲೇ ಇಲ್ಲ. ಮೊಳಕಾಲ್ಮೂರಿನಲ್ಲೇ ಉಳಿದಿದ್ದರಿಂದಾಗಿ, ಬಾದಾಮಿಯಲ್ಲಿ ಅಂತಿಮ ಕ್ಷಣದ ಮತಗಳಿಕೆಗೆ ಹಿನ್ನಡೆ ಆಗಿತ್ತು. ಇನ್ನೂ ಏಳೆಂಟು ಸಾವಿರ ಮತಗಳು ಬರಬೇಕಿತ್ತು, ಆದರೆ ಶ್ರೀರಾಮುಲು ಇತ್ತ ಆಗಮಿಸದೇ ಇದ್ದದ್ದರಿಂದ ಹಿನ್ನಡೆ ಆಯಿತು ಎಂದು ಪಕ್ಷದ ಒಳಗೆ ಚರ್ಚೆಗಳು ನಡೆದಿದ್ದವು. ಇದೀಗ ಶ್ರೀರಾಮುಲು ಆಡಿರುವ ಮಾತುಗಳು, ಪಕ್ಷದಲ್ಲಿ ನಡೆದ ಚರ್ಚೆಗೆ ಪೂರಕವಾಗಿವೆ. ರಾಜಕಾರಣದಲ್ಲಿ ಒಳ ಒಪ್ಪಂದಗಳು ಯಾವ್ಯಾವ ರೀತಿ ನಡೆಯುತ್ತವೆ ಎಂಬುದಕ್ಕೆ ಇದರಿಂದ ಪುರಾವೆ ಸಿಕ್ಕಿವೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುತ್ತೇನೆ: ಸಚಿವ ಶ್ರೀರಾಮುಲು ಹೇಳಿಕೆ