ಬೆಂಗಳೂರು: ಪಿಎಸ್‌ಐ ಹಗರಣದಲ್ಲಿ ಅಭ್ಯರ್ಥಿಯೊಬ್ಬರಿಗೆ ನೌಕರಿ ಕೊಡಿಸಲು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು 15 ಲಕ್ಷ ರೂ. ಪಡೆದಿದ್ದಾರೆ ಎಂಬ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪರಸಪ್ಪ, ತಾವು ಶಾಸಕರಿಗೆ ಕೊಟ್ಟಿದ್ದು ಹಣವಲ್ಲ ಸೀಬೆ ಹಣ್ಣು ಎಂದಿದ್ದಾರೆ. ಒಟ್ಟಾರೆ ಪಿಎಸ್‌ಐ ಹಗರಣದ ಕುರಿತು ಮಾತನಾಡೇ ಇಲ್ಲ, ಇದ್ದಿದ್ದು ಜಮೀನು ವ್ಯಾಜ್ಯ ಎಂದೂ ತಿಳಿಸಿದ್ದಾರೆ.
ಶಾಸಕ ದಡೇಸೂಗೂರು ಅವರೊಂದಿಗೆ ಪರಸಪ್ಪ ಮಾತನಾಡುವ ಆಡಿಯೊ ವೈರಲ್ ಆಗಿತ್ತು. ಪಿಎಸ್‌ಐ ನೇಮಕಾತಿಗೆ 15 ಲಕ್ಷ ರೂ. ನೀಡಿದ್ದೆವಲ್ಲ ಅದನ್ನು ವಾಪಸ್ ನೀಡಿ ಎಂದು ಆಡಿಯೊ ಆರಂಭವಾಗಿತ್ತು. ಈ ಆಡಿಯೊದಲ್ಲಿ ತಾವೇ ಮಾತನಾಡಿರುವುದು ಎಂದು ದಡೇಸೂಗೂರು ಕೂಡ ಒಪ್ಪಿದ್ದರು. ಆದರೆ ಇದೀಗ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಪರಸಪ್ಪ, ತಮ್ಮ ಹಾಗೂ ಶಾಸಕರ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ | ಇಂದಿನಿಂದ ಸದನ ಮಳೆಗಾಲದ ಅಧಿವೇಶನ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಪಕ್ಷ ಸಜ್ಜು
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿ ಮಾತನಾಡುವ ವೇಳೆ ಶಾಸಕರು, ಅವರ ಸಂಬಂಧಿಕರಾದ ಆನಂದಪ್ಪ ಇದ್ದರು. ಅವರ ಮತ್ತು ನಮ್ಮ ನಡುವೆ ಜಮೀನಿನ ವ್ಯವಹಾರವಿತ್ತು. ಇದರ ಬಗ್ಗೆ ಮಾತನಾಡಲು ನಾವು ಶಾಸಕರ ಬಳಿ ಹೋಗಿದ್ದೆವು. ಆಗ ನಮ್ಮನ್ನು ಕೂರಿಸಿ ಶಾಸಕರು ಮಾತುಕತೆ ನಡೆಸಿದ್ದರು. ಆದರೆ ಈ ವಿಚಾರವನ್ನು ಪಿಎಸ್‌ಐ ಹಗರಣ ಎಂದು ಆಡಿಯೊ, ವೀಡಿಯೊ ತಿರುಚಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ ಎಂದರು.
ಹಗರಣದಲ್ಲಿ ಶಾಸಕರಿಗೆ ಬ್ಯಾಗ್‌ನಲ್ಲಿ ಪರಸಪ್ಪ ಹಣ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿ ಫೋಟೊ ಬಿಡುಗಡೆ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಪರಸಪ್ಪ, ಬ್ಯಾಗಲ್ಲಿ ನಾವು ಪೇರಳೆ(ಸೀಬೆ) ಹಣ್ಣು ಕೊಟ್ಟಿದ್ದೆವು. ಹಣ್ಣು ಇದ್ದ ಬ್ಯಾಗ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದೆವು. 10-12 ಲಕ್ಷ ರೂ. ಮೌಲ್ಯದ ಗದ್ದೆ ವಿಚಾರಕ್ಕೆ ಆಗಿದ್ದ ಗಲಾಟೆಯನ್ನು ನಾವೆಲ್ಲರೂ ಸಂಬಂಧಿಕರು ಬಗೆಹರಿಸಿಕೊಂಡಿದ್ದೆವು. ಈ ಸಮಯದಲ್ಲಿ ಶಾಸಕರು ಏರುಧ್ವನಿಯಲ್ಲಿ ಮಾತನಾಡಿದ್ದರು ಎಂದಿದ್ದಾರೆ.
ಆಡಿಯೊ ಹಾಗೂ ವಿಡಿಯೊವನ್ನು ತಿರುಚಲಾಗಿದೆ ಎಂದಿರುವ ಪರಸಪ್ಪ, ಈ ಕುರಿತು ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗುತ್ತದೆ. ಈ ವಿಚಾರದಿಂದ ನಮ್ಮ ಮಾನಹಾನಿಯಾಗಿದೆ. ವಿರೋಧಪಕ್ಷದವರು ನಮ್ಮಂಥಹ ಬಡಪಾಯಿಗಳನ್ನು ಬಳಸಿಕೊಂಡು ರಾಜಕೀಯ ಮಾಡಬಾರದು. ಮಂಪರು ಪರೀಕ್ಷಗೂ ನಾನು ಸಿದ್ಧನಿದ್ದೇನೆ ಎಂದರು.
ಇದನ್ನೂ ಓದಿ | PSI Scam | ಶಾಸಕ ದಡೇಸುಗೂರು ವಿರುದ್ಧ ವಿಡಿಯೊ ಬಾಂಬ್ ಸಿಡಿಸಿದ ಕಾಂಗ್ರೆಸ್, ನಾಳೆ ಸ್ಫೋಟವಾಗುತ್ತೆ ಎಂದ ಪ್ರಿಯಾಂಕ ಖರ್ಗೆ