Site icon Vistara News

Independence Day | ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಡಿ.ಕೆ. ಶಿವಕುಮಾರ್‌

DK Shivakumar freedom march 1

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಫ್ರೀಡಂ ಮಾರ್ಚ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಮಾಜಿ ಪ್ರಧಾನಿ ನೆಹರೂ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮೆಜೆಸ್ಟಿಕ್‌ ಬಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ನಡೆದ ರ‍್ಯಾಲಿಯ ನಂತರ ಕಾರ್ಯಕ್ರಮದಲ್ಲಿ ಅಂತಿಮವಾಗಿ ಮಾತನಾಡಿದರು.

ಭಾಷಣದ ಪ್ರಾರಂಭದಲ್ಲಿ, ಈ ರ‍್ಯಾಲಿಗೆ ಸಹಕರಿಸಿದ ಎಲ್ಲ ಕಾರ್ಯಕರ್ತರು, ನಾಯಕರಿಗೆ ಶಿವಕುಮಾರ್‌ ಧನ್ಯವಾದ ಸಲ್ಲಿಸಿದರು. ಇವತ್ತು ನಡಿಗೆಯಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಶಕ್ತಿ ನೀಡಿದ್ದೀರಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲರಿಗೂ ಸಮರ್ಪಣೆ ಮಾಡಿದ್ದೀರಿ. ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜನೆಯಾಗಿದೆ. ನಮ್ಮ ಹುಟ್ಟು ಸಾವಿನ ನಡುವಿನ ಅಲ್ಪ ಕಾಲದಲ್ಲಿ ನಾವು ರಾಷ್ಟ್ರ ಧ್ವಜವನ್ನು ಹಿಡಿದು ನಡೆದಿದ್ದೇವೆ ಎನ್ನುವುದು ನಮಗೆಲ್ಲರಿಗೂ ಸಂತಸದ ವಿಚಾರ ಎಂದರು.

ಮಾತು ಮುಂದುವರಿಸಿದ ಡಿ.ಕೆ. ಶಿವಕುಮಾರ್‌, ಈ ದೇಶದಲ್ಲಿ ಏನು ನಡೆಯುತ್ತಿದೆ ತಿಳಿಯುತ್ತಿಲ್ಲ. ದೇಶದ ಜನರಿಗೆ ಆದಾಯ ಡಬಲ್‌ ಆಗಲಿಲ್ಲ. ಆದರೆ ಬೆಲೆ ಗಗನಕ್ಕೆ ಹೋಯಿತು, ಆದಾಯ ಪಾತಾಳಕ್ಕೆ ಹೋಯಿತು ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ರಾಜ್ಯ ಸರ್ಕಾರ ಜಾಹೀರಾತಿನಲ್ಲಿ ದೇಶದ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿದ್ದರ ಕುರಿತು ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್‌, ಈ ದೇಶದ ಚರಿತ್ರೆಯನ್ನು ಬದಲಾಯಿಸಲು ಕೆಲವರು ಮುಂದಾಗಿದ್ದಾರೆ. ಈ ದೇಶದ ಚರಿತ್ರೆಯನ್ನು ಯಾರಿಂದಲೂ ಬದಲಾವಣೆ ಮಾಡಲಾಗುವುದಿಲ್ಲ. ನೆಹರೂ ಅವರನ್ನೇ ಈ ದೇಶದ ಚರಿತ್ರೆಯಿಂದ ತೆಗೆದುಹಾಕಲು ಮುಂದಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಇದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದರು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ನೆಹರೂ ಅವರನ್ನು ನೆನಪಿಸಿಕೊಂಡಿದ್ದಾರೆ, ಅವರಿಗೊಂದು ನಮಸ್ಕಾರ ಹೇಳುತ್ತೇನೆ ಎಂದರು.

ನೆಹರೂ ಅವರ ಕುಟುಂಬದ ತ್ಯಾಗ, ಬಲಿದಾನವನ್ನು ನಾವು ಮರೆಯಬಾರದು. ಪಿ.ವಿ. ನರಸಿಂಹರಾವ್‌ ಅವರ ಸಮಯದಲ್ಲೇ ಸೋನಿಯಾ ಗಾಂಧಿಯವರು ಪ್ರಧಾನಿ ಆಗಬಹುದಾಗಿತ್ತು, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲೂ ಅವರು, ರಾಹುಲ್‌ ಗಾಂಧಿ ಪ್ರಧಾನಿ ಆಗಬಹುದಾಗಿತ್ತು. ಆದರೆ ಅವರು ತ್ಯಾಗ ಮಾಡಿದರು. ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಹತ್ಯೆಯಾಗಿದ್ದನ್ನು ಮರೆಯಲು ಸಾಧ್ಯವೇ? ನಾನು ಬೇರೆ ರಾಜಕಾರಣ ಮಾತನಾಡಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ಕಾಂಗ್ರೆಸ್‌ ಪಕ್ಷದ ನಾಯಕತ್ವದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ | ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್‌ ಮಾಡಿದರೂ ವೇಸ್ಟ್‌: ಡಾ. ಸಿ.ಎನ್‌. ಅಶ್ವತ್ಥನಾರಾಯಣ

Exit mobile version