ಮತ್ತೀಕೆರೆ ಜಯರಾಮ್, ಮಂಡ್ಯ
ಕ್ಷೇತ್ರದ ಹೆಸರಿನೊಂದಿಗೇ ರಾಜ್ಯಾದ್ಯಂತ ಪ್ರಸಿದ್ಧರಾಗಿದ್ದ ಕೆ.ಆರ್. ಪೇಟೆ ಕೃಷ್ಣ ಅವರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಈಗ ಕೆ.ಸಿ. ನಾರಾಯಣಗೌಡರದ್ದೇ ಹವಾ. ಇಡೀ ರಾಜ್ಯದಲ್ಲಿ, ಒಮ್ಮೆಯೂ ಬಿಜೆಪಿ ಶಾಸಕ ಜಯಗಳಿಸಿಲ್ಲ ಎಂಬ ಜಿಲ್ಲೆಯಾಗಿದ್ದ ಮಂಡ್ಯದಲ್ಲಿ 2019ರಲ್ಲಿ ಖಾತೆ ತೆರೆಯುವ ಮೂಲಕ ದಾಖಲೆ ನಿರ್ಮಿಸಿದವರು ನಾರಾಯಣಗೌಡ.
ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಸಂಘಟನೆಯನ್ನು ಕಟ್ಟಲು ಪ್ರಯತ್ನಿಸುತ್ತಿರುವ ನಾರಾಯಣಗೌಡ ಅವರಿಗೆ ರಾಜ್ಯ ಸರ್ಕಾರ ಹಾಗೂ ಬಿಜೆಪಿಯಿಂದಲೂ ಭರ್ಜರಿ ಬೆಂಬಲ ದೊರಕುತ್ತಿದೆ. ಆದರೆ ನಾರಾಯಣಗೌಡರು ವೇಗವನ್ನು ನಿಯಂತ್ರಿಸಲು ಪ್ರತಿಪಕ್ಷಗಳ ಬಲ ಸಾಕೇ ಎಂಬುದು ಪ್ರಶ್ನೆ.
ಕ್ಷೇತ್ರ ಪರಿಚಯ
ಹಾಸನ ಜಿಲ್ಲೆಗೆ ಹೊಂದಿಕೊಂಡಿರುವ ಕೆ.ಆರ್.ಪೇಟೆ (ಕೃಷ್ಣರಾಜಪೇಟೆ) ತಾಲೂಕು ಒಂದು ವಿಧಾನಸಭಾ ಕ್ಷೇತ್ರ. ಕೆ.ಆರ್. ಪೇಟೆಯು ಮರುವಿಂಗಡಣೆ ವೇಳೆ, ನೆರೆಯ ಪಾಂಡವಪುರಕ್ಕಿದ್ದ ತನ್ನದೇ ತಾಲೂಕಿನ ಶೀಳನೆರೆ ಹೋಬಳಿಯನ್ನು ಮರಳಿ ಪಡೆದುಕೊಂಡಿದೆ. ಹೇಮಗಿರಿ ಫಾಲ್ಸ್ ಮತ್ತು ರಾಜ್ಯದಲ್ಲೇ ಹೆಸರಾದ ರಾಸುಗಳ ಜಾತ್ರೆ, ಹೊಸಹೊಳಲು ಮತ್ತು ಕಲ್ಲಹಳ್ಳಿ ದೇಗುಲಗಳು ಇಲ್ಲಿವೆ. ಈ ಕ್ಷೇತ್ರದಲ್ಲಿ ಹೇಮಾವತಿ ನದಿ ಹರಿಯುತ್ತದೆ. ಕೆ.ಆರ್. ಪೇಟೆಯು ಕೆಆರ್‌ಎಸ್ ಹಿನ್ನೀರಿನ ಪ್ರದೇಶದವರೆಗೆ ಚಾಚಿಕೊಂಡಿದೆ. ಶಿಕಾರಿಪುರದಲ್ಲಿ ರಾಜಕೀಯ ನೆಲೆ ಕಂಡುಕೊಂಡು, ಮೂರು ಬಾರಿ ರಾಜ್ಯದ ಮುಖ್ಯಮಂತ್ರಿ ಆದ ಬಿ.ಎಸ್.ಯಡಿಯೂರಪ್ಪ ಅವರೂ ಮೂಲತಃ ಕೆ.ಆರ್. ಪೇಟೆಯವರು. ಇಲ್ಲಿನ ಬೂಕನಕೆರೆ ಅವರ ಹುಟ್ಟೂರು. ವಿಧಾನಸಭೆ ಮಾಜಿ ಸ್ಪೀಕರ್, ಮಾಜಿ ಸಂಸದ, ಮಂಡ್ಯದ ಗಾಂಧಿ ಎಂದೇ ಹೆಸರಾದ ಕೃಷ್ಣ ಅವರು ಮೂರು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದರು.
ಚುನಾವಣಾ ಹಿನ್ನೋಟ
2004ರ ಚುನಾವಣೆಯಲ್ಲಿ ಜನತಾ ಪರಿವಾರದ ಹಿರಿಯ ನಾಯಕರಲ್ಲಿ ಒಬ್ಬರಾದ ಕೃಷ್ಣ (ಕೆ.ಆರ್. ಪೇಟೆ ಕೃಷ್ಣ) ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಅವರೆದುರು ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ಬಿ. ಚಂದ್ರಶೇಖರ್ ಸ್ಪರ್ಧಿಸಿದ್ದರು. ಕೃಷ್ಣ ಜಯಶೀಲರಾದರು. ಆಗ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ವಿಧಾನಸಭೆ ಸ್ಪೀಕರ್ ಹುದ್ದೆಗೇರಿದರು.
2008ರ ಚುನಾವಣೆಯಲ್ಲಿ ಕೃಷ್ಣ ಸೋಲು ಕಂಡರು. ಅವರೆದುರು ಕೆ.ಬಿ. ಚಂದ್ರಶೇಖರ್ ಗೆಲುವು ಸಾಧಿಸಿದರು. ರಾಜ್ಯದಲ್ಲಿ ಈಗ ಸಚಿವರಾಗಿರುವ ಕೆ.ಸಿ. ನಾರಾಯಣಗೌಡ ಆಗಿನ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷದಿಂದ ಸ್ಪರ್ಧೆ ಮಾಡಿ, ಠೇವಣಿ ಕಳೆದುಕೊಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಬಿ. ಪ್ರಕಾಶ್ ಗಣನೀಯ ಮತಗಳನ್ನು ಪಡೆದುಕೊಂಡು, ತಮ್ಮ ಮತಬ್ಯಾಂಕ್ ಮೇಲೆ ಹಿಡಿತ ಸಾಧಿಸಿದ್ದರು.
2013ರ ಚುನಾವಣೆ ವೇಳೆಗೆ ಕೆ.ಆರ್. ಪೇಟೆ ರಾಜಕಾರಣದ ಚಿತ್ರಣದಲ್ಲಿ ಬದಲಾವಣೆ ಕಂಡಿತು. ಬಿಜೆಪಿ ಜತೆಗೂಡಿ ಸಮ್ಮಿಶ್ರ ಸರ್ಕಾರ ಮಾಡಿದ ಕಾರಣಕ್ಕೆ ಅನರ್ಹತೆ ಭೀತಿಯಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಸಹಿತ 37 ಶಾಸಕರ ತಲೆಯನ್ನು ಸ್ಪೀಕರ್ ಆಗಿದ್ದುಕೊಂಡು ಕೃಷ್ಣ ಕಾಯ್ದಿದ್ದರು. ಆದರೆ, ಈ ಚುನಾವಣೆಯಲ್ಲಿ ಕೃಷ್ಣರ ನಿಷ್ಠೆಗೆ ದಳಪತಿಗಳು ಮನ್ನಣೆ ನೀಡಲಿಲ್ಲ. ಮುಂಬೈನಲ್ಲಿ ಉದ್ಯಮಿಯಾಗಿದ್ದುಕೊಂಡು ಸ್ವಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದ ಕೆ.ಸಿ. ನಾರಾಯಣಗೌಡ ಅವರು ಜೆಡಿಎಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದರು. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಬಲಿಯಾದ ಕೃಷ್ಣ, ಬಂಡಾಯ ಅಭ್ಯರ್ಥಿಯಾದರು. ಕಾಂಗ್ರೆಸ್‌ನಿಂದ ಕೆ.ಬಿ.ಚಂದ್ರಶೇಖರ್ ಪುನಃ ಸ್ಪರ್ಧೆ ಮಾಡಿದರು. ತ್ರಿಕೋನ ಸ್ಪರ್ಧೆಯಲ್ಲಿ ಕೆ.ಸಿ.ನಾರಾಯಣಗೌಡ ಗೆಲುವು ಸಾಧಿಸಿದರು.
2018ರ ವೇಳೆಗೆ ಕೆ.ಸಿ. ನಾರಾಯಣಗೌಡರ ಬಗ್ಗೆ ದೇವೇಗೌಡರ ಕುಟುಂಬದಲ್ಲಿ ಭಿನ್ನರಾಗ ಮೂಡಿತು. ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಗೌಡರಿಗೆ ಬಿ ಫಾರಂ ನೀಡಿದರು. ದೇವೇಗೌಡರ ಕುಟುಂಬದಿಂದ ಬಿ.ಎಲ್. ದೇವರಾಜು ಅವರಿಗೆ ಮತ್ತೊಂದು ಬಿ ಫಾರಂ ಹೋಯಿತು. ಇಬ್ಬರಿಗೂ ಸಿ ಫಾರಂ ದೊರೆತಿತ್ತು. ಅಂತಿಮವಾಗಿ ಕೆ.ಸಿ. ನಾರಾಯಣಗೌಡ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರೆ, ದೇವರಾಜು ಹಿಂದೆ ಸರಿದರು. ಕಾಂಗ್ರೆಸ್‌ನಿಂದ ಕೆ.ಬಿ. ಚಂದ್ರಶೇಖರ್ ತಮ್ಮ ಬತ್ತಳಿಕೆಯಲ್ಲಿದ್ದ ಅಸ್ತ್ರಗಳನ್ನೆಲ್ಲಾ ಹೂಡಿದರಾದರೂ ನಾರಾಯಣಗೌಡ ಗೆಲುವಿನ ನಗೆ ಬೀರಿದರು. ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಬಂದಿತು. ಕೆಲವೇ ದಿನಗಳಲ್ಲಿ ದೇವೇಗೌಡರ ಕುಟುಂಬದೊಂದಿಗೆ ನಾರಾಯಣಗೌಡ ಸಂಬಂಧ ಮತ್ತಷ್ಟು ಉಲ್ಬಣಿಸಿತು. ಬಿಜೆಪಿಯಲ್ಲಿ ದಾರಿ ಹುಡುಕಿ ಹೊರಟರು.
2019ರಲ್ಲಿ ಉಪ ಚುನಾವಣೆ ನಡೆದಾಗ ನಾರಾಯಣಗೌಡ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾಗ ಬಿ.ವೈ.ವಿಜಯೇಂದ್ರ ಕೆ.ಆರ್. ಪೇಟೆಯಲ್ಲೆ ಠಿಕಾಣಿ ಹೂಡಿ, ಗೆಲ್ಲಿಸಿಕೊಂಡರು. ಜೆಡಿಎಸ್‌ನ ಬಿ.ಎಲ್. ದೇವರಾಜು ಪ್ರಬಲ ಸ್ಪರ್ಧೆ ಒಡ್ಡಿದರು. ಕೆ.ಬಿ.ಚಂದ್ರಶೇಖರ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟು, ಹ್ಯಾಟ್ರಿಕ್ ಸೋಲನುಭವಿಸಿದರು.
2023ರ ಮುಖಾಮುಖಿ
2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಕೆ.ಸಿ. ನಾರಾಯಣಗೌಡ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಮುಂಬೈ ಟೀಂ ಸೇರಿಕೊಂಡರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು, ರಾಜಕೀಯ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿಸಿ ಹುಬ್ಬೇರುವಂತೆ ಮಾಡಿದ್ದರು. ಬಳಿಕ ಸಚಿವರಾಗಿ ಮಂಡ್ಯದಿಂದ ಶಿವಮೊಗ್ಗಕ್ಕೆ ಜಿಲ್ಲಾ ಉಸ್ತುವಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರೂ ನಾರಾಯಣಗೌಡರು ಕಾಂಗ್ರೆಸ್ ಜತೆ ಒಳ ಒಪ್ಪಂದದ ರಾಜಕಾರಣ ಮುಂದುವರಿಸಿಕೊಂಡು ಬಂದಿದ್ದಾರೆ, ಮುಂಬರುವ ಚುನಾವಣೆಗೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎನ್ನುವ ಊಹಾಪೋಹವಿದೆ. ಆದರೆ ಈ ವಾದವನ್ನು ನಾರಾಯಣಗೌಡ ಅಲ್ಲಗಳೆದಿದ್ದಾರೆ.
ಜುಲೈ 21ರಂದು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕರೆತಂದು ಸಾವಿರಾರು ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದ್ದು ನೋಡಿದರೆ ನಾರಾಯಣಗೌಡರು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವುದು ಖಚಿತ ಎನ್ನಿಸಿದೆ.
ಕಾಂಗ್ರೆಸ್‌ನಿಂದ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ನಡುವೆ ಪೈಪೋಟಿಯಿದೆ. ಕಳೆದ ಉಪ ಚುನಾವಣೆ ವೇಳೆ ಚಂದ್ರಶೇಖರ್ ಇದೇ ಕೊನೆಯ ಅವಕಾಶವೆಂದು ಕೇಳಿಕೊಂಡಿದ್ದರೆನ್ನಲಾಗಿದೆ. ಈಚೆಗೆ ಚಂದ್ರಶೇಖರ್ ಪುತ್ರ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿ, ಜೈಲು ಸೇರಿದ್ದು ಚಂದ್ರಶೇಖರ್‌ಗೆ ಹಿನ್ನಡೆಯಾಗಿದೆ. ಸದ್ಯ ಕಾಂಗ್ರೆಸ್‌ನಲ್ಲಿ ಬಿ. ಪ್ರಕಾಶ್ ಮತ್ತು ಸುರೇಶ್ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಬಲಾಢ್ಯ ಸಂಘಟನೆ ಹೊಂದಿದೆ. ಉಪ ಚುನಾವಣೆಯಲ್ಲಿ ಸೋತಿರುವ ಬಿ.ಎಲ್. ದೇವರಾಜುಗೆ ಆರ್ಥಿಕ ಮುಗ್ಗಟ್ಟು ತೊಡಕಾಗಬಹುದು. ಉದ್ಯಮಿಯೂ ಆಗಿರುವ ಎಚ್.ಟಿ. ಮಂಜು ಹೆಸರೂ ಮುನ್ನೆಲೆಗೆ ಬಂದಿದೆ. ಇಬ್ಬರ ಪೈಕಿ ವರಿಷ್ಠರ ಕೃಪಾಶೀರ್ವಾದ ಯಾರಿಗೆ ಎನ್ನುವುದು ನಿರ್ಧಾರವಾಗಬೇಕಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಿಂದ ಇಲ್ಲಿ ಯಾರಾದರೂ ಸ್ಪರ್ಧಿಸಬಹುದೇ ಎನ್ನುವ ವಿಚಾರವನ್ನೂ ಅಲ್ಲಗಳೆಯುವಂತಿಲ್ಲ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಕೆ.ಸಿ.ನಾರಾಯಣಗೌಡ (ಬಿಜೆಪಿ)
2. ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕಿಕ್ಕೇರಿ ಸುರೇಶ್ (ಕಾಂಗ್ರೆಸ್)
3. ಬಿ.ಎಲ್. ದೇವರಾಜು, ಎಚ್.ಟಿ. ಮಂಜು (ಜೆಡಿಎಸ್)
ಇಸವಿ | ವಿಜೇತ ಅಭ್ಯರ್ಥಿ – ಮತ | ಪರಾಜಿತ ಅಭ್ಯರ್ಥಿ – ಮತ | ಅಂತರ |
2004 | ಕೃಷ್ಣ(ಜೆಡಿಎಸ್) 34,738 | ಕೆ.ಬಿ.ಚಂದ್ರಶೇಖರ (ಕಾಂಗ್ರೆಸ್) 29,234 | 5,504 |
2008 | ಕೆ.ಬಿ.ಚಂದ್ರಶೇಖರ್ (ಕಾಂಗ್ರೆಸ್) 48,556 | ಕೃಷ್ಣ (ಜೆಡಿಎಸ್) 45,500 | 3,056 |
2013 | ಕೆ.ಸಿ.ನಾರಾಯಣಗೌಡ (ಜೆಡಿಎಸ್) 56,784 | 2013 ಕೆ.ಸಿ.ನಾರಾಯಣಗೌಡ (ಜೆಡಿಎಸ್) 56,784 | 9,243 |
2018 | ಕೆ.ಸಿ.ನಾರಾಯಣಗೌಡ (ಜೆಡಿಎಸ್) 88,016 | ಕೆ.ಬಿ.ಚಂದ್ರಶೇಖರ್ (ಕಾಂಗ್ರೆಸ್) 70,897 | 17,119 |
2019 | (ಉಪ ಚುನಾವಣೆ) ಕೆ.ಸಿ.ನಾರಾಯಣಗೌಡ (ಬಿಜೆಪಿ) 66,094 | ಬಿ.ಎಲ್.ದೇವರಾಜು (ಜೆಡಿಎಸ್) 56,63 | 9,731 |
ವಿಧಾನಸಭಾ ಕ್ಷೇತ್ರ | ಒಟ್ಟು ಮತದಾರರು | ಪುರುಷ ಮತದಾರರು | ಮಹಿಳಾ ಮತದಾರರು | ಇತರೆ ಮತದಾರರು |
ಕೆ.ಆರ್.ಪೇಟೆ | 21,1492 | 10,6593 | 10,4890 | 09 |
ಜಾತಿವಾರು ಮತದಾರರ ವಿವರ
ಲಿಂಗಾಯತ | ಮುಸ್ಲಿಂ | ಎಸ್ಸಿ | ಕುರುಬ | ಎಸ್ಟಿ |
18,000 | 12,000 | 33,000 | 12,000 | 4,000 |
ಒಕ್ಕಲಿಗ | ಸವಿತಾ ಸಮಾಜ | ಮಡಿವಾಳ | ಇತರೆ | |
96,000 | 4,000 | 4,000 | 17,000 |