ಮಂಡ್ಯ/ಮೈಸೂರು: ರಾಜ್ಯ ಉತ್ತಮ ಮಳೆಯಿಂದ ಕೃಷ್ಣರಾಜಸಾಗರ (ಕೆಆರ್‌ಎಸ್) ಹಾಗೂ ಕಬಿನಿ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎರಡೂ ಜಲಾಶಯಗಳಿಗೆ (KRS Dam) ಜುಲೈ 29ರಂದು ಸಿಎಂ ಸಿದ್ದರಾಮಯ್ಯ ಅವರು ತೆರಳಿ ಬಾಗಿನ ಅರ್ಪಿಸಲಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ 3ನೇ ಬಾರಿಗೆ ಬಾಗಿನ ಅರ್ಪಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಮಂತ್ರಿಮಂಡಲದ ಅನೇಕರು ಭಾಗಿಯಾಗಲಿದ್ದಾರೆ. ಮೈಸೂರಿನಿಂದ ಕೆಆರ್‌ಎಸ್‌ಗೆ ಸಿಎಂ ತೆರಳಲಿದ್ದು, ಪೂಜೆ ಮುಗಿಸಿ ಮಧ್ಯಾಹ್ನ 1.30ಕ್ಕೆ ನಿರ್ಗಮಿಸಲಿದ್ದಾರೆ. ಕೆಆರ್‌ಎಸ್ ಬಾಗಿನ ಕಾರ್ಯಕ್ರಮ ಮುಗಿದ ನಂತರ ಕಬಿನಿ ಡ್ಯಾಂ ತೆರಳಿ ಬಾಗಿನ ಅರ್ಪಿಸಲಿದ್ದಾರೆ. ಈ ಹಿಂದೆ 2013, 2014ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ್ದರು.
ನಾಳೆ ಮಧ್ಯಾಹ್ನ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಮೈಸೂರು: ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಜುಲೈ 29ರಂದು ಮಧ್ಯಾಹ್ನ ಬಾಗಿನ ಅರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಸಣ್ಣ ನೀರಾವರಿ ಸಚಿವ ಬೋಸರಾಜು, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್, ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ.
ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ
ಕೊಡಗು: ಕೊಡಗು ಜಿಲ್ಲೆಯಾದ್ಯಂತ ವರುಣನ (Karnataka Rain) ಆರ್ಭಟ ಕೊಂಚ ತಗ್ಗಿದೆ. ಮಳೆ ಕಡಿಮೆಯಾದರೂ ಮಳೆಯ ಅನಾಹುತ ನಿಂತಿಲ್ಲ. ಮಾದಪುರ ಟೌನ್ ಸಮೀಪ ಗುಡ್ಡ ಕುಸಿದಿದೆ. ಗುಡ್ಡ ಕುಸಿದ ಜಾಗದಲ್ಲೆ ಭೂಮಿ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಮಡಿಕೇರಿ ಮಾದಪುರ ಸೋಮವಾರಪೇಟೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ. ಗುಡ್ಡ ಕುಸಿದರೆ ಮಡಿಕೇರಿ – ಮಾದಾಪುರ ಸೋಮವಾರಪೇಟೆ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ. ಸದ್ಯ ಆತಂಕದಲ್ಲೇ ವಾಹನ ಸವಾರರು ಓಡಾಡುತ್ತಿದ್ದಾರೆ.
ಉಕ್ಕಿ ಹರಿಯುವ ನೀರಿಗೆ ಜಿಗಿದು ಯುವಕರ ಈಜಾಟ
ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನದಿ ಸೇರಿದಂತೆ ಕಾಲುವೆಗಳಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇತ್ತ ಬಾಲಕರು ಜೀವದ ಹಂಗು ತೊರೆದು, ಕಾಲುವೆಗಳಿಗೆ ಜಿಗಿಯುತ್ತಿದ್ದಾರೆ. ರಕ್ಷಣಾ ಕವಚಗಳು ಇಲ್ಲದೆ ಕಾಲುವೆಗಳಿಗೆ ಮೇಲಿಂದ ಜಿಗಿದು ಆಟವಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಜಲಾಶಯದ ಬಳಿ ಇರುವ ಕಾಲುವೆಗಳಲ್ಲಿ ಜಿಗಿದು ಈಜಾಡುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆ ಆತಂಕದ ಹುಟ್ಟಿಸಿದ ಕಾಳಿಂಗ
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರ ನಡುವೆ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡು ಆತಂಕದ ಹುಟ್ಟಿಸಿತ್ತು. 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಗಿದೆ. ಕಳಸದ ಸಂಸೆ ಗ್ರಾ.ಪಂ ವ್ಯಾಪ್ತಿಯ ಪಾತಿಗುಡ್ಡದಲ್ಲಿ ಘಟನೆ ನಡೆದಿದೆ. ಕಾಳಿಂಗ ಸರ್ಪ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು. ಉರಗತಜ್ಞ ರಿಜ್ವಾನ್ ಹಾಗೂ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ವಿಜಯನಗರದಲ್ಲಿ ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆ
ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆಯಾಗಿದೆ. ವಿಜಯನಗರದ ಕೋದಂಡರಾಮ ದೇಗುಲದ ಅರ್ಧಕ್ಕೆ ನೀರು ಹರಿದು ಬಂದಿದೆ. ಸೀತೆ ಸೆರಗು, ಸುಗ್ರೀವ ಗುಹೆಯ ಬಳಿಯೂ ಜಲಾವೃತಗೊಂಡಿದೆ. ನದಿ ಪಾತ್ರಕ್ಕೆ ತೆರಳದಂತೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಕಳೆದ ಎರಡು ದಿನಗಳ ಹಿಂದೆಯೇ ಸ್ನಾನಘಟ್ಟಗಳು, ಪುರಂದರ ದಾಸರ ಮಂಟಪಗಳು ಮುಳುಗಿದೆ.
ಇದನ್ನೂ ಓದಿ: Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!
ಇತ್ತ ತುಂಗಭದ್ರಾ ನದಿಯ ನೀರು ತುಂಬಿ ಐತಿಹಾಸಿಕ ಮದಲಘಟ್ಟ ಆಂಜನೇಯ ದೇಗುಲದ ಬಳಿ ಹರಿದಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮದಲಘಟ್ಟ ಆಂಜನೇಯ ಸ್ವಾಮಿ ದೇಗುಲದಲ್ಲಿ ಇನ್ನೂ ಸ್ವಲ್ಪ ನೀರು ಹೆಚ್ಚಾದರೆ ಜಲಾವೃತ ಆಗುವ ಸಾಧ್ಯತೆ ಇದೆ.