ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಗೆ ಅಳವಡಿಸಲಾಗಿದ್ದ ಗೇಟ್ ಬದಲಾಯಿಸುತ್ತಿದ್ದು, ಈ ಗೇಟ್‌ಗಳನ್ನು ಮಾರಾಟ ಮಾಡದೇ ಅದರ ನೆನಪಿಗಾಗಿ ಮ್ಯೂಸಿಯಂನಲ್ಲಿ ಇಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಬಾರಿ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂ ಭಾಗಶಃ ತುಂಬಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಂಪೂರ್ಣ ಭರ್ತಿಯಾಗಲಿದೆ. ಇನ್ನು ಕೆಆರ್‌ಎಸ್ ಡ್ಯಾಂನಿಂದ ನೀರು ಪೋಲಾಗುತ್ತಿದ್ದು, ನೀರು ಸೋರಿಕೆಯಾಗದಂತೆ ಗೇಟ್ಗಳ ಬದಲಾವಣೆ ಕಾರ್ಯ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಕಾರ್ಯವನ್ನು ಮಾಡಿ ಮುಗಿಸಲಾಗುವುದು. ಸುಮಾರು ೯0 ವರ್ಷದ ಹಳೆಯದಾದ ಈ ಗೇಟ್‌ಗಳನ್ನು ಮಾರಾಟ ಮಾಡದೇ ಮ್ಯೂಸಿಯಂನಲ್ಲಿ ಇರಿಸಲು ಸೂಚನೆ ನೀಡಿದ್ದೇನೆ ಎಂದು ಕಾರಜೋಳ ಹೇಳಿದ್ದಾರೆ.
ಸಚಿವ ಗೋವಿಂದ ಕಾರಜೋಳ ಅವರು ಶುಕ್ರವಾರ (ಜು.8) ಶ್ರೀರಂಗಪಟ್ಟಣದ ಮೊಗರಹಳ್ಳಿ ಮಂಟಿಯಲ್ಲಿ ಪ್ರವಾಹ ನಿರ್ವಹಣೆ ಕುರಿತು ಪಾಲುದಾರರ ಪಾತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಆರ್‌ಎಸ್ ಡ್ಯಾಂ ಗೇಟ್ ಬದಲಾವಣೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಇದನ್ನೂ ಓದಿ | Rain News | ಒಂದೇ ದಿನದಲ್ಲಿ ಕೆಆರ್‌ಎಸ್ ಒಳಹರಿವು ದುಪ್ಪಟ್ಟು
ಇಂದು ರಾಜ್ಯದಲ್ಲಿ ಸಣ್ಣ ಅಣೆಕಟ್ಟುಗಳ ಸಹಿತ ಒಟ್ಟು 213 ಡ್ಯಾಂಗಳಿವೆ. ಇನ್ನೂ 10 ಲಕ್ಷ ಹೆಕ್ಟೇರ್ಗೆ ನೀರಾವರಿ ಒದಗಿಸುವ ಅವಶ್ಯಕತೆ ಇದೆ. ನೀರಾವರಿ ಯೋಜನೆ ಪೂರ್ಣಗೊಳಿಸಿದರೆ ನಾಗರಿಕರಿಗೆ ಅನುಕೂಲವಾಗಲಿದ್ದು, ಅವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಈಗಾಗಲೇ ಕಾವೇರಿ ಕಣಿವೆಯಲ್ಲಿ ನೀರಾವರಿ ಯೋಜನೆ ಪೂರ್ಣವಾಗಿದೆ. ನೀರು ಹಂಚಿಕೆಗೆ, ಯೋಜನೆ ಜಾರಿಗೆ ನೆರೆ ರಾಜ್ಯಗಳಿಂದ ತೊಡಕುಗಳಿದ್ದು, ಅದನ್ನು ಮೆಟ್ಟಿ ನಿಂತು ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ನ್ಯಾಯಲಯದಲ್ಲಿ ಈ ಯೋಜನೆ ಇತ್ಯರ್ಥಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಮಳೆ ಹಾನಿ, ಅತೀವೃಷ್ಟಿ ಸಂಬಂಧ ಸಿಎಂ ಮಧ್ಯಾಹ್ನ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ, ನಿರ್ವಹಣೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಬಾರಿ ಕಾವೇರಿ ತಾಯಿ ಕರುಣೆ ತೋರಿದ್ದಾಳೆ. ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿದೆ. ಮುಂದಿನ ವಾರ ಬಾಗಿನ ಅರ್ಪಿಸಲು ಕ್ರಮ ವಹಿಸುತ್ತೇವೆ. ಈ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ ಎಂದು ಕಾರಜೋಳ ಹೇಳಿದ್ದಾರೆ.
ಇದನ್ನು ಓದಿ| Rain News | ಒಂದೇ ದಿನದಲ್ಲಿ ಕೆಆರ್‌ಎಸ್ ಒಳಹರಿವು ದುಪ್ಪಟ್ಟು