Site icon Vistara News

KRS Dam | ಒಂದು ವೇಳೆ ಕೆಆರ್‌ಎಸ್ ಡ್ಯಾಂಗೆ ಡ್ಯಾಮೇಜ್‌ ಆದ್ರೆ, ಆಗುತ್ತಾ ಮರುಭೂಮಿ?!

baby hill

ಭರತ್‌ ಬೆಟ್ಟದಮನೆ
ಮೈಸೂರು ಕರ್ನಾಟಕ ಭಾಗದ ಜನರಿಗೆ ವರದಾನವಾಗಲಿ ಎಂಬ ಸದುದ್ದೇಶದಿಂದ ರಾಜಾಡಳಿತದಲ್ಲಿಯೇ ಸರ್.ಎಂ. ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್ ಜಲಾಶಯಕ್ಕೆ (KRS Dam) ಅಡಿಪಾಯ ಹಾಕಲು ಕಾರಣೀಕರ್ತರಾಗಿದ್ದರು. ಈಗ ಜಲಾಶಯ ಸರಿಸುಮಾರು 100 ವರ್ಷಗಳನ್ನು ಪೊರೈಸಿದೆ. ಆದರೆ, ಈ ಪುರಾತನ ಜಲಾಶಯಕ್ಕೆ ಗಣಿಗಾರಿಕೆ ಕುಣಿಕೆಯಾಗಿದೆ. ಡ್ಯಾಂಗೆ ಧಕ್ಕೆಯಾದರೆ ಸುತ್ತಮುತ್ತಲ ಪ್ರದೇಶಗಳು ಬರಡಾಗುವ ಆತಂಕವೂ ಎದುರಾಗಿದೆ.

ಕೆಆರ್‌ಎಸ್ ಜಲಾಶಯದ ಸುತ್ತ ಇರುವ ಬೆಟ್ಟಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಕೊನೆಗೆ ಸಾಕಷ್ಟು ವಿರೋಧದ ನಡುವೆ ನಿಲ್ಲಿಸಲಾಗಿತ್ತು. ಆದರೆ, ಈ ವಿರೋಧದ ಮಧ್ಯೆಯೂ ಗಣಿಗಾರಿಕೆಗೆ ವಿರೋಧದ ನಡುವೆಯೂ ಸರ್ಕಾರ ಸಿದ್ಧತೆ ನಡೆಸಿಕೊಂಡಿರುವುದು ಅಚಾತುರ್ಯದ ನಿರ್ಧಾರ ಎಂದೇ ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಬೇಬಿ ಬೆಟ್ಟದ ಒಡಲನ್ನು ಬಗೆದು ಬಂಡೆಗಳನ್ನು ಪುಡಿ ಮಾಡಿ ಬೆಟ್ಟಗಳನ್ನು ನೆಲಸಮ ಮಾಡುವ ಚಿಂತನೆ ನಡೆದಿದೆ. ಇದಕ್ಕಾಗಿ ಜಾರ್ಖಂಡ್‌ ವಿಜ್ಞಾನಿಗಳನ್ನು ಕರೆಸಿ ಟ್ರಯಲ್ ಬ್ಲಾಸ್ಟಿಂಗ್‌ಗೂ ಚಾಲನೆಯನ್ನು ನೀಡಲಾಗಿತ್ತು. ಇದು ಕಾವೇರಿ ಕೊಳ್ಳದ ಜನರ ಹಾಗೂ ಪರಿಸರ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ತಾತ್ಕಾಲಿಕವಾಗಿ ಬ್ಲಾಸ್ಟಿಂಗ್‌ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ಮಂಗಳವಾರ ಹೇಳಿಕೆ ನೀಡಿದೆ. ಆದರೆ, ಅಧಿಕೃತ ಆದೇಶಕ್ಕೆ ರೈತರು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ | KRS Dam | ಬೇಬಿ ಬೆಟ್ಟ ರಾಜ ಮನೆತನದ ಜಾಗ; ರಾಜವಂಶಸ್ಥ ಯದುವೀರ್ ಒಡೆಯರ್

ವಿಜ್ಞಾನಿಗಳ ಬಗ್ಗೆ ರಾಜಾರಾವ್‌ ಅಸಮಾಧಾನ

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ ಅನ್ನು ಜಾರ್ಖಂಡ್‌ ವಿಜ್ಞಾನಿಗಳ ತಂಡದಿಂದ ನಡೆಸಲಾಗುತ್ತಿದೆ. ಈ ಸಂಬಂಧ ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, “ಪರಿಸರದ ಜ್ಞಾನ ವಿಜ್ಞಾನಿಗಳಿಗೆ ಇಲ್ಲ. ಜಲಾಶಯದ ಸುತ್ತಮುತ್ತ 5 ರಿಂದ 6 ಕಡೆ ಬ್ಲಾಸ್ಟಿಂಗ್ ನಡೆಸಿ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಇದಕ್ಕಾಗಿ 20 ಮೀಟರ್ ಆಳದವರೆಗೂ ಈ ವಿಜ್ಞಾನಿಗಳ ತಂಡ ಬ್ಲಾಸ್ಟ್ ನಡೆಸುತ್ತಿದ್ದಾರೆ. ಇದರ ವರದಿಯನ್ನು ಸಲ್ಲಿಸುವವರಿದ್ದಾರೆ. ಆದರೆ, ಹೀಗೆ ಮಾಡಿದರೆ ಪರಿಸರಕ್ಕೆ ಹಾನಿಯಾಗಲಿದೆ ಎಂಬ ಅರಿವು ಅವರಿಗೆ ಇಲ್ಲವೇ? ಹೀಗಾಗಿ ಈ ಟ್ರಯಲ್ ಬ್ಲಾಸ್ಟಿಂಗ್ ಕೂಡ ನಡೆಸುವುದು ಬೇಡ. ವಿಜ್ಞಾನಿಗಳಿಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು. ಆದರೆ, ಪರಿಸರದ ಮೇಲೆ ಯಾವ ಪರಿಣಾಮ ಬೀರಲಿದೆ? ಜಲಾಶಯಕ್ಕೆ ಏನಾಗಬಹುದು? ಎಂಬುದರ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಬದಲಾಗಿ ನಾಗ್ಪುರದಲ್ಲಿರುವ ಭೂ ಮತ್ತು ಗಣಿಗಾರಿಕೆ ಸಂಸ್ಥೆಯ ವಿಜ್ಞಾನಿಗಳಿಂದ ಸರ್ಕಾರ ವರದಿ ತರಿಸಿಕೊಳ್ಳುವುದು ಉತ್ತಮ” ಎಂದು ಕ್ಯಾಪ್ಟನ್ ರಾಜಾರಾವ್ ಸಲಹೆ ನೀಡಿದ್ದಾರೆ.

ಹನಿ ಹನಿ ನೀರಿಗೂ ಪರಿತಪಿಸಬೇಕಾದೀತು

“ನಮ್ಮ ರಾಜ್ಯಕ್ಕೆ ನೀರಿನ ಅವಶ್ಯಕತೆ ಇದ್ದು, ಜಲಾಶಯದಿಂದ ಕಬ್ಬು ಬೆಳೆಗಾರರು, ರೈತರು ಸಮೃದ್ಧಿಯಾಗಿದ್ದಾರೆ. ಇದು ಈ ಭಾಗದ ಆರ್ಥಿಕತೆಗೆ ಪ್ರಮುಖವಾಗಿದ್ದು, ಹಣಕ್ಕಾಗಿ ಗಣಿಗಾರಿಕೆಗೆ ಅಸ್ತು ಎಂದರೆ ನಮ್ಮನ್ನು ನಾವೇ ನಿರ್ನಾಮ ಮಾಡಿಕೊಡಂತೆ ಆಗುತ್ತದೆ. ಈ ಜಲಾಶಯದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಬಾರದು. ಅನುಮತಿ ನೀಡಿ ಗಣಿಗಾರಿಕೆ ಆರಂಭವಾದರೆ ಕೆಆರ್‌ಎಸ್‌ ಡ್ಯಾಂಗೆ ಹಾನಿಯಾಗಲಿದೆ. ಇದು ಸುತ್ತಮುತ್ತಲ ಜಿಲ್ಲೆಗಳು ಬರಡಾಗಲು (ಮರುಭೂಮಿ) ಆಗಲು ಕಾರಣವಾಗುತ್ತದೆ. ಜತೆಗೆ ಇಲ್ಲಿನ ಆರ್ಥಿಕ ಸ್ಥಿತಿ ಸೇರಿ ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಸರ್ಕಾರ ಇವೆಲ್ಲವನ್ನೂ ಮನದಲ್ಲಿ ಇಟ್ಟುಕೊಂಡು ಮುಂದುವರಿಯಬೇಕಾಗಿದೆ. ಇಲ್ಲವಾದಲ್ಲಿ ಬೆಂಗಳೂರಿನ ಜನತೆ ಹನಿ ಹನಿ ನೀರಿಗೂ ಪರಿತಪಿಸುವತಂಹ ಸ್ಥಿತಿ ನಿರ್ಮಾಣವಾಗುತ್ತದೆ” ಎಂದು ರಾಜಾರಾವ್‌ ಎಚ್ಚರಿಕೆಯನ್ನು ನೀಡಿದ್ದಾರೆ.

“ಟ್ರಯಲ್ ಬ್ಲಾಸ್ಟ್‌ನಿಂದ ಆಗುವ ಅನಾಹುತದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊಡಲು ಸಿದ್ಧನಿದ್ದೇನೆ. ಅದನ್ನು ಮೀರಿ ಮುಂದುವರಿದರೆ ನಾನು ನ್ಯಾಯಾಲಯದ ಮೊರೆ ಹೋಗಲಿದ್ದೇನೆ. ನ್ಯಾಯಾಲಯದಲ್ಲಿ ನಮಗೆ ಜಯ ಸಿಗಲಿದೆ” ಎಂದು ಕ್ಯಾಪ್ಟನ್ ರಾಜಾರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Mandya Baby Hill | ಬೇಬಿ ಬೆಟ್ಟ ನಮ್ಮದು, ನಮ್ಮ ಪರ್ಮಿಷನ್‌ ಕೇಳಬೇಕಿತ್ತು ಎಂದ ಪ್ರಮೋದಾದೇವಿ

Exit mobile version