Site icon Vistara News

Vistara Exclusive : ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ. ಯೋಗೇಶ್ವರ್ ಶೀಘ್ರವೇ ಸಂಪುಟಕ್ಕೆ ಸೇರ್ಪಡೆ

Karnataka

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಸಂಪುಟ ವಿಸ್ತರಣೆ ಮಾಡಿ, ಚುನಾವಣೆಯಲ್ಲಿ ಬಿಜೆಪಿಯ ಬಲವರ್ಧನೆಯ ಯೋಜನೆ ರೂಪಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಅದರಲ್ಲೂ, ಬಿಜೆಪಿ ನಾಯಕರಾದ ಕೆ.ಎಸ್‌.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಹಾಗೂ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈಗಾಗಲೇ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಭರ್ಜರಿ ಪ್ರಚಾರ, ಯಾತ್ರೆ, ಅಭಿಯಾನಗಳನ್ನು ಆರಂಭಿಸಿವೆ. ಪ್ರತಿಪಕ್ಷಗಳ ಚುರುಕಿನ ಪ್ರಚಾರಕ್ಕೆ ಸೆಡ್ಡೊಡೆಯಲು ರಾಜ್ಯ ಬಿಜೆಪಿಯು ಸಂಪುಟ ವಿಸ್ತರಣೆಯ ಅಸ್ತ್ರ ಬಳಸಿದ್ದು, ಪ್ರಮುಖ ನಾಯಕರಾದ ಕೆ.ಎಸ್‌.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಹಾಗೂ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪಕ್ಷದ ಪ್ರಭಾವ ಹೆಚ್ಚಿಸುವ ಜತೆಗೆ ಸಮುದಾಯಗಳ ಮತ ಸೆಳೆಯುವುದು ರಣತಂತ್ರವಾಗಿದೆ.

ಮೂವರ ಸ್ಥಾನಕ್ಕೆ ಕುತ್ತು ಬಂದಿದ್ದು ಏಕೆ?

ಕೆ.ಎಸ್‌.ಈಶ್ವರಪ್ಪ

ಬೆಳಗಾವಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರು ಈಶ್ವರಪ್ಪ ಅವರ ವಿರುದ್ಧ ಶೇ.40ರಷ್ಟು ಕಮಿಷನ್‌ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಪ್ರಕರಣ ಸುದ್ದಿಯಾದ ಹಿನ್ನೆಲೆಯಲ್ಲಿ 2022ರ ಏಪ್ರಿಲ್‌ 16ರಂದು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಆದರೆ, ಕೆ.ಎಸ್‌.ಈಶ್ವರಪ್ಪ ಅವರು ಕುರುಬ ಸಮುದಾಯದ ಪ್ರಮುಖ ನಾಯಕರಾದ ಕಾರಣ ಅವರಿಗೆ ಸಚಿವ ಸ್ಥಾನ ನೀಡಿ ಕುರುಬ ಸಮುದಾಯದ ಮತ ಸೆಳೆಯುವುದು ಬಿಜೆಪಿ ಉದ್ದೇಶವಾಗಿದೆ.

ರಮೇಶ್‌ ಜಾರಕಿಹೊಳಿ

ರಾಸಲೀಲೆಯ ವಿಡಿಯೊ ಬಹಿರಂಗವಾದ ಪ್ರಕರಣದಲ್ಲಿ 2021ರ ಮಾರ್ಚ್‌ನಲ್ಲಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಆದರೆ, ಸಮ್ಮಿಶ್ರ ಸರ್ಕಾರದ ಪತನದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ರಮೇಶ್‌ ಜಾರಕಿಹೊಳಿ ಅವರು ಬೆಳಗಾವಿಯ ಅಗ್ರ ನಾಯಕರಾಗಿರುವ ಕಾರಣ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಮೂಲಕ ಬೆಳಗಾವಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಬಿಜೆಪಿಯ ರಣತಂತ್ರವಾಗಿದೆ.

ಸಿ.ಪಿ.ಯೋಗೇಶ್ವರ್‌

ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲಿ ಸಂಪುಟ ಸದಸ್ಯರಾಗಿದ್ದ ಸಿ.ಪಿ.ಯೋಗೇಶ್ವರ್‌ ಅವರಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡಿರಲಿಲ್ಲ. ಹೈಕಮಾಂಡ್‌ಗೆ ದೂರು ನೀಡಿದ ಯೋಗೇಶ್ವರ್‌ ಅವರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡಬಾರದು ಎಂಬುದು ಬಿಎಸ್‌ವೈ ಆಗ್ರಹವಾಗಿತ್ತು ಎನ್ನಲಾಗಿತ್ತು. ಆದರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಬಲವರ್ಧನೆ ದೃಷ್ಟಿಯಿಂದಾಗಿ ಯೋಗೇಶ್ವರ್‌ ಅವರಿಗೆ ಮಣೆ ಹಾಕುವುದು ಬೊಮ್ಮಾಯಿ ಅವರಿಗೆ ಅನಿವಾರ್ಯವಾಗಿದೆ. ಇದರಿಂದಾಗಿ ಸಚಿವ ಸ್ಥಾನ ನೀಡಲಾಗುತ್ತಿದೆ.

ಇದನ್ನೂ ಓದಿ | Karnataka Election : ಇನ್ನು ಮೂರೇ ದಿನದಲ್ಲಿ ಸಂಪುಟ ವಿಸ್ತರಣೆ?; ಸಿಎಂ, ಬಿಎಸ್‌ವೈ ಹೇಳಿದ್ದೇನು?

Exit mobile version