Site icon Vistara News

ಮೈಸೂರು ನಗರದ ಪಕ್ಕವೇ ಮರಿಗಳ ಜತೆ ಕಾಣಿಸಿಕೊಂಡ ತಾಯಿ ಚಿರತೆ, ಭಯದಲ್ಲಿ ಜನ, ಶಾಲೆಗಳಿಗೆ ರಜೆ

leopard in mysore

ಮೈಸೂರು: ಬೆಳಗಾವಿಯಲ್ಲಿ ಜಾಧವ ನಗರದಲ್ಲಿ ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜನರ ಬದುಕನ್ನೇ ಅಸ್ತವ್ಯಸ್ತಗೊಳಿಸಿದ ಚಿರತೆ ಹೇಗೋ ಅಲ್ಲಿಂದ ಹೋಗಿದೆ ಎಂಬ ಸುದ್ದಿ ಬಂದಿದೆ. ರಾಜ್ಯದ ನಾನಾ ಕಡೆಗಳಲ್ಲಿ ಚಿರತೆಗಳು ನೇರವಾಗಿ ಊರಿಗೆ ನುಗ್ಗುತ್ತಿರುವ, ಮನುಷ್ಯರ ಮೇಲೆಯೇ ದಾಳಿ ನಡೆಸುತ್ತಿರುವ, ಅಲ್ಲಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುವ ವಿದ್ಯಮಾನಗಳು ನಡೆಯುತ್ತಿವೆ. ಕೆಲವೇ ಕಡೆಗಳಲ್ಲಿ ಬೋನು ಇಟ್ಟು ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಫಲವಾಗಿದೆ.

ಈ ನಡುವೆ, ಮೈಸೂರು ನಗರದ ಆಸುಪಾಸೇ ಒಂದು ಚಿರತೆ ತನ್ನ ಎರಡು ಮರಿಗಳೊಂದಿಗೆ ಕಾಣಿಸಿಕೊಂಡು ಆತಂಕ ಹುಟ್ಟಿಸಿದೆ. ಇಲ್ಲಿನ ಮೇಟಗಳ್ಳಿಯಲ್ಲಿರುವ ಆರ್‌ಬಿಐ ಬಡಾವಣೆಯಲ್ಲಿ ಚಿರತೆಗಳ ಭೀತಿ ಕಾಣಿಸಿಕೊಂಡಿದೆ.

ನೋಟು ಮುದ್ರಣಾಲಯದ ವಸತಿ ಗೃಹದ ಪರಿಸರದಲ್ಲಿ ಎರಡು ಮರಿಗಳೊಂದಿಗೆ ತಾಯಿ ಚಿರತೆ ಕಾಣಿಸಿಕೊಂಡಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಹಲವು ಬಾರಿ ಸಿಸಿ ಟಿವಿಯಲ್ಲಿ ಚಲನವಲನಗಳು ದಾಖಲಾದ ಹಿನ್ನೆಲೆಯಲ್ಲಿ ಇಲ್ಲಿನ ಜನರು ಆತಂಕಕ್ಕೆ ಈಡಾಗಿದ್ದು, ಮನೆಯಿಂದ ಹೊರಗೆ ಹೊರಡಲೂ ಭಯಪಡುತ್ತಿದ್ದಾರೆ. ಮುಂಜಾಗೃತಾ ಕ್ರಮವಾಗಿ ಕೇಂದ್ರೀಯ ವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಇಲ್ಲಿ ಕಳೆದ ಗುರುವಾರರಿಂದಲೇ ಶಾಲೆಗೆ ರಜೆ ಕೊಡಲಾಗಿದೆ.

ಚಿರತೆ ಪತ್ತೆ ಕಾರ್ಯಾಚರಣೆಗೆ ಸಿದ್ಧ

ಇನ್ನೂ ಬೋನಿಗೆ ಬೀಳದ ಚಿರತೆ
ಈ ನಡುವೆ ತಾಯಿ ಚಿರತೆ ಕೆಲವೊಂದು ನಾಯಿಗಳನ್ನು ಹೊತ್ತೊಯ್ದ ಘಟನೆಗಳೂ ನಡೆದಿವೆ. ನಾಯಿಗಳು ಕಾಣೆಯಾಗುತ್ತಿರುವುದನ್ನು ಗಮನಿಸಿ ಈ ಅಂದಾಜು ಮಾಡಲಾಗಿದೆ. ಹೀಗಾಗಿ ಮನೆಯಿಂದ ಹೊರ ಬಾರಲು ಆರ್‌ಬಿಐ ನೌಕರರು, ಕುಟುಂಬಸ್ಥರು ಆತಂಕ ಪಡುತ್ತಿದ್ದಾರೆ. ಮಕ್ಕಳಂತೂ ಹೊರಗೆ ಹೋಗುತ್ತಲೇ ಇಲ್ಲ.

ಈ ನಡುವೆ, ಚಿರತೆಯನ್ನು ಹಿಡಿಯಲು ಎಸಿಎಫ್ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ಸೆರೆಗೆ ಮೂರು ಕಡೆ ಬೋನ್ ಇಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ. ಆದರೆ, ಚಿರತೆ ಮಾತ್ರ ಬಿದ್ದಿಲ್ಲ. ಭಯ ಮುಂದುವರಿದಿದೆ.

ಇದನ್ನೂ ಓದಿ | Operation Leopard | ಬಲೆಗೆ ಬೀಳದ ಬೆಳಗಾವಿ ಚಿರತೆ; ಸೋಮವಾರದಿಂದ ಶಾಲಾ-ಕಾಲೇಜು ಆರಂಭ

Exit mobile version