ಮೈಸೂರು: ಪ್ರತಿ ವರ್ಷ ಕನ್ನಡ ನಾಡಿನಲ್ಲಿ ದಸರಾ ಉತ್ಸವ(Mysuru Dasara)ವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ದಸರಾ ಎಂದರೆ ಆತ್ಮಶುದ್ಧಿಯ ಶುಭ ಸಂದರ್ಭ. ಸಂಕಲ್ಪ ಕೈಗೊಳ್ಳುವ ಪುಣ್ಯ ದಿನ. ಹಾಗಾಗಿ, ಕನ್ನಡ ನಾಡನ್ನು ಎಲ್ಲ ರಂಗಗಳಲ್ಲಿ ಸರ್ವ ಶ್ರೇಷ್ಠ ಮಾಡುವ ಸಂಕಲ್ಪವನ್ನು ಈ ದಿನ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಲಾಗಿದ್ದ ದಸರಾ ಉತ್ಸವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ನಾಡನ್ನು ಅಭಿವೃದ್ಧಿಯಲ್ಲಿ ಎತ್ತರಕ್ಕೆ ಕೊಂಡೊಯ್ಯೋಣ. ಕಷ್ಟದಲ್ಲಿರುವ ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ನಾವು ಕಂಕಣಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ತಾಯಿ ಚಾಮುಂಡೇಶ್ವರಿ ನಮಗೆ ಆಶೀರ್ವಾದ ಮಾಡಲಿ ಎಂದು ಹೇಳಿದರು.
ಮೈಸೂರು ರಾಜರ ಕಾಲದಲ್ಲಿ ನಾಡಹಬ್ಬವನ್ನು ಆಚರಿಸಲಾಗುತ್ತಿತ್ತು. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಅದೇ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದೇವೆ. ಈ ಹತ್ತು ದಿನಗಳಲ್ಲಿ ಕನ್ನಡ ನಾಡಿನ ಮನೆ ಮನೆಯಲ್ಲಿ ಎಲ್ಲ ವರ್ಗದ ಜನರು ಅತ್ಯಂತ ಸಡಗರ, ಸಂಭ್ರಮದಿಂದ ದಸರಾವನ್ನು ಆಚರಿಸುತ್ತಾರೆ ಎಂದು ಸಿಎಂ ಹೇಳಿದರು.
ಮೈಸೂರು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿರುವುದು ಅಪರೂಪದ ಘಟನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸಿರುವುದು ಇದೇ ಮೊದಲು ಎಂದು ಹೇಳಿದ ಸಿಎಂ, ಈ ಬಾರಿ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಆಮಂತ್ರಿಸೋಣ ಎಂದು ನಿರ್ಧರಿಸಿ ಅವರನ್ನು ಸಂಪರ್ಕಿಸಿದೆವು. ಅವರು ನಮ್ಮ ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದರು. ಅಷ್ಟೇ ಅಲ್ಲ, ರಾಷ್ಟ್ರಪತಿಯಾದ ಬಳಿಕ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ದೇಶದ ಮೊದಲ ರಾಜ್ಯವಾಗಿದೆ ಎಂದು ಹೇಳಿದರು.
ಭಾಗ್ಯಶಾಲಿ ಎಂದ ರಾಜ್ಯಪಾಲ ಗೆಹ್ಲೋಟ್
ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಉದ್ಘಾಟನೆ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಅವರ ಜತೆಗೇ ಚಾಮುಂಡೇಶ್ವರಿ ದರ್ಶನ ಪಡೆದಿರುವುದಕ್ಕೆ ನಾನು ಭಾಗ್ಯಶಾಲಿ ಎಂದರು.
ಈ ಮೊದಲು ನಾನು ದೂರದರ್ಶನದಲ್ಲಿ ದಸರಾ ಉತ್ಸವವನ್ನು ನೋಡಿ ಕಣ್ಣುತುಂಬಿಕೊಳ್ಳುತ್ತಿದ್ದೆ. ಇದೇ ಮೊದಲ ಬಾರಿಗೆ ನೇರವಾಗಿ, ಪ್ರತ್ಯಕ್ಷವಾಗಿ ಈ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತರುತ್ತಿದೆ ಎಂದರು. ಈ ಉತ್ಸವ ಯಶಸ್ವಿಯಾಗಲು ಬಹಳ ದಿನಗಳಿಂದಲೂ ಸಿದ್ಧತೆಯನ್ನು ಮಾಡಲಾಗುತ್ತದೆ. ಈ ಕಾರ್ಯದಲ್ಲಿ ಪಾಲ್ಗೊಂಡಿರುವ ಎಲ್ಲ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು, ಜನರು, ಉತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ | Mysuru Dasara | ಮೈಸೂರು ದಸರಾ ಉತ್ಸವಕ್ಕೆ ರಾಷ್ಟ್ರಪತಿ ಮುರ್ಮು ಚಾಲನೆ