ಬೆಂಗಳೂರು: ಸಾಹಿತಿಗಳಿಗೆ ಸಾಲು ಸಾಲು ಬೆದರಿಕೆ ಪತ್ರ (Life threat) ಬರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಚಾಲೆಂಜ್ ಅಗಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು (CCB Police) ಭೇದಿಸಿದ್ದಾರೆ.
ಸಾಹಿತಿಗಳಿಗೆ ಬೆದರಿಕೆ ಪತ್ರಗಳನ್ನು ಬರೆದಿದ್ದವನು ದಾವಣಗೆರೆ ಮೂಲದ ಶಿವಾಜಿ ರಾವ್ ಎಂಬಾತನಾಗಿದ್ದು, ಇದೀಗ ಪೊಲೀಸರ ಸೆರೆಯಲ್ಲಿದ್ದಾನೆ. ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಶಿವಾಜಿ ರಾವ್, ಹಿಂದೂ ಧರ್ಮವನ್ನು ಟೀಕಿಸಿ ಮಾತನಾಡುವವರು ಹಾಗೂ ಬರೆಯುವವರನ್ನು ಟಾರ್ಗೆಟ್ ಮಾಡಿದ್ದ ಎಂದು ಗೊತ್ತಾಗಿದೆ.
ರಾಜ್ಯದ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ಸಂಜಯನಗರ, ಕೊಟ್ಟೂರು, ಚಿತ್ರದುರ್ಗ, ಹಾರೋಹಳ್ಳಿ -2 ಎಫ್ಐಆರ್, ಬಸವೇಶ್ವರ ನಗರ -2 ಎಫ್ಐಆರ್ ದಾಖಲಾಗಿದ್ದವು. ಕೊಟ್ಟೂರು ಠಾಣೆಯಲ್ಲಿ ಸಾಹಿತಿ ಕುಂ.ವೀರಭಧ್ರಪ್ಪ ಪ್ರಕರಣ ದಾಖಲಿಸಿದ್ದರು. ಚಿತ್ರದುರ್ಗದಲ್ಲಿ ಸಾಹಿತಿ ಬಿಎಲ್ ವೇಣು, ಹಾರೋಹಳ್ಳಿ ಠಾಣೆಯಲ್ಲಿ ಬಂಜಗೆರೆ ಜಯಪ್ರಕಾಶ್, ಸಂಜಯನಗರ ಠಾಣೆಯಲ್ಲಿ ಬಿ.ಟಿ. ಲಲಿತಾ ನಾಯ್ಕ್, ಬಸವೇಶ್ವರ ನಗರ ಠಾಣೆಯಲ್ಲಿ ವಸುಂಧರಾ ಭೂಪತಿ ಪ್ರಕರಣ ದಾಖಲು ಮಾಡಿದ್ದರು.
ಪೊಲೀಸರಿಗೆ ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಾಕ್ಷಿಗಳು ಕೂಡ ಲಭ್ಯವಾಗಿರಲಿಲ್ಲ. ಹಾಗಾಗಿ ಆಗಸ್ಟ್‌ನಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಎಫ್‌ಎಸ್‌ಎಲ್‌ಗೆ ಬೆದರಿಕೆ ಪತ್ರವನ್ನು ಸಿಸಿಬಿ ಪೊಲೀಸರು ಕಳುಹಿಸಿದ್ದರು. ಈ ಪತ್ರವನ್ನೆಲ್ಲ ಒಬ್ಬನೇ ಬರೆದಿದ್ದಾನೆ ಎನ್ನುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಧೃಢವಾಗಿತ್ತು. ಪತ್ರಗಳನ್ನು ಬೇರೆ ಬೇರೆ ಪೋಸ್ಟ್ ಅಫೀಸ್‌ಗಳಿಂದ ರವಾನೆ ಮಾಡುತ್ತಿದ್ದ ಈತ ಹಲವು ದಿನಗಳಿಂದ ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತನಿಖೆ ವೇಳೆ, ಇವರೆಲ್ಲ ಹಿಂದೂ ಧರ್ಮದ ವಿರೋಧಿಗಳು ಹಾಗಾಗಿ ಬೆದರಿಕೆ ಪತ್ರ ಬರೆದಿದ್ದೆ ಎಂದು ಆರೋಪಿ ಹೇಳಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಇಷ್ಟೊಂದು ದೊಡ್ಡ ಮಟ್ಟಕ್ಕೆ ತಲುಪುತ್ತೆ ಅನ್ನೋದು ಗೊತ್ತಿರಲಿಲ್ಲ ಎಂದೂ ಒಪ್ಪಿಕೊಂಡಿದ್ದಾನೆ. ಈತನೊಬ್ಬನೇ ಇದರಲ್ಲಿ ಕಾರ್ಯಾಚರಿಸಿದ್ದಾನೆಯೇ, ಅಥವಾ ಈತನ ಹಿಂದೆ ಬೇರೆ ಯಾರಾದ್ರೂ ಇದ್ದಾರೆಯೇ ಎನ್ನುವ ಬಗ್ಗೆಯೂ ಸಿಸಿಬಿ ತನಿಖೆ ನಡೆದಿದೆ.
ಇದನ್ನೂ ಓದಿ: Life Threat : ಸಾಹಿತಿಗಳಿಗೆ ಬೆದರಿಕೆ ಒಡ್ಡಿ ಬರೆದಿದ್ದ ಪತ್ರಗಳ ಕೈ ಬರಹ ಒಂದೇ! ಪೋಸ್ಟ್ ಆಫೀಸ್ ಹಿಂದೆ ಬಿದ್ದ ಸಿಸಿಬಿ