ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer) ಅವರು ಜ್ಯೋತಿಷಿಗಳ ಸೂಚನೆಯಂತೆ ನಾಮಪತ್ರ ಸಲ್ಲಿಸಿದರು. ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ ಶ್ರೀವತ್ಸ ಜತೆ ಸೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಏಪ್ರಿಲ್ 3ರಂದು ಬೃಹತ್ ರ‍್ಯಾಲಿ ಮೂಲಕ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು, ಯದುವೀರ್ ಅವರು ಆಸ್ತಿಯ ಕುರಿತ ಅಫಿಡವಿಟ್‌ಅನ್ನೂ (Affidavit) ಚುನಾವಣಾ ಆಯೋಗಕ್ಕೆ (Election Commission) ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂ. ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ.
ಹೌದು, ಮೈಸೂರಿನ ರಾಜಮನೆತನಕ್ಕೆ ಸೇರಿದರೂ ಯದುವೀರ್ ಅವರು 4,99,59,303 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಯದುವೀರ್ ಅವರ ಪತ್ನಿ 1,04,25,000 ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಇವರ ಪುತ್ರನ (Dependent) ಹೆಸರಿನಲ್ಲಿ 3.63 ಕೋಟಿ ರೂ. ಆಸ್ತಿ ಇದೆ. ಯದುವೀರ್ ಅವರ ಕುಟುಂಬದಲ್ಲಿ (ಪತ್ನಿ ಹಾಗೂ ಪುತ್ರ) ಯಾರೂ ಸಾಲ ಹೊಂದಿಲ್ಲ ಎಂಬುದಾಗಿ ಯದುವೀರ್ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಯದುವೀರ್ ಅವರ ಬಳಿ 1 ಲಕ್ಷ ರೂ. ನಗದು ಇದ್ದರೆ, ಪತ್ನಿ ಬಳಿ 75 ಸಾವಿರ ರೂ. ಇದೆ. ಇನ್ನು, ಯದುವೀರ್ ಅವರ ಹೆಸರಿನಲ್ಲಿ ಬೈಕ್, ಕಾರು ಸೇರಿ ಯಾವುದೇ ವಾಹನವಿಲ್ಲ. ಬಿಜೆಪಿ ಅಭ್ಯರ್ಥಿಯು 28.42 ಲಕ್ಷ ರೂ. ಆದಾಯದ ಕುರಿತು ಉಲ್ಲೇಖ ಮಾಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಯದುವೀರ್ ಅವರು ಯಾವುದೇ ಬಗೆಯ ಸ್ಥಿರಾಸ್ತಿಯನ್ನು ಹೊಂದಿಲ್ಲ. ಇವರು ಆದಾಯ ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿಲ್ಲ.
ಯದುವೀರ್ ಸಲ್ಲಿಸಿದ ಅಫಿಡವಿಟ್
ಇದನ್ನೂ ಓದಿ: BJP Nominations: ಯದುವೀರ್ ಸೇರಿ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; ಇಲ್ಲಿವೆ Photos
ಬಿಜೆಪಿ ನಾಯಕರಿಂದ ನಾಮಪತ್ರ ಸಲ್ಲಿಕೆ
ತುಮಕೂರಿನಲ್ಲಿ ವಿ.ಸೋಮಣ್ಣ ಅವರು ಕೂಡ ಉಮೇದುವಾರಿಕೆ ಸಲ್ಲಿಸಿದರು. ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಅವರೊಂದಿಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಎಂ.ಟಿ.ಬಿ. ನಾಗರಾಜ್ ಅವರ ಕಾಲಿಗೆ ಬಿದ್ದು ಸುಧಾಕರ್ ಆಶೀರ್ವಾದ ಪಡೆದರು. ಇದೇ ವೇಳೆ, ನಾಗರಾಜ್ ಅವರು ನಾಮಪತ್ರ ಶುಲ್ಕವಾದ 25 ಸಾವಿರ ರೂ. ನೀಡಿ ಆಶೀರ್ವಾದ ಮಾಡಿದರು. ಹಲವು ಹಿರಿಯರ ಆಶೀರ್ವಾದ ಪಡೆದ ಬಳಿಕ ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಇವರಿಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ