ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಕಣ ದಿನೇದಿನೆ ರಂಗೇರುತ್ತಿದ್ದು, ನಾಯಕರು ಪ್ರಚಾರದಲ್ಲಿ ನಿರತರಾಗಿದ್ದರೆ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲೂ, ಸೋಮವಾರ (ಏಪ್ರಿಲ್ 1) ಕಾಂಗ್ರೆಸ್‌ನ (Congress) ಸಾಲು ಸಾಲು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ (Sowmya Reddy), ಚಿಕ್ಕಬಳ್ಳಾಪುರದಲ್ಲಿ ರಕ್ಷಾರಾಮಯ್ಯ ಸೇರಿ ಹಲವು ಅಭ್ಯರ್ಥಿಗಳು ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಆಟೋದಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಸೌಮ್ಯಾ ರೆಡ್ಡಿ
ನಾಮಪತ್ರ ಸಲ್ಲಿಕೆಗೂ ಮೊದಲು ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಆಟೋದಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಸೌಮ್ಯಾ ರೆಡ್ಡಿ ಅವರಿಗೆ ನಿರ್ಮಾಪಕ ಉಮಾಪತಿ ಸೇರಿ ಹಲವರು ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, “ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ತೆರಳಿ ಪ್ರಚಾರ ಕೈಗೊಳ್ಳುತ್ತೇನೆ” ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ರಕ್ಷಾರಾಮಯ್ಯ ಉಮೇದುವಾರಿಕೆ
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರು ತಂದೆ, ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರೊಂದಿಗೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ರಕ್ಷಾರಾಮಯ್ಯ ಅವರಿಗೆ ಶಾಸಕ ಪ್ರದೀಪ್ ಈಶ್ವರ್, ಶರತ್ ಬಚ್ಚೇಗೌಡ ಸೇರಿ ಹಲವರು ಬಲ ತುಂಬಿದರು.
ಇದನ್ನೂ ಓದಿ: ಸುಧಾಕರ್ ಹೆಸರಲ್ಲಿ ಮತ ಕೇಳಿದ್ರೆ ಪಕ್ಷಕ್ಕೇ ಮೈನಸ್; ಬಿಜೆಪಿ ಶಾಸಕ ವಿಶ್ವನಾಥ್ ಕೆಂಡಾಮಂಡಲ!
ಶಕ್ತಿ ಪ್ರದರ್ಶನದ ಬಳಿಕ ಸ್ಟಾರ್ ಚಂದ್ರು ನಾಮಿನೇಷನ್
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶಿಸಿದ ನಂತರ ನಾಮಪತ್ರ ಸಲ್ಲಿಸಿದರು. ಇದೇ ವೇಳೆ, ಸಚಿವ ಚಲುವರಾಯಸ್ವಾಮಿ, ಡಿಸಿಎಂ ಡಿ.ಕೆ. ಶಿವಕುಮಾರ್, ಶಾಸಕ ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಸೇರಿ ಹಲವರು ಸ್ಟಾರ್ ಚಂದ್ರು ಜತೆಗಿದ್ದರು.
ಐತಿಹಾಸಿಕ ನಾಮಪತ್ರ ಎಂದ ಡಿಕೆಶಿ
ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, “ಇದೊಂದು ಐತಿಹಾಸಿಕ ನಾಮಪತ್ರವಾಗಿದೆ. ಮಂಡ್ಯ ಜನರ ಸ್ವಾಭಿಮಾನದ ಉಮೇದುವಾರಿಕೆಯಾಗಿದೆ. ಮಂಡ್ಯದಲ್ಲಿ ಸ್ಥಳೀಯರು ಬಿಟ್ಟು ಬೇರೆಯವರಿಗೆ ಆಡಳಿತ ಕೊಟ್ಟ ಇತಿಹಾಸ ಇಲ್ಲ. ಸ್ಟಾರ್ ಚಂದ್ರು ಅವರ ಕುಟುಂಬವು 3 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದೆ. ಮಂಡ್ಯ ಜಿಲ್ಲೆ ಜನರ ಸೇವೆ ಮಾಡಬೇಕು ಎಂದು ಟಿಕೆಟ್ ಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು.
ಶ್ರೇಯಸ್ ಪಟೇಲ್ ಉಮೇದುವಾರಿಕೆ
ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಕೂಡ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಇವರಿಗೆ ಸಚಿವರಾದ ಜಿ. ಪರಮೇಶ್ವರ್, ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ