Site icon Vistara News

Lok Sabha Election 2024: ಕೈ ಅಭ್ಯರ್ಥಿ ಲೂಸ್‌ ಟಾಕ್‌ ಲಕ್ಷ್ಮಣ್‌; ಸಂಸ್ಕಾರ ಇಲ್ಲದವರನ್ನು ಒಕ್ಕಲಿಗ ಎಂದು ಸಮುದಾಯ ಒಪ್ಪಲ್ಲ: ಸಿ.ಟಿ. ರವಿ

Lok Sabha Election 2024 Ct Ravi Slams Congress Candidate From Mysuru

ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ವಾಕ್ಸಮರ ಜೋರಾಗಿದೆ. ಈಗ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ (Kodagu – Mysore Lok Sabha constituency) ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ್‌ (Congress candidate Laxman) ವಿರುದ್ಧ ಮಾಜಿ ಸಚಿವ, ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಗುಡುಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ್‌ ಅಲ್ಲ, ಅವರು ಲೂಸ್ ಟಾಕ್ ಲಕ್ಷ್ಮಣ್. ಇದು ಕಾಂಗ್ರೆಸ್‌ನವರೇ ಕೊಟ್ಟಿರುವ ಬಿರುದು ಎಂದು ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ. ರವಿ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಚುನಾವಣೆಗೂ ಮುಂಚೆಯೇ ಸೋಲು ಒಪ್ಪಿಕೊಂಡಿದ್ದಾರೆ. ಕಾರ್ಪೋರೇಷನ್, ವಿಧಾನ ಪರಿಷತ್ತು ಹೀಗೆ ನಾಲ್ಕು ಚುನಾವಣೆಯಲ್ಲಿ ಸೋತವರನ್ನು ಯಾಕೆ ಅಭ್ಯರ್ಥಿ ಮಾಡಿದ್ದೀರಿ ಸಿದ್ದರಾಮ್ಯಯ ಅವರೇ? ನಿಮಗೆ ಯಾರೂ ಅಭ್ಯರ್ಥಿಯೇ ಸಿಗಲಿಲ್ಲವಾ? ಹೀಗಾಗಿ ಲಕ್ಷ್ಮಣ್ ಅವರನ್ನು ಕರೆತಂದು ನಿಲ್ಲಿಸಿದ್ದೀರಿ. ಸಂಸ್ಕಾರ ಇಲ್ಲದೇ ಇರುವವರನ್ನು ಕರೆತಂದು ಒಕ್ಕಲಿಗ ಅಂದರೆ ಸಮುದಾಯ ಒಪ್ಪಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ದೃಷ್ಟಿದೋಷವನ್ನು ನಿವಾರಣೆ ಮಾಡಬೇಕು

ಕಲಬುರಗಿ, ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಅನ್ನೋದನ್ನು ಮರೆತಂತೆ ಕಾಣುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ? ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾಲು ನೀಡಿದವರು ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಅನ್ಯಾಯ ಮಾಡಿದ್ದಾರೆ ಅನ್ನೋದು ನಿಮ್ಮ ದೃಷ್ಟಿಯಾದರೆ ದೃಷ್ಟಿದೋಷವನ್ನು ನಿವಾರಣೆ ಮಾಡಬೇಕು ಎಂದು ಸಿ.ಟಿ. ರವಿ ತಿರುಗೇಟು ನೀಡಿದರು.

ರಾಷ್ಟ್ರೀಯ ವಿಚಾರಗಳು ಚರ್ಚೆ ಆಗಬೇಕು. ಮೂಲಭೂತ ಸೌಕರ್ಯ, ಆರ್ಥಿಕ ಅಭಿವೃದ್ಧಿ, ಭಾರತದ ಭವಿಷ್ಯದ ಅಭಿವೃದ್ಧಿ ಚರ್ಚೆ ಆಗಬೇಕು. ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಹಗರಣಗಳಿಗೆ ಕಾರಣೀಭೂತ ಯಾರು?
ಮನಮೋಹನ್ ಸಿಂಗ್ ಇದ್ದಾಗ ಕೊಟ್ಟ ಅನುದಾನ, ಮೋದಿಯವರು ಕೊಟ್ಟ ಅನುದಾನದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ನೀವು ನೀತಿ ಬಗ್ಗೆ ಅಲ್ಲ, ಜಾತಿ ಬಗ್ಗೆ ಚರ್ಚೆ ನಡೆಸಲಿಕ್ಕೆ ಮುಂದಾಗಿದ್ದೀರಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆಯನ್ನು ಯಾವ ಮಾನದಂಡದಲ್ಲಿ ಅಳೆಯುತ್ತೀರಿ. ದೇವರಾಜ ಅರಸು ಸಾಮಾಜಿಕ ನ್ಯಾಯವನ್ನು ಅಪಮಾನಿಸುವ ರೀತಿ ಮಾತನಾಡುತ್ತೀರಾ? ಅಧಿಕಾರಕ್ಕಾಗಿ ಬಳಸಿಕೊಂಡ ಅಹಿಂದ ಎಲ್ಲಿ ಹೋಯ್ತು ಸಿದ್ದರಾಮಯ್ಯನವರೇ? ಒಕ್ಕಲಿಗರು ನೀತಿ ಹಿಂದೆ ಹೋದವರು, ನೀತಿ ಬೆಂಬಲಿಸಿದವರು ಎಂದು ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ತಮಿಳುನಾಡಿನಲ್ಲೂ ನಮ್ಮದೇ ಗೆಲುವು

ಇವತ್ತಿನ ಕಾಂಗ್ರೆಸ್ ಕಮ್ಯುನಲ್ ಕಾಂಗ್ರೆಸ್ ಆಗಿ ಬದಲಾವಣೆ ಆಗಿದೆ. ಇಂದಿನ ಕಾಂಗ್ರೆಸ್‌ಗೆ ಕರಪ್ಶನ್ ಎಂಬ ಇನ್ನೊಂದು ಮುಖವಿದೆ. ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ನರೇಂದ್ರ ಮೋದಿ ಎಂದು ಇಡೀ ದೇಶವೇ ಹೇಳುತ್ತಿದೆ. ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ 28 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ. ನೆರೆಯ ರಾಜ್ಯವಾದ ತಮಿಳುನಾಡಿನಲ್ಲೂ ಬಿಜೆಪಿ ಹಾಗೂ ಎನ್‌ಡಿಎ ಅಲೆಯನ್ಸ್ ಗೆಲ್ಲುತ್ತದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು. ‌

ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯೇ ಗೆಲ್ಲುವುದು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಹಾಗೂ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ನಡುವೆ ಮುನಿಸಿನ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಪ್ರೀತಮ್ ಗೌಡ ಅವರ ಹೇಳಿಕೆಯನ್ನು ನಾನು ನೋಡಿದ್ದೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲಿಕ್ಕೆ ನಾವು ದುಡಿಯುತ್ತೇವೆ ಎಂದು ಹೇಳಿದ್ದಾರೆ. 28 ಕ್ಷೇತ್ರಗಳಲ್ಲಿಯೂ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸುವಂತಹ ಕೆಲಸವನ್ನು ಮಾಡುತ್ತೇವೆ. 28 ಕ್ಷೇತ್ರಗಳಲ್ಲಿ ಹಾಸನ ಕೂಡ ಒಂದು. ಎನ್‌ಡಿಎ ಭಾಗವಾಗಿ ಈಗ ಜೆಡಿಎಸ್ ಇದೆ. ಹಾಸನದಲ್ಲೂ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ. ಫಲಿತಾಂಶ ಬಂದಾಗ ನೀವು ನೋಡಿ. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನಲ್ಲಿ ಬಿಜೆಪಿ ಮತಗಳು ಸಹಕಾರಿಯಾಗಿದೆ ಎಂದು ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡುವ ಮತದಾರರು ಕಾಂಗ್ರೆಸ್‌ಗೆ ಮತ ನೀಡಲ್ಲ. ಮುಂದಿನ ದಿನಗಳಲ್ಲಿ ಇಬ್ಬರನ್ನು ಕೂರಿಸಿ ಮಾತನಾಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಈಶ್ವರಪ್ಪ ಬಗ್ಗೆ ನೋ ಕಮೆಂಟ್ಸ್

ಕೆ.ಎಸ್. ಈಶ್ವರಪ್ಪ‌ ಅವರ ಹೆಸರು ಹೇಳುತ್ತಿದ್ದಂತೆ ನೋ‌ ಕಮೆಂಟ್ಸ್ ಎಂದ ಸಿ.ಟಿ.ರವಿ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಅದಕ್ಕಾಗಿ ನಮ್ಮ ಹೆಸರನ್ನು ಪದೇ ಪದೆ ತೆಗೆದುಕೊಳ್ಳುತ್ತಿದ್ದಾರೆ. ನಾನು ಅವರ ಜತೆ ಮಾತನಾಡಿದ್ದೇನೆ. ಪಕ್ಷದಲ್ಲೇ ಇರಿ ಅಂತ ಹೇಳಿದ್ದೇನೆ. ಮೋದಿಗಾಗಿ, ಬಿಜೆಪಿಗಾಗಿ ಮತ್ತೊಮ್ಮೆ‌ ಪಕ್ಷ ಮೀರಿದ ಕೆಲಸ ಮಾಡಬೇಡಿ ಅಂತ ಮನವಿ‌ ಮಾಡಿದ್ದೇನೆ ಎಂದು ಹೇಳಿದರು.

ಸಂಸತ್ತಿಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ

ಈಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಬರ ಪರಿಹಾರದ ವಿಚಾರ ಸಾಕಷ್ಟು ಚರ್ಚೆಗೆ ಬಂದಿರುವ ಬಗ್ಗೆ ಹಾಗೂ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಪ್ರಜಾಪ್ರಭುತ್ವದಲ್ಲಿ ಸಂಸತ್ತಿಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದೆ. ನಾವು ಸಮರ್ಪಕವಾಗಿ ದಾಖಲೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Cholera Outbreak: ಕಾಲರಾ ಕೇಸ್ ಉಲ್ಬಣ;‌ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಬಿಟ್ಟ ಬಿಬಿಎಂಪಿ!

ಒಕ್ಕಲಿಗರಿಗೆ ಅನ್ಯಾಯ ಆಗಲು ಬಿಡಲ್ಲ

ಬಿಜೆಪಿಯಲ್ಲಿ ಒಕ್ಕಲಿಗರಿಗೆ ಅನ್ಯಾಯ ಆಗಿಲ್ಲ, ಆಗಲು ಬಿಡಲ್ಲ. ಪಕ್ಷದಲ್ಲಿ ಒಂದು ಅವಕಾಶ ತಪ್ಪಿದರೆ ಮುಂದೆ ಹತ್ತು ಅವಕಾಶಗಳು ಸಿಗುತ್ತವೆ. ಒಕ್ಕಲಿಗರು ರಾಷ್ಟ್ರವಾದಿಗಳಾಗಿದ್ದಾರೆ. ಹೀಗಾಗಿ ರಾಷ್ಟ್ರ ವಾದಿಗಳಿಗೆ ಮತ ಹಾಕುತ್ತಾರೆ. ಒಕ್ಕಲಿಗರು ರಾಷ್ಟ್ರವಾದಿಗಳು ಎಂದು ಅಜೆಂಡಾವನ್ನು ನಾವೇ ಸೆಟ್ ಮಾಡುತ್ತೇವೆ. ಅದೇ ರೀತಿ ನಾವು ಕೆಲಸ ಮಾಡುತ್ತೇವೆ. ಯಾರೇ ಬಂದರೂ ಹಿಂದುತ್ವದ ಅಜೆಂಡಾದ ಅಡಿಯಲ್ಲೇ ಕೆಲಸ ಮಾಡಬೇಕು ಎಂದು ಸಿ.ಟಿ. ರವಿ ಹೇಳಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮುಖಂಡರಾದ ಸಂದೇಶ್‌ ಸ್ವಾಮಿ, ಕೇಬಲ್ ಮಹೇಶ್, ಮೋಹನ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Exit mobile version