ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ (Lok Sabha Election 2024) ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯವಾಗಿದೆ. ಒಂದೆರಡು ಕಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿದರೆ ಎಲ್ಲೆಡೆ ಬಹುತೇಕ ಶಾಂತಿಯುತವಾಗಿ ಮತದಾನ ಜರುಗಿದ್ದು, 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಒಟ್ಟು ಶೇ.69.23 ಮತದಾನ ದಾಖಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.81.48 ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 52.81 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಮೊದಲ ಹಂತದಲ್ಲಿ ಒಟ್ಟು 2,88,08,182 ಮತದಾರರು ಮತ ಚಲಾಯಿಸಿದ್ದು, 14 ಕ್ಷೇತ್ರಗಳಲ್ಲಿ 118 ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದರಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
14 ಕ್ಷೇತ್ರಗಳ ಶೇಕಡಾವಾರು ಮತದಾನ ಪಟ್ಟಿ
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಕ್ಷೇತ್ರ | ಲೋಕಸಭಾ ಚುನಾವಣೆ-2024 | ಲೋಕಸಭಾ ಚುನಾವಣೆ-2019 |
ಉಡುಪಿ-ಚಿಕ್ಕಮಗಳೂರು | ಶೇ. 76.06 | ಶೇ. 76.07 |
ಹಾಸನ | ಶೇ. 77.51 | ಶೇ. 77.35 |
ದಕ್ಷಿಣ ಕನ್ನಡ | ಶೇ. 77.43 | ಶೇ. 77.99 |
ಚಿತ್ರದುರ್ಗ | ಶೇ. 73.11 | ಶೇ. 70.80 |
ತುಮಕೂರು | ಶೇ. 77.70 | ಶೇ. 77.43 |
ಮಂಡ್ಯ | ಶೇ. 81.48 | ಶೇ. 80.59 |
ಮೈಸೂರು–ಕೊಡಗು | ಶೇ. 70.45 | ಶೇ. 69.51 |
ಚಾಮರಾಜನಗರ | ಶೇ. 76.59 | ಶೇ. 75.35 |
ಬೆಂಗಳೂರು ಗ್ರಾಮಾಂತರ | ಶೇ.67.29 | ಶೇ. 64.98 |
ಬೆಂಗಳೂರು ಉತ್ತರ | ಶೇ.54.42 | ಶೇ. 54.76 |
ಬೆಂಗಳೂರು ಸೆಂಟ್ರಲ್ | ಶೇ. 52.81 | ಶೇ. 54.32 |
ಬೆಂಗಳೂರು ದಕ್ಷಿಣ | ಶೇ. 53.15 | ಶೇ. 53.70 |
ಚಿಕ್ಕಬಳ್ಳಾಪುರ | ಶೇ. 76.82 | ಶೇ. 76.74 |
ಕೋಲಾರ | ಶೇ. 78.07 | ಶೇ. 77.25 |
2019ರ ಲೋಕಸಭಾ ಚುನಾವಣೆಯ ಒಟ್ಟು ಮತದಾನ ಎಷ್ಟು?
2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಹಂತ ಸೇರಿ ಒಟ್ಟು ಶೇ. 68.96 ಮತದಾನ ನಡೆದಿತ್ತು. ಮಂಡ್ಯದಲ್ಲಿ ಅತಿಹೆಚ್ಚು ಶೇ. 80.59, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 53.70 ಮತದಾನ ದಾಖಲಾಗಿತ್ತು.
ಇದನ್ನೂ ಓದಿ | Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?
ಇಂಡಿಗನತ್ತ ಮತಗಟ್ಟೆಯಲ್ಲಿ ಮರು ಮತದಾನ ಸಾಧ್ಯತೆ
ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮರು ಮತದಾನ ನಡೆಯುವ ಸಾಧ್ಯತೆ ಇದೆ. ಶುಕ್ರವಾರ ಕೇವಲ 10 ಮತದಾರರು ಮಾತ್ರ ಹಕ್ಕು ಚಲಾವಣೆ ಮಾಡಿದ್ದಾರೆ. ಮತಗಟ್ಟೆಯಲ್ಲಿ ಮೂಲಸೌಕರ್ಯ ಇಲ್ಲ ಎಂದು ಮತದಾರರು ಅಸಮಾಧಾನ ಹೊರಹಾಕಿ ಮತದಾನ ಬಹಿಷ್ಕರಿಸಿದ್ದರು. ಹೀಗಾಗಿ 2 ದಿನಗಳೊಳಗೆ ಅಧಿಕಾರಿಗಳು ಮಾತುಕತೆ ನಡೆಸಿ ಮರು ಮತದಾನ ಮಾಡಿಸುವ ಸಾಧ್ಯತೆ ಇದೆ.
ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಗೆ ಸರಿಯಾಗಿ ಅಂತ್ಯಗೊಂಡಿತು. ನಿಗದಿತ ಸಮಯವಾಗುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಪ್ರಮುಖ ದ್ವಾರಗಳನ್ನು ಮುಚ್ಚಿದರು. ಸಂಜೆ ಐದು ಗಂಟೆಯ ವೇಳೆಗೆ ಶೇ 63.90 ಮತದಾನ ದಾಖಲಾಗಿತ್ತು. ಮತದಾನ ಅವಧಿ ಮುಕ್ತಾಯಗೊಂಡ ಬಳಿಕ 6 ಗಂಟೆ ವೇಳೆಗೆ ಸಾಲಿನಲ್ಲಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇವಿಎಂಗಳಿಗೆ ಸೀಲ್
ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್ ಮುಚ್ಚಿದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್ಗೆ ರವಾನೆಯಾಗಲಿವೆ.
ಇದನ್ನೂ ಓದಿ | Lok Sabha Election 2024: ಹೃದಯಾಘಾತಕ್ಕೆ 3 ಬಲಿ; ಮೈಸೂರು, ತುಮಕೂರಿನಲ್ಲಿ ಮತ ಹಾಕಿದ್ದ, ಕೊಡಗಲ್ಲಿ ವೋಟ್ ಹಾಕಲು ನಿಂತಿದ್ದವ ಸಾವು!
ಭರ್ಜರಿ ಪ್ರತಿಕ್ರಿಯೆ
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂಜಾನೆಯಿಂದಲೇ ಜನರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೇಸಿಗೆ ಬಿಸಿಲು ಹೆಚ್ಚಿರಬಹುದು ಎಂಬ ಕಾರಣಕ್ಕೆ ಮುಂಜಾನೆ ಅವಧಿಯಲ್ಲಿ ಮತಗಟ್ಟೆಗಳ ಬಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡು ಬಂದರು. ಕೆಲವೊಂದು ಜನನಿಬಿಡ ಮತಗಟ್ಟೆಗಳಲ್ಲಿ 2 ಗಂಟೆಗಳಷ್ಟು ಕಾಲ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.