ಬೆಂಗಳೂರು: ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಿದ ಬೆನ್ನಲ್ಲೇ ರಾಜ್ಯಾದ್ಯಂತ ಬಿರುಸಿನ ಕಾರ್ಯಾಚರಣೆ ಮುಂದುವರಿದಿದ್ದು, ಭ್ರಷ್ಟರ ಬೇಟೆ ಆರಂಭವಾಗಿದೆ. ಇದರ ಭಾಗವಾಗಿ ಇಲ್ಲಿನ ಬೆಂಗಳೂರು ಕಂದಾಯ ಭವನ ಕಚೇರಿಯಲ್ಲಿ ವಿಶೇಷ ಶಿರಸ್ತೇದಾರ್ ಲಂಚ (Lokayukta Raid) ಪಡೆಯುತ್ತಿದ್ದಾಗ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.
ಶ್ರೀಕಾಂತ್ ಎಂಬ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಬೆಂಗಳೂರು ನಗರ ಲೋಕಾಯುಕ್ತ ಎಸ್.ಪಿ.ಅಶೋಕ್ ನೇತೃತ್ವದಲ್ಲಿ ದಾಳಿ ನಡೆದಿದೆ. ಕೊಡಿಗೆಹಳ್ಳಿಯಲ್ಲಿ ರಘುಶಂಕರ್ ಎಂಬುವವರ ಜಮೀನನ್ನು ಬಿಡಿಎ ವಶಪಡಿಸಿಕೊಂಡಿತ್ತು. ಹೀಗಾಗಿ ಪರಿಹಾರದ ಹಣಕ್ಕಾಗಿ ಸಿಂಧುತ್ವ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪ್ರಮಾಣ ಪತ್ರಕ್ಕೆ ಪ್ರತಿಯಾಗಿ ಶಿರಸ್ತೇದಾರ್ ಪಿ.ಎಂ.ಶ್ರೀಕಾಂತ್ 13 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ.
ಈ ಸಂಬಂಧ ರಘುಶಂಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡವು, 45 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಪಿ.ಎಂ.ಶ್ರೀಕಾಂತ್ ಅವರನ್ನು ವಶಕ್ಕೆ ಪಡೆದಿದೆ. ತನಿಖೆ ಮುಂದುವರಿಸಿದೆ.
ಇದನ್ನೂ ಓದಿ | ಲೋಕಾಯುಕ್ತ ಬಲವರ್ಧನೆ, ಖಾಲಿ ಸ್ಥಾನ ತುಂಬಲು ಸಂಪುಟ ಸಭೆಯಲ್ಲಿ ನಿರ್ಧಾರ