ರಾಮನಗರ: ಇಲ್ಲಿನ ಚನ್ನಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಶೆಡ್ ಗೋಡೆಗೆ ಲಾರಿ ಡಿಕ್ಕಿ (Lorry accident) ಹೊಡೆದ ಪರಿಣಾಮ ಶೆಡ್‌ವೊಳಗಿದ್ದ ಒಂದು ವರ್ಷದ ಮಗು ಮೃತಪಟ್ಟಿದೆ. ಮಂಗಳವಾರ ತಡರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಮರಿಯಮ್ಮ (1) ಮೃತ ದುರ್ದೈವಿ.
ಗ್ರಾನೈಟ್ ಅನ್‌ಲೋಡ್ ಮಾಡಿದ ಬಳಿಕ ರಿವರ್ಸ್ ತೆಗೆಯುವಾಗ ಲಾರಿಯು ಶೆಡ್ ಗೋಡೆಗೆ ತಾಕಿದ್ದರಿಂದ ಮಗು ಮೇಲೆ ಹಾಲೋ ಬ್ಲಾಕ್ ಬಿದ್ದು ಮೃತಪಟ್ಟಿದೆ. ಶೆಡ್‌ನಲ್ಲಿ ಮೂವರು ಮಕ್ಕಳು ಮಲಗಿದ್ದರು. ಮತ್ತಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ರೇಣುಕಾ ಕುಟುಂಬದವರು ಚನ್ನಪಟ್ಟಣದಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟಡಕ್ಕೆ ನಿರ್ಮಾಣ ಕೆಲಸಕ್ಕಾಗಿ ಬಂದಿದ್ದರು. ಕಟ್ಟಡ ನಿರ್ಮಾಣ ಸ್ಥಳದಲ್ಲಿಯೇ ರೇಣುಕಾ ಕುಟುಂಬ ಶೆಡ್ ಕಟ್ಟಿ ವಾಸವಾಗಿತ್ತು. ಚಾಲಕನ ಅಜಾಗರೂಕತೆಯಿಂದ ಮಗುವೊಂದು ಮೃತಪಟ್ಟಂತಾಗಿದೆ.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ | Rain News: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ತೆಪ್ಪ ಮಗುಚಿ ಇಬ್ಬರು ಸಾವು