ಬೆಂಗಳೂರು: ಇದೊಂದು ವಿಚಿತ್ರ ಪ್ರೇಮ/ಸ್ನೇಹ ಕಥೆ. ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಅವರ ಅನ್ಯೋನ್ಯತೆ ನೋಡಿ ಊರಿನವರು ಮಾತ್ರವಲ್ಲ ಯುವತಿಯ ಮನೆಯವರೇ ಅಪಾರ್ಥ ಮಾಡಿಕೊಂಡರು. ಮಗಳು ಅನ್ನೋದನ್ನೇ ನೋಡದೆ ಚಿತ್ರ ಹಿಂಸೆ ಕೊಡಲು ಶುರು ಮಾಡಿದರು. ಇದರಿಂದ ಬೇಸತ್ತ ಯುವತಿ ನನಗೆ ಮನೆಯವರು ಬೇಡ, ಸ್ನೇಹಿತನೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಮಾತ್ರವಲ್ಲ, ಮನೆ ಬಿಟ್ಟು ಯುವಕನ ಮನೆಯನ್ನು ಸೇರಿಕೊಂಡಿದ್ದಾಳೆ.
ಅವಳ ಹೆಸರು ಸ್ನೇಹಾ, ಅವನ ಹೆಸರು ಹೃಷಿತ್ (ಹೆಸರು ಬದಲಿಸಲಾಗಿದೆ). ಹೃಷಿತ್ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ವಯಸ್ಸು ೧೯. ಅವನಿಗೆ ೧೮ ವರ್ಷದ, ಅದೇ ಕಾಲೇಜಿನ ಸಹನಾ ಎಂಬಾಕೆಯ ಜತೆ ಫ್ರೆಂಡ್‌ಶಿಪ್. ಎಲ್ಲರಿಗೂ ತಿಳಿದಂತೆ ಅದು ಯಾವುದೇ ಕಲ್ಮಶವಿಲ್ಲದ ಸ್ನೇಹವೇ ಆಗಿತ್ತು.
ಆದರೆ, ಹೆಣ್ಣು-ಗಂಡಿನ ಸಂಬಂಧವನ್ನು ಸೀಮಿತ ದೃಷ್ಟಿಕೋನದಲ್ಲಿ ನೋಡುವುದು ವಾಡಿಕೆಯೇ ಆಗಿ ಹೋಗಿದೆ. ಸ್ನೇಹಾ ಹೃಷಿತ್ ಜತೆ ಆತ್ಮೀಯವಾಗಿರುವುದನ್ನು ಯುವತಿಯ ಮನೆಯವರೇ ತಪ್ಪಾಗಿ ತಿಳಿದುಕೊಂಡರು. ಆತನ ಜತೆಗಿರುವುದು ಪ್ರೀತಿಯಲ್ಲ, ಸ್ನೇಹಾ.. ಅವನು ನನ್ನ ಒಳ್ಳೆಯ ಫ್ರೆಂಡ್ ಅಷ್ಟೇ ಎಂದು ಆಕೆ ಹೇಳಿದರೂ ಮನೆಯವರಿಗೆ ಧೈರ್ಯ ಬರಲೇ ಇಲ್ಲ. ಅವರು ಕೂಡಾ ಮನೆಮಗಳ ಬಗ್ಗೆ ಸಹಜವಾದ ಆತಂಕದಿಂದಲೇ ಆಕೆಯನ್ನು ಜೋಪಾನ ಮಾಡಲು ಮುಂದಾಗಿದ್ದಾರೆ.
ಮನೆಯಿಂದ ಹೊರ ಹೋಗಲು ಬಿಡದೆ, ಹೃಷಿತ್ ಜತೆ ಮಾತನಾಡಲು ಬಿಡದೆ ಕಟ್ಟಿ ಹಾಕಿದ್ದಾರೆ. ಈ ಹಿಂಸೆಯನ್ನು ತಾಳಲಾರದೆ ಸ್ನೇಹಾ ಮನೆಯಲ್ಲೇ ಬಿಟ್ಟು ಬಂದಿದ್ದಾಳೆ. ಮಾತ್ರವಲ್ಲ ನಾನು ಹೃಷಿತ್ ಜೊತೆಗೇನೇ ಇರ್ತೇನೆ ಅಂತ ಅವನ ಮನೆಗೇ ಹೋಗಿಬಿಟ್ಟಿದ್ದಾಳೆ.
ಈ ನಡುವೆ ಸ್ನೇಹಾನ ಮನೆಯವರು ಹೃಷಿತ್ ಮನೆಗೆ ಹೋಗಿದ್ದಾರೆ. ಮಗಳನ್ನು ಕಳುಹಿಸಿಕೊಡಿ ಎಂದು ಹೇಳಿದ್ದಾರೆ. ಸ್ವಲ್ಪ ಮಾತಿನ ಚಕಚಕಿಯೂ ಆಗಿದೆ. ನಿಮ್ಮ ಮಗಳನ್ನು ನೀವು ಕರೆದುಕೊಂಡು ಹೋಗಿ ಎಂದು ಅವರೂ ಹೇಳಿದ್ದಾರೆ. ಆದರೆ, ಸ್ನೇಹಾ ಮಾತ್ರ ತಾನು ಯಾವ ಕಾರಣಕ್ಕೂ ಪೋಷಕರ ಜತೆಗೆ ಹೋಗುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾಳೆ.
ಸ್ನೇಹಾಳ ಹಠ ಎಷ್ಟು ಇತ್ತೆಂದರೆ, ಕೊನೆಗೆ ಪ್ರಕರಣ ಚಾಮರಾಜಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎಲ್ಲರೂ ಠಾಣೆಗೆ ಬಂದು ಕುಳಿತರು. ಪೊಲೀಸರು ಕೂಡಾ ಮನೆಗೆ ಹೋಗಮ್ಮ ಎಂದು ಸ್ನೇಹಾಗೆ ಹೇಳಿದರು. ಆದರೆ, ಪೊಲೀಸರು ಎಷ್ಚೇ ಮನವೊಲಿಸಲು ಪ್ರಯತ್ನಪಟ್ಟರೂ ಆಕೆ ಕೇಳಲೇ ಇಲ್ಲ. ನನಗೆ ಪೋಷಕರು ಬೇಡವೇ ಬೇಡ, ಸ್ನೇಹಿತನೇ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಯುವಕ ಕೂಡಾ ನನ್ನನ್ನು ಇಷ್ಟೊಂದು ಸ್ನೇಹದಿಂದ ಕಾಣುವ ಸ್ನೇಹಾಳನ್ನೂ ಈ ಸ್ಥಿತಿಯಲ್ಲಿ ಖಂಡಿತಾ ಬಿಡುವುದಿಲ್ಲ. ಸ್ನೇಹಿತೆಯನ್ನು ನಾನು ಸಾಕುತ್ತೇನೆ ಎಂದು ಪಟ್ಟು ಹಿಡಿದಿದ್ದಾನೆ.
ಕೊನೆಗೆ ಪೊಲೀಸರು ಯುವತಿಯನ್ನು ರಾಜ್ಯ ಮಹಿಳಾ ವಸತಿ ಗೃಹಕ್ಕೆ ಕಳುಹಿಸಿದ್ದಾರೆ. ಇದರಿಂದ ಕಂಗಾಲಾದ ಯುವಕ ಚಾಮರಾಜಪೇಟೆ ಪೊಲೀಸ್ ಠಾಣೆಯ ಮುಂಭಾಗವೇ ೧೪ ಪ್ಯಾರಾಸಿಟಮೋಲ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮುಂದೇನಾಗುತ್ತದೆ ಕಾದು ನೋಡಬೇಕು.