Site icon Vistara News

Lover and Friend : ಇವನೆಂಥಾ ಪ್ರೇಮಿ! ಗೆಳೆಯ ಕೇಳಿದನೆಂದು ಪ್ರಿಯತಮೆಯನ್ನೇ ಬಿಟ್ಕೊಟ್ಟ!

man leaves his lover for friend

ಬೆಂಗಳೂರು: ನೀವು ಪುನೀತ್‌ ರಾಜ್‌ ಕುಮಾರ್‌ (Punit Rajkumar) ಅಭಿನಯದ ಅರಸು ಸಿನಿಮಾ (Arasu movie) ನೋಡಿರಬಹುದು. ಅದರಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ತನ್ನನ್ನು ತುಂಬ ಪ್ರೀತಿಸುತ್ತಿದ್ದ, ಪ್ರೀತಿಗಾಗಿ ಯಾವ ತ್ಯಾಗವನ್ನೂ ಮಾಡಲು ಸಿದ್ಧರಿದ್ದ ಇಬ್ಬರು ಲವರ್ಸ್‌ ಕಂ ಗೆಳತಿಯರನ್ನು ಬೇರೆಯವರಿಗೆ ಮದುವೆ ಮಾಡಿಕೊಡುವ ಸನ್ನಿವೇಶವಿದೆ. ಇಲ್ಲೊಬ್ಬ ಯುವಕ ಅದೇ ರೀತಿ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನೇ (Lover and Friend) ಇನ್ನೊಬ್ಬನಿಗೆ ಧಾರೆ ಎರೆಯಲು ಮುಂದಾಗಿದ್ದಾನೆ (Transfering lover to Male friend). ಆದರೆ, ಈ ಇಲ್ಲಿ ನಡೆದಿರುವುದು ಮಾತ್ರ ಪ್ರೀತಿಯಲ್ಲ, ಔದಾರ್ಯವಲ್ಲ.. ಪಕ್ಕಾ ಫೋರ್ ಟ್ವೆಂಟಿ ಕೆಲಸ! ಫುಲ್‌ ಖತರ್ನಾಕ್‌ ಪ್ಲ್ಯಾನ್‌!

ಇದು ರಾಮನಗರದ ಐಜೂರಿನಲ್ಲಿ ನಡೆದ ಘಟನೆ. ಅವನ ಹೆಸರು ಮಂಜು. ವಯಸ್ಸು 21 ವರ್ಷ. ಅದೂ ಇದೂ ಕೆಲಸ ಮಾಡಿಕೊಂಡಿದ್ದ ಮಂಜು ನೋಡೋಕೆ ಚೆನ್ನಾಗಿದ್ದ. ಸ್ಟೈಲಾಗಿ ಡ್ರೆಸ್‌ ಮಾಡಿಕೊಂಡು ಅಟ್ರಾಕ್ಟ್‌ ಮಾಡುತ್ತಿದ್ದ ಆತ ಹುಡುಗಿಯರನ್ನು ಬಲೆಗೆ ಹಾಕಿಕೊಳ್ಳೋದರಲ್ಲೂ ಪಂಟರು.

ಹಾಗೆ ಅವನ ಬಲೆಗೆ ಬಿದ್ದವಳು ಐಜೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬಳು ಯುವತಿ. ಅದು ಹೇಗೆ ಕನೆಕ್ಟ್‌ ಆಯಿತೋ ಗೊತ್ತಿಲ್ಲ. ಪರಿಚಯವಾದ ಕೆಲವೇ ದಿನಗಳಲ್ಲಿ ದೇಹವೆರಡು ಜೀವ ಒಂದು ಎಂಬಷ್ಟು ಹತ್ತಿರವಾದರು! ಹಲವು ಬಾರಿ ಭೇಟಿ ಮಾಡಿದ್ದರು. ಜತೆಗೆ ಫೋಟೊ ತೆಗೆಸಿಕೊಂಡಿದ್ದರು. ಐಸ್‌ ಕ್ರೀಂ, ಫಿಜ್ಜಾ ಅಂತ ಒಂದೇ ತಟ್ಟೆಯಲ್ಲಿ ಹಂಚಿಕೊಂಡಿದ್ದರು.

ಮಂಜುಗೊಬ್ಬ ಸ್ನೇಹಿತ ಇದ್ದ, ಹೆಸರು ರವಿ

ಇಂಥ ಮಂಜುಗೆ ಒಬ್ಬ ಫ್ರೆಂಡ್‌ ಇದ್ದ. ಹಸರು ರವಿ. ವಯಸ್ಸು 33. ಅವರಿಬ್ಬರು ಒಂದೇ ಊರಿನವರು. ಈ ಮಂಜು ಹುಡುಗಿಯರ ಜತೆಗಿನ ತನ್ನ ಸಾಹಸದ ಕಥೆಗಳನ್ನೆಲ್ಲ ರವಿ ಜತೆಗೆ ಹೇಳುತ್ತಿದ್ದ. ಇವತ್ತು ಅವಳನ್ನು ಪಟಾಯಿಸಿದೆ, ಅವಳು ಹಂಗಂದ್ಲು, ಅವಳು ಹಾಗಿದ್ದಾಳೆ ಎಂದೆಲ್ಲ ವಿವರಣೆ ನೀಡುತ್ತಿದ್ದ. ಹಾಗೆ ಈ ಹುಡುಗಿಯ ವಿಚಾರವನ್ನೂ ಹೇಳಿದ್ದ.

ಹುಡುಗಿಯ ಜತೆಗೆ ತಾನಿರುವ ಫೋಟೊಗಳು, ಆತ್ಮೀಯ ಕ್ಷಣಗಳ ಚಿತ್ರಗಳನ್ನೆಲ್ಲ ಮಂಜು ರವಿಗೆ ತೋರಿಸಿದ್ದಾನೆ. ರವಿ ಕೂಡಾ ಅವರಿಬ್ಬರು ಜತೆಯಾಗಿ ಓಡಾಡುವುದನ್ನು ನೋಡಿದ್ದ. ಈ ಹೊತ್ತಿನಲ್ಲಿ ರವಿಗೆ ಒಂದು ಯೋಚನೆ ಬಂದಿದೆ. ನೀನು ನಿನ್ನ ಗರ್ಲ್‌ಫ್ರೆಂಡನ್ನು ನನಗೆ ಬಿಟ್ಟುಕೊಡ್ತೀಯಾ ಎಂದು ಕೇಳಿದ್ದಾನೆ. ನಿನಗಾದರೋ ಎಷ್ಟು ಹುಡುಗಿಯರನ್ನು ಬೇಕಾದರು ಪಟಾಯಿಸೋ ತಾಕತ್ತಿದೆ. ಇವಳನ್ನು ಬಿಟ್ಟುಕೊಡು ಅಂದಿದ್ದಾನೆ. ಅದಕ್ಕೆ ಉಬ್ಬಿ ಹೋದ ಮಂಜು ʻತಗೋ ಅವಳನ್ನುʼ ಅಂದಿದ್ದಾನೆ! ರವಿ ಅವಳನ್ನು ಮದುವೆ ಮಾಡಿಕೊಳ್ಳುವುದು ಎಂದು ತೀರ್ಮಾನವಾಗಿದೆ.

ಗೆಳೆಯನಾಗಿ ಗರ್ಲ್‌ಪ್ರೆಂಡನ್ನೇ ತ್ಯಾಗ ಮಾಡುವ ತ್ಯಾಗವೀರನಾಗಿ ಮೆರೆಯುವ ಉದ್ದೇಶದಿಂದ ಮಂಜು ಹುಡುಗಿಯನ್ನು ಬಿಟ್ಟುಕೊಡ್ತೀನಿ ಅಂದಿದ್ದಾನೆ!

ನೀನು ಅವನ ಜತೆ ಹೋಗು ಅಂದ!

ಈ ನಡುವೆ, ಮಂಜು ತನ್ನ ಪ್ರೇಯಸಿಯನ್ನು ಗೆಳೆಯನ ಜತೆ ಕಳುಹಿಸಲು ಪ್ಲ್ಯಾನ್‌ ಮಾಡಿದ್ದಾನೆ. ನಿಜವಾಗಿ ಒಬ್ಬ ಗೆಳತಿಯನ್ನು ಇನ್ನೊಬ್ಬ ಗೆಳೆಯನಾಗಿ ಬಿಟ್ಟು ಕೊಡುವುದೇ ಆದರೂ ಅದೊಂದು ಸ್ಮೂತ್‌ ಟ್ರಾನ್ಸಿಷನ್‌ ಆಗಬೇಕು. ತನ್ನ ಉಪಸ್ಥಿತಿಯಲ್ಲಿ ಅವರಿಬ್ಬರನ್ನು ಭೇಟಿ ಮಾಡಿಸಬೇಕು. ಅವರಿಬ್ಬರಿಗೆ ಮಾತನಾಡಲು ಅವಕಾಶ ಕೊಡಬೇಕು. ನನಗಿಂತಲೂ ನಿನಗೆ ಅವನೇ ಉತ್ತಮ ಲವರ್‌ ಆಗಬಲ್ಲ ಎಂದು ತೋರಿಸಬೇಕು. ಬಳಿಕವಷ್ಟೇ ಪ್ರೀತಿ, ತ್ಯಾಗ ಎಲ್ಲ. ಅದಕ್ಕೆ ಅವಳ ಒಪ್ಪಿಗೆಯಂತೂ ಬೇಕೇಬೇಕು.

ಆದರೆ, ಇಲ್ಲಿ ಈ ಮಂಜು ಮಾಡಿದ್ದೇನೆಂದರೆ, ನೀನು ನನ್ನ ಲವರ್‌ ಅಲ್ವಾ? ನಾನು ಹೇಳಿದಂತೆ ಕೇಳು. ನಾಳೆಯಿಂದ ನೀನು ನನ್ನ ಗೆಳೆಯನ ಲವರ್‌ ಆಗಬೇಕು ಅಂತ ಹೇಳುವಷ್ಟು ಸಲೀಸಾಗಿ, ಒಬ್ಬ ಹುಡುಗಿಯನ್ನು ಅಂಗಡಿಯಲ್ಲಿ ಸಿಗುವ ಗೊಂಬೆಯ ಹಾಗೆ ಹಸ್ತಾಂತರ ಮಾಡಲು ಮುಂದಾಗಿದ್ದಾನೆ!

ಭೇಟಿಯಾಗಬೇಕು ಬಾ ಅಂದ! ಅವನ ಜತೆ ಹೋಗು ಅಂದ!

ಮಂಜು ತನ್ನ ಪ್ರೇಯಸಿಗೆ ಕರೆ ಮಾಡಿ ಸೆಪ್ಟೆಂಬರ್‌ 19ರಂದು ಸಿಗ್ತೀಯಾ ಎಂದು ಕೇಳಿದ್ದಾನೆ. ನಿಜವೆಂದರೆ ಆಗ ಅವಳಿಗೆ ಎಕ್ಸಾಂಗಳು ನಡೆಯುತ್ತಿದ್ದವು. ಸೆ. 19 ಕೊನೆಯ ಎಕ್ಸಾಂ ಇತ್ತು. ಎಕ್ಸಾಂ ಕಾರಣದಿಂದ ಅವರಿಬ್ಬರು ಭೇಟಿಯಾಗಿರಲಿಲ್ಲ. ಹೀಗಾಗಿ ಎಕ್ಸಾಂ ಮುಗಿಸಿ ಭೇಟಿಯಾಗಲು ಆಕೆ ತುದಿಗಾಲಲ್ಲಿ ನಿಂತಿದ್ದಳು.

ಆವತ್ತು ಆಕೆಯ ಭೇಟಿಯ ಉತ್ಸಾಹ ಎಷ್ಟಿತ್ತೆಂದರೆ ಎಕ್ಸಾಂನ್ನು ಅರ್ಧದಲ್ಲೇ ಮುಗಿಸಿ ಮಂಜುಗಾಗಿ ಅವನು ಹೇಳಿದ ಜಾಗಕ್ಕೆ (ವಿನಾಯಕ ನಗರದ ಆಂಜನೇಯ ದ್ವಾರ) ಓಡೋಡಿ ಬಂದಳು. ಆದರೆ, ಅಲ್ಲಿ ಮಂಜು ಇರಲಿಲ್ಲ. ಅಷ್ಟು ಹೊತ್ತಿಗೆ ಕರೆ ಮಾಡಿದ ಮಂಜು, ಅಲ್ಲೇ ಪಕ್ಕದಲ್ಲಿ ನನ್ನ ಫ್ರೆಂಡ್‌ ರವಿ ಇದ್ದಾನೆ. ನೀನು ಅವನ ಜತೆ ಹೋಗು ಎಂದ. ಅಷ್ಟು ಹೊತ್ತಿಗೆ ರವಿ ಕಾರಿನಿಂದ ಇಳಿದು ಅವನ ಹತ್ತಿರ ಬಂದು ಹಲೋ ಎಂದ.

ಆದರೆ, ಹುಡುಗಿ ಹಾಗೆಲ್ಲ ಯಾರ್ಯಾರ ಜತೆಗೆ ಹೋಗಲ್ಲ ಎಂದು ಜಗಳ ಮಾಡಿದ್ದಾಳೆ. ಆಗ ಮಂಜು ತನ್ನ ನಿಜ ಬಣ್ಣ ಬಿಚ್ಚಿಟ್ಟಿದ್ದಾನೆ. ಅವನು ನನ್ನ ಫ್ರೆಂಡ್‌. ನೀನು ಅವನ ಜತೆಗೆ ಹೋಗಲೇಬೇಕು ಎಂದು ಆಜ್ಞಾಪಿಸಿದ್ದಾನೆ. ಆಕೆ ಆಗಲ್ಲ ಅಂದಿದ್ದಕ್ಕೆ ʻಗೊತ್ತಲ್ಲ. ನಾನು-ನೀನು ಜತೆಗಿದ್ದಾಗ ತೆಗೆದ ಫೋಟೊಗಳು ನನ್ನ ಹತ್ರ ಇದೆ. ನೀವು ಹೋಗದಿದ್ದರೆ ಅದೆಲ್ಲವೂ ವೈರಲ್‌ ಆಗ್ತವೆʼʼ ಎಂದು ಬೆದರಿಸಿದ್ದಾನೆ.

ಮಂಜುವಿನ ಬ್ಲ್ಯಾಕ್‌ಮೇಲ್‌ಗೆ ಹೆದರಿದ ಯುವತಿ ಕೊನೆಗೂ ರವಿಯ ಕಾರು ಹತ್ತಿದ್ದಾಳೆ. ಕಾರು ಹತ್ತಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಹುಡುಗಿಗೆ ಶಾಕ್‌. ಯಾಕೆಂದರೆ ಆಕೆಯೋ ಇವನ ಜತೆ ಒಂದು ರೌಂಡ್‌ ಹೋಗಿ ವಾಪಸ್‌ ಬರಬಹುದು ಅಂದುಕೊಂಡಿದ್ದರೆ, ರವಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಏನೋ ದಾರವನ್ನು ಆಕೆಯ ಕೊರಳಿಗೆ ಕಟ್ಟಿ ʻಇನ್ನು ನೀನು ನನ್ನ ಹೆಂಡತಿ, ನಾನೇ ಗಂಡʼ ಎಂದಿದ್ದಾನೆ.

ಯುವತಿಗೆ ಏನಾಗುತ್ತಿದೆ ಎಂದು ಗೊತ್ತಾಗುವ ಹೊತ್ತಿಗೆ, ʻನಾವು ಇನ್ನು ಈ ಊರಲ್ಲಿ ಇರುವುದು ಬೇಡ. ಬೇರೆ ಎಲ್ಲಾದರೂ ಹೋಗೋಣ. ಇಲ್ಲಿ ಇದ್ದರೆ ನಿನ್ನ ಮನೆಯವರು ಹಲ್ಲೆ ಮಾಡಬಹುದು..ʼʼ ಎಂದೆಲ್ಲ ಮರುಳು ಮಾತನಾಡಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.

ಅವರು ಹೋಗಿದ್ದು ಚಾಮರಾಜ ನಗರಕ್ಕೆ. ಅಲ್ಲಿ ಆತನ ಸಂಬಂಧಿಕರ ಮನೆಯಿದೆ. ಅಲ್ಲಿ ಹೋಗಿ ʻನಾನು ಮದುವೆಯಾಗಿ ಬಂದಿದ್ದೇನೆʼ ಎಂದು ಹೇಳಿದ್ದಾನೆ. ಆದರೆ, ಇವರ ವ್ಯವಹಾರ ಏನೂ ಸರಿ ಇದ್ದಂತಿಲ್ಲ ಎಂದು ಅಂದಾಜು ಮಾಡಿದ ಆ ಮನೆಯವರು ರಾತ್ರಿಯೆಲ್ಲ ಬಂದು ನಮ್ಮ ಮನೆಯಲ್ಲಿ ಇರುವುದು ಬೇಡ. ನಾಳೆ ಬೆಳಗ್ಗೆ ಬನ್ನಿ ಎಂದು ಸಾಗಹಾಕಿದ್ದಾರೆ.

ಚಾಮರಾಜನಗರದ ಮನೆಯಲ್ಲಿ ಉಳಿಯಲು ಅವಕಾಶ ಸಿಗದೆ ಇದ್ದಾಗ ರವಿ ಕಾರನ್ನು ಓಡಿಸಿಕೊಂಡು ತುಮಕೂರಿಗೆ ಹೋಗಿದ್ದಾನೆ. ಅಲ್ಲಿ ಅವನು ಆತ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರ ಬಳಿಗೆ ಹೋಗಿದ್ದಾನೆ. ನಾನು ಇವಳನ್ನು ಬಹಳ ವರ್ಷದಿಂದ ಪ್ರೀತಿ ಮಾಡುತ್ತಿದ್ದೆ. ಉಳಿದುಕೊಳ್ಳಲು ಅವಕಾಶ ಬೇಕಿತ್ತು ಎಂದು ಹೇಳಿದ್ದಾನೆ. ಅವರು ನಂಬಿ ಆಸರೆ ಕೊಟ್ಟಿದ್ದಾರೆ. ರವಿ ಅವಳನ್ನು ಮನೆಯಲ್ಲಿ ಕೂಡಿ ಹಾಕಿದ್ದ.

ಈ ನಡುವೆ, ಹುಡುಗಿಯ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಆಕೆಯ ಮೊಬೈಲ್‌ ಟ್ರ್ಯಾಕ್‌ ಮಾಡಿದಾಗ ಆಕೆ ತುಮಕೂರಿನಲ್ಲಿ ಇರುವುದು ಗೊತ್ತಾಗಿದೆ. ಪೊಲೀಸರು ತಮ್ಮನ್ನು ಹುಡುಕುತ್ತಿರುವ ಸುಳಿವು ತಿಳಿಯದ ರವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ರವಿ ಮತ್ತು ಯುವತಿಯನ್ನು ಕರೆದುಕೊಂಡು ಬಂದ ಪೊಲೀಸರು ಖದೀಮ ಮಂಜುವನ್ನೂ ಅರೆಸ್ಟ್‌ ಮಾಡಿದ್ದಾರೆ. ಹುಡುಗಿಯರನ್ನು ಮೋಹದ ಬಲೆಗೆ ಬೀಳಿಸಿ ವಂಚಿಸುವ ಮಂಜು ಮತ್ತು ರವಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಐಜೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Letter to friend : ಹಾಯ್‌ ಪುಟ್ಟಾ.. ಹೇಗಿದಿಯಾ?; ದೇವರ ಹುಂಡಿಯಲ್ಲಿ ಓಡಿ ಹೋದ ಗೆಳತಿಗೊಂದು ಪತ್ರ!

ಇಲ್ಲಿಗೆ ಕಥೆ ಮುಗಿದಿಲ್ಲ! ಈ ರವಿ ಎಂಥಾ ಕಿಲಾಡಿ ಎಂದರೆ!

ಮಂಜುವಿನ ಬಳಿ ಗರ್ಲ್‌ಫ್ರೆಂಡನ್ನು ಬಿಟ್ಟುಕೊಡು ಮದುವೆಯಾಗ್ತೀನಿ ಅಂತ ಹೇಳಿದ್ದ ರವಿ ಎಂಥ ಕಿಲಾಡಿ ಎಂದರೆ ಅವನಿಗೆ ಆಗಲೇ ಮದುವೆಯಾಗಿತ್ತು. ಕಟ್ಟಿಕೊಂಡ ಹೆಂಡತಿ ಇರುವಾಗಲೇ ಇನ್ನೊಂದು ಹುಡುಗಿಗೆ ಆಸೆಪಟ್ಟು, ಆಕೆಯನ್ನು ಮದುವೆ ಮಾಡಿಕೊಳ್ಳುತ್ತೇನೆ, ಬಿಟ್ಟುಕೊಡು ಎಂದಿದ್ದಾನೆ. ಮಂಜುವಿಗೆ ಕೂಡಾ ಆತನ ಹಿನ್ನೆಲೆ ಚೆನ್ನಾಗಿ ಗೊತ್ತಿತ್ತು. ಆದರೂ ಆತ ಪ್ರಾಣದಂತೆ ಪ್ರೀತಿಸುತ್ತಿದ್ದ ಆ ಹುಡುಗಿಯನ್ನು ಈ ಕಟುಕನ ಕೈಗೆ ಕೊಡಲು ಮುಂದಾಗಿದ್ದ.

ಅಂದ ಹಾಗೆ ಅಪರಿಚಿತ ವ್ಯಕ್ತಿಗಳ ಜತೆ ಹಿಂದೆ ಮುಂದೆ ನೋಡದೆ ವ್ಯವಹಾರ ಮಾಡುವ ಹುಡುಗಿಯರಿಗೂ ಇದೊಂದು ಪಾಠವಾಗುವ ಘಟನೆ!

Exit mobile version