ಮತ್ತೀಕೆರೆ ಜಯರಾಮ್, ಮಂಡ್ಯ
ಮದ್ದೂರು ವಿಧಾನಸಭಾ ಕ್ಷೇತ್ರವು ಮರುವಿಂಗಡಣೆಯಲ್ಲಿ ಅಳಿದ ಕಿರುಗಾವಲು ಕ್ಷೇತ್ರದಿಂದ ಚಿಕ್ಕರಸಿನಕೆರೆ ಹೋಬಳಿಯನ್ನು ಕೂಡಿಕೊಂಡಿತು. ವಿಸ್ತಾರವಾದ ಕೊಪ್ಪ ಹೋಬಳಿಯ ಅರ್ಧಕ್ಕೂ ಹೆಚ್ಚು ಭಾಗವನ್ನು ಕಳೆದುಕೊಂಡಿದೆ. ಶಿವಪುರ ಧ್ವಜ ಸತ್ಯಾಗ್ರಹ ಸೌಧ, ವೈದ್ಯನಾಥಪುರದ ವೈದ್ಯನಾಥೇಶ್ವರ ದೇಗುಲ, ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇಗುಲ ಇಲ್ಲಿವೆ. ಗೋವಿನ ಹಾಡು ರಚಿಸಿದ ಅಜ್ಞಾತ ಕವಿ ಈ ಕ್ಷೇತ್ರದವರೆನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಸ್ವಕ್ಷೇತ್ರವಿದು. ಕೃಷ್ಣ ಅವರು ಇಲ್ಲಿಂದಲೇ ಗೆದ್ದು, 1999ರಲ್ಲಿ ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಮದ್ದೂರಿಗೆ ಹಿರಿಮೆಯಿದೆ.
ಚುನಾವಣಾ ಹಿನ್ನೋಟ
2004ರ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೋಲಿನ ಭೀತಿಯಿಂದ ಕ್ಷೇತ್ರ ತೊರೆದು, ಚಾಮರಾಜಪೇಟೆಯಲ್ಲಿ ನೆಲೆ ಕಂಡುಕೊಂಡರು. ನೆರೆಯ ಕಿರುಗಾವಲು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಡಿ.ಸಿ.ತಮ್ಮಣ್ಣ ಅವರಿಗೆ ಕೃಷ್ಣ ಮದ್ದೂರಿನಿಂದ ಟಿಕೆಟ್ ಕೊಡಿಸಿದ್ದರು. ತಮ್ಮಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಖಾಸಾ ಬೀಗರು. ಆಗ ಜೆಡಿಎಸ್ ಪಕ್ಷದಲ್ಲಿ ಎಂ.ಎಸ್. ಸಿದ್ದರಾಜು ಮತ್ತು ಬಿ.ವಿವೇಕಾನಂದ ಅವರಿಬ್ಬರಿಗೆ ಬಿ ಫಾರಂ ನೀಡಲಾಗಿತ್ತು.
ಉದ್ದೇಶಪೂರ್ವಕವಾಗಿಯೇ ಗೊಂದಲ ಸರಿಪಡಿಸದೆ, ಕೈಚೆಲ್ಲಿದ ದಳಪತಿಗಳು ಬೀಗರ ಗೆಲುವಿಗೆ ರಹದಾರಿ ಮಾಡಿಕೊಟ್ಟರು. ಒಂದರ್ಥದಲ್ಲಿ ಜೆಡಿಎಸ್ ವರಿಷ್ಠರು ಇಲ್ಲಿ ಬೀಗರ ಔತಣಕ್ಕೆ ತಮ್ಮನ್ನೇ ನಂಬಿದವರನ್ನು ಬಲಿಕೊಟ್ಟಂತಾಯಿತು.
2008ರಲ್ಲಿ ಜೆಡಿಎಸ್ ವರಿಷ್ಠರು ಎಚ್ಚೆತ್ತು ಎಂ.ಎಸ್.ಸಿದ್ದರಾಜು ಅವರಿಗೆ ಟಿಕೆಟ್ ನೀಡಿದರು. ರೈತಪರ ಹೋರಾಟಗಾರ ಸಿದ್ದರಾಜು ಪರ ಕ್ಷೇತ್ರಾದ್ಯಂತ ಅಲೆ ಎದ್ದು, ಗೆಲುವು ಸಾಧಿಸಿದರು. ಡಿ.ಸಿ.ತಮ್ಮಣ್ಣ(ಕಾಂಗ್ರೆಸ್) ಮತ್ತು ಮಧು ಜಿ.ಮಾದೇಗೌಡ(ಬಿಜೆಪಿ) ಇಬ್ಬರ ನಡುವಿನ ಮತ ವಿಭಜನೆ ಜತೆಗೆ ಕ್ಷೇತ್ರ ಮರುವಿಂಗಡಣೆ ಸಿದ್ದರಾಜು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
2008ರಲ್ಲೇ ಶಾಸಕರಾಗಿ ಶತದಿನ ತುಂಬಿಸುವಷ್ಟರಲ್ಲಿ ಸಿದ್ದರಾಜು ಅನಾರೋಗ್ಯದಿಂದ ನಿಧನರಾದರು. ಅದೇ ವರ್ಷ ಉಪ ಚುನಾವಣೆ ಎದುರಾಯಿತು. ಸಿದ್ಧರಾಜು ಅವರ ಜನಪ್ರಿಯತೆಯನ್ನು ಮನಗಂಡ ಜೆಡಿಎಸ್ ಸಿದ್ದರಾಜು ಪತ್ನಿ ಕಲ್ಪನಾ ಅವರನ್ನು ಕಣಕ್ಕಿಳಿಸಿತು. ಆಗ ಮಧು ಮಾದೇಗೌಡ ಅವರನ್ನು 11 ತಿಂಗಳ ಅಲ್ಪಾವಧಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಬಿಜೆಪಿ ಡಿ.ಸಿ.ತಮ್ಮಣ್ಣ ಅವರನ್ನು ಕಾಂಗ್ರೆಸ್ ನಿಂದ ಸೆಳೆದು, ಸ್ಪರ್ಧೆಗೆ ಒಡ್ಡಿತು. ಸಿದ್ದರಾಜು ನಿಧನದ ಅನುಕಂಪದ ಅಲೆಯಲ್ಲಿ ಕಲ್ಪನಾ ಸಿದ್ದರಾಜು 18 ಸಾವಿರ ಮತಗಳಿಗೂ ಹೆಚ್ಚು ಅಂತರದ ಭರ್ಜರಿ ಗೆಲುವು ಸಾಧಿಸಿದರು. ಮಧು ಮಾದೇಗೌಡರಿಗೆ ಅಲ್ಪಾವಧಿ ಮೇಲ್ಮನೆ ಸದಸ್ಯತ್ವ ಕರುಣಿಸಿದ್ದೂ ಬಿಜೆಪಿ ನೆರವಿಗೆ ಬರಲಿಲ್ಲ. ಕಾಂಗ್ರೆಸ್ ಪಕ್ಷದ ಎಸ್.ಗುರುಚರಣ್ ಠೇವಣಿ ಜಪ್ತಿಗೊಂಡಿತು.
2013ರಲ್ಲಿ ಡಿ.ಸಿ.ತಮ್ಮಣ್ಣ ತಮ್ಮ ಬೀಗರಾದ ಎಚ್.ಡಿ.ದೇವೇಗೌಡರೊಂದಿಗೆ ಮತ್ತೆ ರಾಜಕೀಯ ಸಂಬಂಧ ಕುದುರಿಸಿ, ಜೆಡಿಎಸ್ ಗೆ ಪಕ್ಷಾಂತರ ಮಾಡಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದರು. ಜೆಡಿಎಸ್ ತನ್ನ ಹಾಲಿ ಶಾಸಕಿ ಕಲ್ಪನಾ ಸಿದ್ದರಾಜು ಅವರಿಗೆ ಟಿಕೆಟ್ ನಿರಾಕರಿಸಿ, ತಮ್ಮಣ್ಣರನ್ನು ಕಣಕ್ಕಿಳಿಸಿತು. ಕಾಂಗ್ರೆಸ್ ಪಕ್ಷಕ್ಕೆ ಮರಳಿ, ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಧು ಜಿ.ಮಾದೇಗೌಡ ದಯನೀಯ ಸೋಲು ಕಂಡರು.
2018ರಲ್ಲಿ ಮತ್ತೆ ಡಿ.ಸಿ.ತಮ್ಮಣ್ಣ(ಜೆಡಿಎಸ್) ಹಾಗೂ ಮಧು ಜಿ.ಮಾದೇಗೌಡ(ಕಾಂಗ್ರೆಸ್) ಮುಖಾಮುಖಿಯಾದರು. ತಮ್ಮಣ್ಣ ಗೆಲುವಿನ ಅಂತರ ಮತ್ತಷ್ಟು ಹೆಚ್ಚಿತು. ಇದರೊಂದಿಗೆ ಮಧು ಜಿ.ಮಾದೇಗೌಡ ಸತತ ನಾಲ್ಕನೇ ಸೋಲು ಕಂಡಂತಾಯಿತು.
2023ರ ಮುಖಾಮುಖಿ
ಡಿ.ಸಿ.ತಮ್ಮಣ್ಣ ಅವರು 80ರ ಇಳಿ ವಯಸ್ಸಿನಲ್ಲೂ ಸಾಕಷ್ಟು ಉತ್ಸಾಹದಿಂದಲೇ ಮತ್ತೊಂದು ಚುನಾವಣೆಗೆ ಅಣಿಯಾಗಿದ್ದಾರೆ. ಇದೇ ಕಡೆಯ ಚುನಾವಣೆ ಎನ್ನುತ್ತಿರುವ ಅವರಿಗೆ ಜೆಡಿಎಸ್ ಟಿಕೆಟ್ ಪಕ್ಕಾ ಆಗಿದೆ. ಕಿರುಗಾವಲಿನಲ್ಲಿ ಒಮ್ಮೆ, ಮದ್ದೂರಿನಲ್ಲಿ 3 ಬಾರಿ ಗೆದ್ದಿರುವ ತಮ್ಮಣ್ಣ ಎದುರು ಸತತ ನಾಲ್ಕು ಸೋಲು(ಒಮ್ಮೆ ಕಿರುಗಾವಲು, 3 ಬಾರಿ ಮದ್ದೂರು) ಕಂಡಿರುವ ಮಧು ಜಿ.ಮಾದೇಗೌಡ ಸಿದ್ಧರಿಲ್ಲ. ಈಚೆಗಷ್ಟೇ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮಧು ಜಿ.ಮಾದೇಗೌಡ ಸೋಲಿನ ಸುಳಿಯಿಂದ ಹೊರ ಬಂದು, ರಾಜಕೀಯ ಭವಿಷ್ಯ ಕಟ್ಟಿಕೊಂಡಿದ್ದಾರೆ.
ಈ ಬಾರಿ ತಮ್ಮಣ್ಣ ಎದುರು ಕಾಂಗ್ರೆಸ್ ನಿಂದ ಎಸ್.ಎಂ.ಕೃಷ್ಣ ಕುಟುಂಬದ ಕುಡಿ(ಕೃಷ್ಣರ ಸಹೋದರ ಎಸ್.ಎಂ.ಶಂಕರ್ ಪುತ್ರ) ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅಭ್ಯರ್ಥಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಪ್ರಕಟಿಸಿದ್ದಾರೆ. ಇನ್ನು, ಸಮ್ಮಿಶ್ರ ಸರ್ಕಾರ ಕೆಡವಿದ ಕಿಂಗ್ ಪಿನ್ ಎಂದೇ ಕರೆಯಲ್ಪಡುತ್ತಿರುವ ಕೆಸಿನೋ ಮಾಲೀಕ ಕದಲೂರು ಉದಯ್ ಸದ್ಯಕ್ಕೆ ಯಾವುದೇ ಪಕ್ಷದಲ್ಲೂ ಗುರ್ತಿಸಿಕೊಳ್ಳದೆ, ಸಮಾಜ ಸೇವೆಯ ಹೆಸರಿನಲ್ಲಿ ಕ್ಷೇತ್ರಾದ್ಯಂತ ಹಣದ ಹೊಳೆಯನ್ನೇ ಹರಿಸಿ, ಸಂಘಟನೆಯಲ್ಲಿ ತೊಡಗಿದ್ದಾರೆ. ಪಕ್ಷಾತೀತವಾಗಿ ಉದಯ್ ಹುಯಿಲೆಬ್ಬಿಸುತ್ತಿದ್ದಾರೆ.
ಬಿಜೆಪಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮನ್ಮುಲ್ ನಿರ್ದೇಶಕ ಸಾದೊಳಲು ಸ್ವಾಮಿ ಟಿಕೆಟ್ ಆಕಾಂಕ್ಷಿಗಳು. ಬಿಜೆಪಿಯಲ್ಲಿ ಉದಯ್ ಗೆ ಬಾಗಿಲು ತೆರೆದಿದೆಯಾದರೂ ಅವರು ಕಾಂಗ್ರೆಸ್ ಟಿಕೆಟ್ ಎದುರು ನೋಡುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸುಮಲತಾ ಮತ್ತು ಅಂಬರೀಶ್ ಪುತ್ರ ಅಭಿಷೇಕ್ ಕೂಡ ಮದ್ದೂರು ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪೈಕಿ ಅಭಿಷೇಕ್ ಆಯ್ಕೆ ಯಾವುದೆನ್ನುವುದು ರಹಸ್ಯ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಡಿ.ಸಿ.ತಮ್ಮಣ್ಣ(ಜೆಡಿಎಸ್)
2. ಎಸ್.ಗುರುಚರಣ್(ಕಾಂಗ್ರೆಸ್)
3. ಎಸ್.ಪಿ.ಸ್ವಾಮಿ/ಸಿ.ಪಿ.ಉಮೇಶ್(ಬಿಜೆಪಿ)
4. ಕದಲೂರು ಉದಯ್ (ಸೂಕ್ತ ಪಕ್ಷಕ್ಕೆ ಹುಡುಕಾಟ ಇಲ್ಲವೇ ಪಕ್ಷೇತರರಾಗಿ ಸ್ಪರ್ಧೆ)
5. ಅಭಿಷೇಕ್ ಅಂಬರೀಶ್ (ಸ್ಪರ್ಧೆ ಬಗ್ಗೆ ಖಚಿತತೆ ಇಲ್ಲ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದಲ್ಲೂ ಈ ಹೆಸರು ಹರಿದಾಡುತ್ತಿದೆ)
ಇಸವಿ | ವಿಜೇತ ಅಭ್ಯರ್ಥಿ(ಮತ) | ಪರಾಜಿತ ಅಭ್ಯರ್ಥಿ(ಮತ) | ಅಂತರ |
2004 | ಡಿ.ಸಿ.ತಮ್ಮಣ್ಣ (ಕಾಂಗ್ರೆಸ್) 38,991 | ಎಂ.ಎಸ್.ಸಿದ್ದರಾಜು (ಪ) 28,256 | 10,735 |
2008 | ಎಂ.ಎಸ್.ಸಿದ್ದರಾಜು (ಜೆಡಿಎಸ್) 49,954 | ಡಿ.ಸಿ.ತಮ್ಮಣ್ಣ (ಕಾಂಗ್ರೆಸ್) 42,364 | 7,590 |
2013 | ಡಿ.ಸಿ.ತಮ್ಮಣ್ಣ (ಜೆಡಿಎಸ್) 80,926 | ಮಧು ಮಾದೇಗೌಡ (ಕಾಂಗ್ರೆಸ್) 48,968 | 31,958 |
2018 | ಡಿ.ಸಿ.ತಮ್ಮಣ್ (ಜೆಡಿಎಸ್) 1,09,239 | ಮಧು ಮಾದೇಗೌಡ (ಕಾಂಗ್ರೆಸ್ ) 55,209 | 54,030 |
ಕ್ರ.ಸಂ. | ವಿಧಾನಸಭಾ ಕ್ಷೇತ್ರ | ಒಟ್ಟು ಮತದಾರರು | ಪುರುಷ ಮತದಾರರು | ಮಹಿಳಾ ಮತದಾರರು | ಇತರೆ ಮತದಾರರು |
01 | ಮದ್ದೂರು | 2,05,539 | 1,00,775 | 1,04,746 | 18 |
ಜಾತಿವಾರು ಮತದಾರರ ವಿವರ
ಲಿಂಗಾಯತ | ಮುಸ್ಲಿಂ | ಎಸ್ಸಿ | ಕುರುಬ | ಎಸ್ಟಿ |
9,000 | 12,000 | 35,000 | 11,000 | 4,000 |
ಒಕ್ಕಲಿಗ | ವಿಶ್ವಕರ್ಮ | ಸವಿತಾ ಸಮಾಜ | ಇತರೆ | |
1,02,000 | 4,000 | 4,000 | 20,000 |
ಇದನ್ನೂ ಓದಿ | ಎಲೆಕ್ಷನ್ ಹವಾ | ಕೆ.ಆರ್. ಪೇಟೆ | ಕಮಲ ಅರಳಿಸಿದ ನಾರಾಯಣಗೌಡ ವೇಗಕ್ಕೆ ತಡೆ ಒಡ್ಡಲು ಸಾಧ್ಯವೇ?