ರಾಮನಗರ: ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಮಹೀಂದ್ರಾ ಪಿಕಪ್ ವಾಹನ ಹರಿದಿದ್ದರಿಂದ ಇಬ್ಬರು ಮೃತಪಟ್ಟು, 7 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ (Road Accident) ರಾಮನಗರ ತಾಲೂಕು ಲಕ್ಷ್ಮಿಪುರ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.
ರೋಹಿತ್(5), ಶಾಲಿನಿ(8) ಮೃತ ಮಕ್ಕಳು. ಸುಚಿತ್, ಗೌತಮಿ, ಲೇಖನ ಸೇರಿ 7 ಮಂದಿಗೆ ಗಂಭೀರ ಗಾಯಗಳಾಗಿವೆ. 12 ವರ್ಷದ 9 ಮಕ್ಕಳ ಮೇಲೆ ವಾಹನ ಹರಿದಿದ್ದು, ಗಾಯಾಳು ಮಕ್ಕಳನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೂಡ್ಸ್ ವಾಹನ ಮಕ್ಕಳಿಗೆ ಗುದ್ದಿದೆ. ಆಸ್ಪತ್ರೆಗೆ ಎಎಸ್‌ಪಿ ಸುರೇಶ್ ಭೇಟಿ ನೀಡಿ ಅಪಘಾತದ ಕುರಿತು ಮಾಹಿತಿ ಪಡೆದರು. ಅಪಘಾತದ ಬಳಿಕ ಬೇರೆಡೆ ವಾಹನ ನಿಲ್ಲಿಸಿ ವಾಹನ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ | Udupi Toilet Case: ನೇತ್ರಜ್ಯೋತಿ ಕಾಲೇಜಿಗೆ ಸಿಐಡಿ ಎಸ್‌ಪಿ ಭೇಟಿ; ಸಂತ್ರಸ್ತ ವಿದ್ಯಾರ್ಥಿನಿಯಿಂದ ಹೇಳಿಕೆ ದಾಖಲು
ಬಸ್-ಸ್ಕೂಟರ್ ನಡುವೆ ಅಪಘಾತ; ಸವಾರ ಸಾವು
ಶಿರಸಿ: ಕೆಎಸ್ಆರ್‌ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸವಾರ ಮೃತಪಟ್ಟಿರುವ ಘಟನೆ ಶಿರಸಿಯ ಯಲ್ಲಾಪುರ ರಸ್ತೆಯ ಅಂಬೇಡ್ಕರ ಭವನ ಬಳಿ ನಡೆದಿದೆ. ಭೈರುಂಬೆ ಗ್ರಾ.ಪಂ ವ್ಯಾಪ್ತಿಯ ದೇವರ ಕೆರಿ ಗ್ರಾಮದ ಗಣೇಶ್ ಕರಾಳೆ(20) ಮೃತ ಯುವಕ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ.
ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಹಿನ್ನೆಲೆಯಲ್ಲಿ ಯುವಕ ಕೊನೆಯುಸಿರೆಳೆದಿದ್ದಾನೆ. ಕೆಎಸ್ಆರ್‌ಟಿಸಿ ಬಸ್ ಚಾಲಕನ ಎಡವಟ್ಟಿನಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.