ರಾಮನಗರ: ವ್ಯಕ್ತಿಯೊಬ್ಬ ತಾನು ಸಾಯಿ ಬಾಬಾನ 3ನೇ ಅವತಾರ ಎಂದು ಹೇಳಿಕೊಂಡು ಕೋಟ್ಯಂತರ ರೂ. ವಂಚಿಸಿ ಪರಾರಿಯಾಗಿದ್ದಾನೆ! ತಾನೊಬ್ಬ ದೇವಮಾನವ, ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ ಜಾದೂ ಮಾಡಿ ಹಲವರನ್ನು ವಂಚಿಸಿದ್ದಾನೆ ಈ ನಕಲಿ ಬಾಬಾ. ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಸಚಿನ್ ಅಕಾರಾಂ ಸರಗಾರ್ ಎಂಬ ಈ ವ್ಯಕ್ತಿಗಾಗಿ ಇದೀಗ ರಾಮನಗರ ಪೊಲೀಸರು ಹುಡುಕಾಡುತ್ತಿದ್ದಾರೆ.
ಎಂಟು ತಿಂಗಳ ಹಿಂದೆ ಬಂದಿದ್ದ
ಚನ್ನಪಟ್ಟಣಕ್ಕೆ ಎಂಟು ತಿಂಗಳ ಹಿಂದೆ ಬಂದಿದ್ದ ಈ ಕೊಲ್ಲಾಪುರ ಮೂಲದ ವ್ಯಕ್ತಿ ತನ್ನನ್ನು ತಾನು ಪ್ರೇಮ ಸಾಯಿಬಾಬಾ ಎಂದು ಹೇಳಿಕೊಳ್ಳುತ್ತಿದ್ದ. ತಾನೊಬ್ಬ ದೇವಮಾನವ, ಜನರ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ ಎಂದು ಜನರನ್ನು ನಂಬಿಸಿದ್ದ.
ನಿತ್ಯ ಭಜನೆ ಮಾಡುತ್ತಾ ಪೂಜೆ ಮಾಡಿ ಜನರಿಂದ ಉಪಾಯವಾಗಿ ಹಣ ಪಡೆಯುತ್ತಿದ್ದ ಆತ ವಿಭೂತಿ ಸೃಷ್ಟಿ ಮಾಡುತ್ತಾ, ಸ್ಪೀಕರ್ ಮೂಲಕ ದೇವರ ಧ್ವನಿ ಅಂತ ಮರಳು ಮಾಡುತ್ತಾ ಇದ್ದ. ಜನರ ಮುಖ ನೋಡಿ ಭವಿಷ್ಯ ಹೇಳುವುದು, ಕೈ ನೋಡಿ ಹೇಳುವುದು, ತಾನು ಆಶೀರ್ವಾದ ಮಾಡಿದರೆ ಒಳ್ಳೆಯದಾಗುತ್ತದೆ ಅಂತ ನಂಬಿಸುತ್ತಿದ್ದ.
ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಸ್ಥಾಪನೆ ಮಾಡಿಕೊಂಡಿದ್ದ ಆತನ ಭಕ್ತಿಪೂರ್ವಕ ಪೂಜೆಗಳು, ಮಾತುಗಳು, ದೇವರ ನುಡಿಗಳು ಜನರನ್ನು ಎಷ್ಟು ಮರುಳು ಮಾಡಿದ್ದವೆಂದರೆ ಕೆಲವರಂತೂ ಆತನಿಗೆ ಕೇಳಿದಷ್ಟು ಹಣ ಕೊಡುವ ಮಟ್ಟಕ್ಕೆ ಹೋಗಿದ್ದರು. ಒಮ್ಮೆ ಆತನ ಬಲೆಗೆ ಬಿದ್ದವರು ಮತ್ತೆ ಮತ್ತೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆತ ಹಣ ಸುಲಿಯುತ್ತಲೇ ಇರುತ್ತಿದ್ದ. ಹೀಗೆ ಕೋಟ್ಯಂತರ ರೂ. ದೋಚಿದ್ದ ಎನ್ನಲಾಗಿದೆ.
ತೋಟವನ್ನೇ ಕೊಡಿ ಎಂದು ಕಿರುಕುಳ
ಈ ನಡುವೆ ಚನ್ನಪಟ್ಟಣ ಸಮೀಪದ ಸಿಂಧೂ ಎಂಬ ಮಹಿಳೆಯೊಬ್ಬರು ತಮ್ಮ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಈತನ ಮುಂದೆ ಹೇಳಿಕೊಂಡಿದ್ದರು. ಇದರ ಪರಿಹಾರವಾಗಿ ನಕಲಿ ಸ್ವಾಮಿ ಅವರ ತೋಟದ ಮನೆಗೆ ಹೋಗಿ ಕೆಲವು ದಿನಗಳ ಕಾಲ ವಾಸವಿದ್ದ. ಅಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡಿ ನಿತ್ಯ ಭಜನೆ ಮಾಡುತ್ತಿದ್ದ.
ಇದಾದ ಬಳಿಕ ತೋಟದ ಮನೆಯನ್ನು ತನ್ನ ಹೆಸರಿಗೇ ಬರೆದುಕೊಡುವಂತೆ ನಿತ್ಯ ಕಿರುಕುಳ ಕೊಡಲು ಶುರು ಮಾಡಿದ್ದ. ಮೊದಲು ಧಾರ್ಮಿಕ ನಂಬಿಕೆಗಳ ಮೂಲಕ ಹೆದರಿಸುತ್ತಿದ್ದರೆ, ಆಮೇಲೆ ನೇರವಾಗಿ ಬೆದರಿಕೆ ಹಾಕಲು ಶುರು ಮಾಡಿದ್ದ. ಇದರಿಂದ ಆತಂಕಗೊಂಡ ಮಹಿಳೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಏಳೂ ಮಂದಿ ಮೇಲೆ ಎಫ್‌ಐಆರ್
ಸಚಿನ್ ಅಕಾರಾಂ ಸರಗಾರ್ ಎಂಬ ಈ ವ್ಯಕ್ತಿಗೆ ವನ್ನಿಯ ರಾಜ್, ಸಾಯಿರಾಜ್, ಜಯಂತ್, ಯಶೋದಮ್ಮ, ಉಮಾಶಂಕರ್, ಪ್ರಶಾಂತ್ ಎಂಬವರು ಸಹಕಾರ ನೀಡುತ್ತಿದ್ದರು ಎನ್ನಲಾಗಿದ್ದು, ಅವರ ಮೇಲೆ ಕೂಡಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ತಮಿಳುನಾಡು ಮೂಲದ ವನ್ನಿಯ ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಪ್ರಧಾನ ಆರೋಪಿ ನಕಲಿ ಸ್ವಾಮಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ| ಸ್ವಾಮೀಜಿ ರೀತಿ ಪೋಸ್ ಕೊಟ್ಟು ವಂಚನೆ ಮಾಡಿ ಹಲ್ಲೆ ಆರೋಪ; ಖತರ್ನಾಕ್ ವಂಚಕನ ಬಂಧನ