ಮೈಸೂರು: ನಾಗರಹೊಳೆ ಅಭಯಾರಣ್ಯದ ನಡುವೆ ಸಾಗುವ ಮೈಸೂರು-ಮಾನಂತವಾಡಿ ರಸ್ತೆಯಲ್ಲಿ ಅಡ್ಡಲಾಗಿ ಸಾಗುತ್ತಿದ್ದ ಹೆಬ್ಬಾವೊಂದನ್ನು ವ್ಯಕ್ತಿಯೊಬ್ಬ ಕೈಯಿಂದ ಹಿಡಿದು ರಸ್ತೆ ಬದಿಗೆ ಎಸೆದ ವಿದ್ಯಮಾನ ಭಾರಿ ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.
ರಾತ್ರಿ ವೇಳೆ ಬಸ್ಸೊಂದು ಸಾಗುತ್ತಿದ್ದ ರಸ್ತೆಯಲ್ಲಿ ಅಡ್ಡಲಾಗಿ ಹೆಬ್ಬಾವು ಮಲಗಿತ್ತು. ವಾಹನದ ಬೆಳಕಿಗೂ ಅದು ಹೆದರದೆ ತನ್ನ ಪಾಡಿಗೆ ಇತ್ತು. ದೊಡ್ಡ ಗಾತ್ರದ ಈ ಹೆಬ್ಬಾವು ರಸ್ತೆಯ ಅರ್ಧ ಭಾಗವನ್ನು ಕ್ರಮಿಸಿ ಮಲಗಿಕೊಂಡಂತೆ ಕಾಣುತ್ತಿತ್ತು. ಇದು ಕೇರಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾದ ಈ ರಸ್ತೆಯಲ್ಲಿ ಬಹುಶಃ ತುಂಬಾ ವಾಹನಗಳು ಸಾಲುಗಟ್ಟಿ ನಿಂತಿರಬೇಕು.
ಈ ನಡುವೆ ವ್ಯಕ್ತಿಯೊಬ್ಬ ಬಸ್ಸಿನಿಂದ ಇಳಿದು ನೇರವಾಗಿ ಹೆಬ್ಬಾವಿನ ಬಳಿಗೆ ಹೋಗುತ್ತಾನೆ. ಆಗ ಬಸ್ಸಿನಲ್ಲಿದ್ದವರು, ಇತರರು ಹೋ ಎಂದು ಕಿರುಚುತ್ತಾರೆ. ಆದರೆ, ಆ ವ್ಯಕ್ತಿ ಯಾವುದಕ್ಕೂ ಕ್ಯಾರೇ ಅನ್ನದೆ ಹೆಬ್ಬಾವಿನ ಬಾಲವನ್ನು ಹಿಡಿದು ಎತ್ತಿ ರಸ್ತೆ ಬದಿಗೆ ಎಸೆಯುತ್ತಾನೆ. ಹೆಬ್ಬಾವು ಬಳಿಕ ಸರಸರನೆ ಚಲಿಸಿ ಮರೆಯಾಗುತ್ತದೆ. ಪ್ರಯಾಣಿಕ ಶೌರ್ಯ ಪ್ರದರ್ಶಿಸಿದ ಹುಮ್ಮಸ್ಸಿನಲ್ಲಿ ಬಸ್‌ಗೆ ಮರಳುತ್ತಾನೆ. ಇವಿಷ್ಟು ದೃಶ್ಯಗಳಿರುವ ಒಂದು ಪೋಸ್ಟ್‌ನ್ನು ಜೋಸೆಫ್ ಹೋವರ್ ಎಂಬವರು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಚರ್ಚೆಯನ್ನು ಹುಟ್ಟುಹಾಕಿದೆ.
ವನ್ಯಜೀವಿ ಕಾಯಿದೆಯ ಉಲ್ಲಂಘನೆ
ಈ ರೀತಿಯಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಹೆಬ್ಬಾವನ್ನು ಹಿಡಿದು ಎಸೆದದ್ದು ವನ್ಯ ಜೀವಿ ಕಾಯಿದೆಯ ನಿಯಮಗಳ ಉಲ್ಲಂಘನೆ ಎನ್ನುವುದು ನೆಟ್ಟಿಗರಲ್ಲಿ ಹಲವರ ಅಭಿಪ್ರಾಯ. ಹೀಗಾಗಿ ಹೆಬ್ಬಾವಿನ ಸಂಚಾರಕ್ಕೆ ಅಡ್ಡಿಪಡಿಸಿದ, ಅದನ್ನು ಎಸೆದ ವ್ಯಕ್ತಿಯನ್ನು ಎಲ್ಲಿದ್ದರೂ ಹುಡುಕಿ ತಂದು ಶಿಕ್ಷೆ ನೀಡಬೇಕು ಎಂದು ಸ್ವತಃ ಹೋವರ್ ಅವರೇ ಬರೆದುಕೊಂಡಿದ್ದಾರೆ. ಜತೆಗೆ ಅವರಿಗೆ ನೆಟ್ಟಿಗರ ಬೆಂಬಲವೂ ಸಿಕ್ಕಿದೆ. ವನ್ಯಜೀವಿ ತಜ್ಞರಂತೂ ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಈ ರೀತಿ ಪ್ರಾಣಿಗಳಿಗೆ, ಹಾವುಗಳಿಗೆ ಹಿಂಸೆ ನೀಡುತ್ತಾರೆ ಎಂಬ ಕಾರಣಕ್ಕಾಗಿಯೇ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಬೇಕು ಎಂಬ ಬೇಡಿಕೆ ಇರುವುದು ಎಂದು ನೆಟ್ಟಿಗರಲ್ಲೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನಿಜವೆಂದರೆ, ಈ ರಸ್ತೆಯಲ್ಲಿ ರಾತ್ರಿ ಪ್ರಾಣಿಗಳು, ಅದರಲ್ಲೂ ಮುಖ್ಯವಾಗಿ ಉರಗಗಳು ಸಂಚರಿಸುತ್ತವೆ. ವಾಹನಗಳ ಸಂಚಾರದಿಂದ ಅವುಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಈ ಭಾಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇದೆ. ಆದರೆ, ಆಗಾಗ ಮುನ್ನೆಲೆಗೆ ಬರುವ ಈ ಚರ್ಚೆ ಮತ್ತೆ ನನೆಗುದಿಗೆ ಬೀಳುತ್ತದೆ.
ಪ್ರಯಾಣಿಕನ ಪರವೂ ಇದೆ ವಾದ
ಈ ನಡುವೆ, ಕೆಲವರು ರಸ್ತೆಯಲ್ಲಿದ್ದ ಹಾವನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ವ್ಯಕ್ತಿಯ ಬಗ್ಗೆ ಅಭಿಮಾನದಿಂದಲೂ ಮಾತನಾಡಿದ್ದಾರೆ. ಆತ ಹಾವನ್ನು ಬದಿಗೆ ಸರಿಸುವ ಮೂಲಕ ಸಂಚಾರಕ್ಕೆ ಮಾತ್ರವಲ್ಲ, ಹೆಬ್ಬಾವಿಗೂ ಉಪಕಾರ ಮಾಡಿದ್ದಾನೆ ಎನ್ನುವುದು ಅವರ ಅಭಿಮತ.
ಒಂದು ವೇಳೆ ಬಸ್ ಚಾಲಕ ಹೆಬ್ಬಾವಿನ ಸಂಚಾರವನ್ನು ಗಮನಿಸದೆ ಇದ್ದಿದ್ದರೆ, ಗಮನಿಸಿದರೂ ನಿರ್ಲಕ್ಷ್ಯ ವಹಿಸಿದ್ದರೆ ಹಾವಿನ ಪ್ರಾಣವೇ ಹೋಗುತ್ತಿತ್ತಲ್ಲ. ಅದಕ್ಕಿಂತ ಈ ರೀತಿ ಬದಿಗೆ ಸರಿಸಿದ್ದೇ ಒಳ್ಳೆಯದಾಯಿತಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೀಗಾಗಿ ಆತ ಒಳ್ಳೆಯ ಕೆಲಸವನ್ನೇ ಮಾಡಿದ್ದಾನೆ. ಅದರ ಪ್ರಾಣ ಕಾಪಾಡಿದ್ದಾನೆ ಎಂಬ ವಾದವೂ ಇದೆ.