ಮಂಡ್ಯ: ಕಾಂಗ್ರೆಸ್‌ಗೆ ಮರಳಿ ಬರೋರಿಗೆ ಫಸ್ಟ್ ಬೆಂಚ್ ಸಿಗಲ್ಲ, ಅವರಿಗೆ ಲಾಸ್ಟ್ ಬೆಂಚ್ ಎಂದು ಸ್ವತಃ ಆ ಪಕ್ಷದ ನಾಯಕರೇ ಹೇಳಿದ್ದಾರೆ. ಹಾಗಾಗಿ ಮರ್ಯಾದೆ ಇರುವ ಯಾರೇ ಆದರೂ ಮರಳಿ ಕಾಂಗ್ರೆಸ್‌ಗೆ ಹೋಗುವುದಿಲ್ಲ (No one will go to congress again) ಎನ್ನುವುದು ನನ್ನ ನಂಬಿಕೆ: ಹೀಗೆಂದು ಹೇಳಿದು ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ. ರವಿ (CT Ravi)
ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ. ಆದರೆ, ಬಂದವರಿಗೆ ಮರ್ಯಾದೆ ಕೊಡಲು ಆಗುವುದಿಲ್ಲ, ಅವರಿಗೆ ಲಾಸ್ಟ್ ಬೆಂಚೇ ಗತಿ ಎಂದೂ ಹೇಳುತ್ತಾರೆ. ನನ್ನ ಪ್ರಕಾರ ಮರ್ಯಾದೆ ಇರೋ ರಾಜಕಾರಣಿಗಳ್ಯಾರೂ ಹೋಗುವುದಿಲ್ಲ. ಇಷ್ಟು ಅನಿಸಿಕೊಂಡೂ ಯಾರಾದರೂ ಹೋಗುವವರಿದ್ದರೆ ಅವರಿಗೆ ನಾನು ಹೇಳಲ್ಲ ಎಂದಿದ್ದಾರೆ.
ಕೆಲವು ಮಂದಿ ಭಯಕ್ಕೆ ಬಿದ್ದು ಹೋಗುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ, ಯಾವ ಭಯವೋ ಗೊತ್ತಿಲ್ಲ. ನೀವು ಆಪರೇಷನ್ ಮಾಡಿಲ್ವಾ ಅಂತ ನಮ್ಮನ್ನು ತೋರಿಸಿ ಕೇಳ್ತಾರೆ, ಆಗಿನ ರಾಜಕೀಯ ಪರಿಸ್ಥಿತಿ ಬೇರೆಯೇ ಇತ್ತು. ಈಗ ಹಾಗೆ ಇಲ್ವಲ್ಲ. ಕಾಂಗ್ರೆಸ್‌ಗೆ 135 ಸೀಟು ಬಂದಿದೆ. ಹಾಗಿರುವಾಗ ಮತ್ತೂ ಸೀಟು ದಾಹ ತೋರಿಸುತ್ತಾರೆ ಎಂದಾದರೆ ಅವರಿಗೆ ಏನು ಹೇಳುವುದು ಎಂದು ಹತಾಶೆಯಿಂದ ಮಾತನಾಡಿದರು ಸಿ.ಟಿ. ರವಿ.
ಬಿಜೆಪಿಯ ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ (ST Somashekhar) ಅವರ ಆಪರೇಷನ್ ಬಗ್ಗೆ ಮಾತನಾಡಿದ ಅವರು, ಎಸ್.ಟಿ.ಸೋಮಶೇಖರ್ ಅವರನ್ನು ಕಾಂಗ್ರೆಸ್ ನವರು ಸಂಪರ್ಕ ಮಾಡಿರೋದು ನಿಜ. ಆದರೆ ಎಸ್.ಟಿ.ಸೋಮಶೇಖರ್ ಹೋಗಲ್ಲ ಅಂದಿದ್ದಾರೆ ಎಂದರು. ಕಾಂಗ್ರೆಸ್‌ನವರಿಗೆ 135 ಸ್ಥಾನ ಸಿಕ್ಕಿದೆ. ಇಷ್ಟಿದ್ದರೂ ಅವರು ಆಪರೇಷನ್ ಹಸ್ತ ಮಾಡ್ತಿದ್ದಾರೆ ಅಂದ್ರೆ ನೀವೆ ಯೋಚನೆ ಮಾಡಿ ಎಂದು ಹೇಳಿದರು.
ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿ ಎಂದ ಸಿ.ಟಿ ರವಿ
ಕರ್ನಾಟಕದಲ್ಲಿ ಸಂಕಷ್ಟವಿದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ್ದನ್ನು ಖಂಡಿಸಿದ ಸಿ.ಟಿ. ರವಿ ಅವರು, ʻʻಕಾವೇರಿ ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಉಳಿಯೋಕೂ ಆಗಲ್ಲʼʼ ಎಂದರು.
ʻʻಚುನಾವಣೆಗೂ ಮುಂಚೆ ಕಾಂಗ್ರೆಸ್ ಮುಖಂಡರು, ಡಿಕೆಶಿ ಸೇರಿ ಎಲ್ಲರೂ ನೀರಿಗಾಗಿ ಪಾದಯಾತ್ರೆ ಮಾಡಿದರು. ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದರು. ರೈತರು ಅಂದ್ರೆ ಎಲ್ಲರೂ ಒಂದೇ, ಕರ್ನಾಟಕ-ತಮಿಳುನಾಡು ಎನ್ನುವ ಬೇಧ ಭಾವ ಇಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರ ವ್ಯವಹಾರ ಮಾಡಬೇಕು. ಈಗ ಮಳೆ ಇಲ್ಲ, ಸಂಕಷ್ಟ ಇದೆ. ಇಂತಹ ಪರಿಸ್ಥಿತಿಯಲ್ಲಿ ಅಳೋಕು ಮುಂಚೆ ನೀರು ಕೊಟ್ಟಿದ್ದೀರಿʼʼ ಎಂದು ಆರೋಪಿಸಿದ ಅವರು, ʻʻನೀವು INDIA ಗೋಸ್ಕರ ನೀರು ಬಿಟ್ಟಿದ್ದೀರಿ. ಸ್ಟಾಲಿನ್ (MK Stalin) ಸ್ನೇಹಕ್ಕೆ ಕರ್ನಾಟಕದ ಹಿತವನ್ನು ಬಲಿ ಕೊಟ್ಟಿದ್ದೀರಿʼʼ ಎಂದು ಆರೋಪಿಸಿದರು.
ʻʻ ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪ, ತಮಿಳುನಾಡಿಗೆ ವರ ಎಂಬಂತಾಗಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡ್ತಿದ್ದೀರಿʼʼ ಎಂದು ಹೇಳಿದರು.
ಸರ್ವ ಪಕ್ಷ ಸಭೆ ಯಾವ ಪುರುಷಾರ್ಥಕ್ಕೆ?
ʻʻನಾಳೆ ಸರ್ವಪಕ್ಷಗಳ ಸಭೆ ಮಾಡ್ತಿದ್ದೀರಿ. ನಿಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು ಇದನ್ನು ಮಾಡಿದ್ದೀರಿ. ಹೇಗೂ ಒಂದಷ್ಟು ಜನ ಹೊಗಳುಭಟರನ್ನು ಇಟ್ಕೊಂಡಿದ್ದೀರಿ. ಅವರ ಬಳಿ ಸೀಲ್ ಹಾಕೊಸಿಕೊಳ್ಳೋಕೆ ಸಭೆ ಮಾಡ್ತಿದ್ದೀರಿ.
ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಈಗ ಸಭೆ ಮಾಡಿದ್ರೆ ಏನು ಪ್ರಯೋಜನ. ನೀರು ಬಿಡುವ ಮೊದಲೇ ಸಭೆ ಮಾಡಬೇಕಿತ್ತುʼʼ ಎಂದು ಹೇಳಿದರು ಸಿ.ಟಿ. ರವಿ.
ʻʻʻʻರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅಂತ ಜಾರಿ ಮಾಡಿದ್ದೀರಿ. ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಜ್ಯೋತಿ ಅಂತ ತರ್ತಿದ್ದೀರಿ. ವಾಸ್ತವಿಕವಾಗಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಆಗ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯ ಕತ್ತಲಲ್ಲಿ ಮುಳುಗಿದೆ. ರಾಜ್ಯಕ್ಕೆ 15-16ಸಾವಿರ ಮೆಗಾ ವ್ಯಾಟ್ ಪವರ್ ಬೇಕು.. ಆದರೆ ಇಲ್ಲಿ ಉತ್ಪಾದನೆಯೇ ಆಗ್ತಿಲ್ಲ. ಕೇವಲ 8-9 ಸಾವಿರ ಮೆಗಾವ್ಯಾಟ್ ಉತ್ಪಾದನೆ ಆಗ್ತಿದೆ. ಹೀಗಿರುವಾಗ ಉಚಿತ ವಿದ್ಯುತ್ ಹಾಸ್ಯಾಸ್ಪದ. ಮೊದಲು ಉತ್ಪಾದನೆ ಮಾಡಿ, ಬಳಿಕ ಉಚಿತ ವಿದ್ಯುತ್ ಕೊಡಿʼʼ ಎಂದು ಸಿ.ಟಿ. ರವಿ ಆಕ್ಷೇಪಿಸಿದರು.
ಕಾಂಗ್ರೆಸ್ ಕಾಲ್ಗುಣದಿಂದ ರಾಜ್ಯಕ್ಕೆ ಮಳೆ ಬಂದಿಲ್ಲ
ʻʻಕಾಂಗ್ರೆಸ್ ಕಾಲ್ಗುಣ ರಾಜ್ಯದಲ್ಲಿ ಮಳೆ ಆಗ್ತಿಲ್ಲ. ಅದು ಕಾಕತಾಳಿಯವೋ ಅಥವಾ ಪ್ರಕೃತಿಯೋ ಗೊತ್ತಿಲ್ಲ. ಮೊದಲೇ ಇವಕ್ಕೆ ದೇವರು ದಿಂಡ್ರು ಮೇಲೆ ನಂಬಿಕೆ ಇಲ್ಲ. ಮತ್ತೆ ದೇವರು ಹೇಗೆ ಮಳೆಬೆಳೆ ಕೊಡ್ತಾನೆ. ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ. ದೇವರ ಮೇಲೆ ಭಯಭಕ್ತಿ ಇಲ್ಲದ ಇವರ ಕಾಲ್ಗುಣ ಇದುʼʼ ಎಂದು ಸಿ.ಟಿ. ರವಿ ಹೇಳಿದರು.
ಎಣ್ಣೆ ರೇಟು ಕುಡಿಯೋರಿಗೆ ಗೊತ್ತು, ನನಗೆ ಗೊತ್ತಿಲ್ಲ
ʻʻಕಾಂಗ್ರೆಸ್ ಸರ್ಕಾರಕ್ಕೆ ಶ್ವೇತ ಪತ್ರದ ಅವ್ಯಶ್ಯಕತೆ ಇಲ್ಲ. ಜಿಲ್ಲಾಧಿಕಾರಿ ಕಾರಿಗೆ ಡೀಸೆಲ್, ಇಲ್ಲ, ಮಕ್ಕಳಿಗೆ ಮೊಟ್ಟೆ ಇಲ್ಲ.
ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸಂಬಳವೇ ಇಲ್ಲ. ಇನ್ನೂ ಎಣ್ಣೆ ರೇಟ್ ಹೇಗಿದೆ ಅಂತ ಕುಡಿಯುವವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಮಧ್ಯಮವರ್ಗದವರಿಗೆ ಈ ಸರ್ಕಾರ ಬರೆ ಮೇಲೆ ಬರೆ ಹಾಕ್ತಿದೆʼʼ ಎಂದು ಲೇವಡಿ ಮಾಡಿದರು.