ಮಂಡ್ಯ: ಮಂಡ್ಯದಲ್ಲಿ ಭಾನುವಾರ ದಶಪಥ ಹೆದ್ದಾರಿ ಉದ್ಘಾಟನೆಯ ಕಾರ್ಯಕ್ರಮದ ಮುಖ್ಯದ್ವಾರಕ್ಕೆ ಉರಿಗೌಡ ಮತ್ತು ನಂಜೇಗೌಡ ಅವರ ಹೆಸರು ಇಟ್ಟಿರುವುದಕ್ಕೆ ಆಕ್ಷೇಪಿಸಿರುವ ಹಾಗೂ ದ್ವಾರವನ್ನು ತೆರವುಗೊಳಿಸುವಂತೆ ಒತ್ತಾಯಿಸಿ, ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ (Modi in Karnataka) ಹೇಳಿಕೆಯನ್ನು ಬಿಜೆಪಿ ನಾಯಕ ಸಿ.ಟಿ ರವಿ ಅವರು ಸರಣಿ ಟ್ವೀಟ್‌ಗಳ ಮೂಲಕ ಖಂಡಿಸಿದ್ದಾರೆ.
ಬೆಂಗಳೂರು- ಮೈಸೂರು ದಶಪಥ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಪ್ರಯುಕ್ತ ಮಂಡ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡರ ಹೆಸರಿನ ದ್ವಾರ ಅಳವಡಿಸಿರುವುದನ್ನು ನೋಡಿ ಕೆಲವರಿಗೆ ಉರಿ ಹತ್ತಿಕೊಂಡಿದೆ. ದ್ವಾರ ತೆಗೆಸುವಂತೆ ಸಿದ್ಧರಾಮಯ್ಯ ಅವರು ಆಗ್ರಹಿಸಿದ್ದಾರೆ. ಟಿಪ್ಪುವನ್ನು ಕೊಂದವರಿಗೆ ನಾಡ ಗೌರವ ಸಿಗುವುದನ್ನೂ ಇವರಿಂದ ಸಹಿಸಲಾಗುವುದಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
ಟಿಪ್ಪುವನ್ನು ಕೊಂದರು ಎಂಬ ಕಾರಣಕ್ಕೆ ಉರಿಗೌಡರು ಹಾಗೂ ನಂಜೇಗೌಡರು ಕಪೋಲಕಲ್ಪಿತ ವ್ಯಕ್ತಿಗಳೇ?
ಟಿಪ್ಪುವಿನ ವಿರುದ್ಧ ಹೋರಾಡಿದವರು ಸಿದ್ದರಾಮಯ್ಯ ಪಾಲಿಗೆ ದೇಶದ್ರೋಹಿಗಳೇ? ಇರಬಹುದು ಬಿಡಿ, ಟರ್ಕಿಯ ಸುಲ್ತಾನನನ್ನು ಆಹ್ವಾನಿಸಿದ ಟಿಪ್ಪು ಮತ್ತು ವಿದೇಶಿ ನೆರವು ಕೇಳಿದ ಇವರ ನಾಯಕರ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ತನ್ನ ಸ್ವಾರ್ಥಕ್ಕಾಗಿ ಟರ್ಕಿ, ಫ್ರೆಂಚರಿಗೆ ಮೈಸೂರನ್ನು ಆಳಲು ಆಹ್ವಾನ ನೀಡಿದ ಟಿಪ್ಪು ನಿಮ್ಮ ಪಾಲಿಗೆ ದೇಶಪ್ರೇಮಿ, ಅವನನ್ನು ಕೊಂದ ಉರಿಗೌಡ ಮತ್ತು ನಂಜೇಗೌಡರು ಕಾಲ್ಪನಿಕ ವ್ಯಕ್ತಿಗಳೇ?!
ಮಂಡ್ಯದ ವೀರ ಪುರುಷರ ಹೆಸರಲ್ಲಿ ಹಾಕಿದ ಕಮಾನು ಮಂಡ್ಯದ ವೀರರಿಗೆ ಸಂದ ಗೌರವ ಎಂದಿದ್ದಾರೆ.
ಕೊಡವರ ನರಮೇಧ ನಡೆಸಿದ ಟಿಪ್ಪುವನ್ನು ಕೊಂದ ಉರಿಗೌಡ ಮತ್ತು ನಂಜೇಗೌಡರ ದ್ವಾರ ತೆಗೆಯಿರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮಂಡ್ಯದ ವೀರರಿಗೆ ಅವಮಾನ ಮಾಡಿದ್ದಾರೆ. ಹಿಂದುಗಳ ನರಮೇಧಕ್ಕೆ ಪ್ರತೀಕಾರ ತೀರಿಸಿದವರನ್ನು ವೀರರೆಂದು ಹೇಳಿಕೊಂಡರೂ ಇವರಿಗೆ ಅಸಹನೆ. ಇದು ಓಲೈಕೆ ರಾಜಕಾರಣದ ಪರಮಾವಧಿ.
ರಾಜ್ಯದಲ್ಲಿ ಹಿಂದುಗಳ ನರಮೇಧ ನಡೆಸಿದ ಟಿಪ್ಪುವಿನ ಜಯಂತಿ ಆರಂಭಿಸಿದ ಸಿದ್ದರಾಮಯ್ಯ ಅವರಿಗೆ ಹೈದರಾಲಿಯ ಸೈನಿಕರನ್ನು ಒನಕೆಯಿಂದಲೇ ಬಡಿದ ಓಬವ್ವ, ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದ ಹೈದರಾಲಿಯನ್ನು ಮೂರು ಬಾರಿ ಹಿಮ್ಮೆಟ್ಟಿಸಿದ ಮದಕರಿ ನಾಯಕ, ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ ಮೈಸೂರು ಒಡೆಯರ್ ವಂಶಸ್ಥರು ನೆನಪಾಗುವುದೇ ಇಲ್ಲ ಎಂದು ಟೀಕಿಸಿದ್ದಾರೆ.