Site icon Vistara News

ಎಲೆಕ್ಷನ್‌ ಹವಾ | ನಾಗಮಂಗಲ | ಒಕ್ಕಲಿಗರ ಪ್ರಾಬಲ್ಯದ ನಡುವೆ ʻಗೌಡʼರ ಕುಟುಂಬದ ಪ್ರತಿಷ್ಠೆಯ ಕಣ

nagamangala (1)

ಮತ್ತೀಕೆರೆ ಜಯರಾಮ್‌, ಮಂಡ್ಯ
ನಾಗಮಂಗಲ ತಾಲೂಕಿನ ಜತೆಗೆ ಮದ್ದೂರು ತಾಲೂಕಿಗೆ ಸೇರಿದ ಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪೂರ್ಣವಾಗಿ ಮತ್ತು ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅರ್ಧದಷ್ಟು ಭಾಗ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಮಾಜಿ ಸಚಿವ ಎಚ್.ಟಿ. ಕೃಷ್ಣಪ್ಪ, ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದ ಸಿಂಗಾರಿಗೌಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಈ ಕ್ಷೇತ್ರದ ಕೊಡುಗೆ ಅಗಾಧ. ಆದಿಚುಂಚನಗಿರಿ ಶ್ರೀಕ್ಷೇತ್ರವೂ ನಾಗಮಂಗಲದಲ್ಲೇ ಇದೆ. ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಪಕ್ಷೇತರರು ಹೆಚ್ಚು ಬಾರಿ ಆಯ್ಕೆಯಾದ ನಿದರ್ಶನವಿದೆ.

ಚುನಾವಣಾ ಇತಿಹಾಸ

2004ರ ಚುನಾವಣೆಯ ವೇಳೆಗಿನ್ನೂ ನಾಗಮಂಗಲದಲ್ಲಿ ಹೊಡಿ, ಬಡಿ ರಾಜಕಾರಣ ಮುಗಿದಿರಲಿಲ್ಲ. ಹಣ, ಹೆಂಡ, ತೋಳ್ಬಲವೇ ಪ್ರಧಾನವಾದ ರಾಜಕಾರಣ ಇಲ್ಲಿ ಮನೆ ಮಾಡಿತ್ತು. 1999ರಲ್ಲಿ ರಾಜ್ಯವಿಡೀ ಜೆಡಿಎಸ್ ನೆಲ ಕಚ್ಚಿದ್ದಾಗಲೂ ನಾಗಮಂಗಲದಲ್ಲಿ ಎನ್. ಚಲುವರಾಯಸ್ವಾಮಿ ಆ ಪಕ್ಷದಿಂದ ಗೆದ್ದಿದ್ದರು. ಕಡುವೈರಿಗಳಾದ ಚಲುವರಾಯಸ್ವಾಮಿ ಮತ್ತು ಎಲ್.ಆರ್. ಶಿವರಾಮೇಗೌಡ (1989 ಮತ್ತು 1994 ಎರಡೂ ಬಾರಿಯ ಪಕ್ಷೇತರ ಶಾಸಕ) 2004ರಲ್ಲಿ ಮತ್ತೆ ಮುಖಾಮುಖಿಯಾದರು. ಚಲುವರಾಯಸ್ವಾಮಿ ಮತ್ತೊಮ್ಮೆ ಜನಾದೇಶ ಪಡೆದರು. ಎರಡನೇ ಬಾರಿ ಕ್ಷೇತ್ರ ಪ್ರತಿನಿಧಿಸಿದ ಚಲುವರಾಯಸ್ವಾಮಿ ಅವರು ಜೆಡಿಎಸ್ – ಕಾಂಗ್ರೆಸ್, ಬಳಿಕ ಬಂದ ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾದರು. ಚುನಾವಣೆಗೂ ಮುನ್ನ ಜನಜಾತ್ರೆ ಸೇರಿಸಿ, ಬಾಡೂಟ, ಮದ್ಯಾರ್ಜನೆ ನಡೆಸಿಕೊಂಡಿದ್ದಷ್ಟೇ ಅಲ್ಲದೆ, ರಾಷ್ಟ್ರಾದ್ಯಂತ ಸುದ್ದಿಯಾದ ನಾಗಮಂಗಲದಲ್ಲಿ ನಂಗಾನಾಚ್  ಶಿವರಾಮೇಗೌಡರಿಗೆ ಕುಖ್ಯಾತಿ ತಂದುಕೊಟ್ಟಿತು. ಅವರ ರಾಜಕೀಯ ಇಳಿಕೆ ಎಣಿಕೆಯ ಎರಡನೇ ಹೆಜ್ಜೆಗೆ ಆ ಚುನಾವಣೆ ಸಾಕ್ಷಿಯಾಯಿತು.  

2008ರ ಚುನಾವಣೆ ವೇಳೆಗೆ ಕ್ಷೇತ್ರ ರಾಜಕಾರಣದ ಚಿತ್ರಣ ಸಾಕಷ್ಟು ಬದಲಾಯಿತು. ಚಲುವರಾಯಸ್ವಾಮಿ ಅವರ ಹ್ಯಾಟ್ರಿಕ್ ಗೆಲುವಿನ ಕನಸು ನುಚ್ಚು ನೂರಾಯಿತು. ಆಡಳಿತ ವಿರೋಧಿ ಅಲೆ ಮತ್ತು ಆಪ್ತ ವಲಯದಲ್ಲಿ ಗುರ್ತಿಸಿಕೊಂಡವರು ನಡೆಸಿದ ಅಬ್ಬರ ಚಲುವರಾಯಸ್ವಾಮಿ ಪಾಲಿಗೆ ಮುಳುವಾಯಿತು. ಸತತ ಎರಡು ಸೋಲು ಕಂಡಿದ್ದ ಎಲ್.ಆರ್. ಶಿವರಾಮೇಗೌಡಗೆ ಕಾಂಗ್ರೆಸ್ ಟಿಕೆಟ್ ದಕ್ಕಲಿಲ್ಲ. ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಸುರೇಶಗೌಡ ಅವರು ಚಲುವರಾಯಸ್ವಾಮಿ ವಿರುದ್ಧ ಗೆಲುವು ಸಾಧಿಸಿ, ಮತ್ತೊಂದು ಅಚ್ಚರಿ ಮೂಡಿಸಿದರು. ನಾಗಮಂಗಲ ಸೋಲಿನ ವರ್ಷ ತರುವಾಯ ಅಂದರೆ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರು. ಆಗ ಅಂಬರೀಶ್ ವಿರುದ್ಧ ಗೆಲುವು ಸಾಧಿಸಿದರು. ನಾಗಮಂಗಲ ಸೋಲು ಚಲುವರಾಯಸ್ವಾಮಿ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲೂ ಕಾರಣವಾಯಿತು. 

2013ರ ವೇಳೆಗೆ ಚಲುವರಾಯಸ್ವಾಮಿ ತಮ್ಮೆಲ್ಲ ನ್ಯೂನತೆಗಳನ್ನೂ ಸರಿಪಡಿಸಿಕೊಂಡು, ಮತ್ತೆ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು. ಸುರೇಶಗೌಡ ವಿರುದ್ಧ ಚಲುವರಾಯಸ್ವಾಮಿ ಭರ್ಜರಿ ಗೆಲುವಿನೊಂದಿಗೆ ಮೂರನೇ ಬಾರಿ ಶಾಸಕರಾದರು. ಜನರ ಸಂಪರ್ಕಕ್ಕೆ ಅಷ್ಟಾಗಿ ಸಿಗುತ್ತಿರಲಿಲ್ಲ, ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರೆನ್ನುವ ಕಾರಣಕ್ಕೆ ಸುರೇಶಗೌಡ ಅವರನ್ನು ನಾಗಮಂಗಲ ಜನತೆ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರು.

2018ರ ಚುನಾವಣೆಯಷ್ಟರಲ್ಲಿ ನಾಗಮಂಗಲ ರಾಜಕೀಯ ಚಿತ್ರಣದಲ್ಲಿ ಭಾರೀ ಬದಲಾವಣೆಯಾಗಿತ್ತು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ  ಅಡ್ಡ ಮತದಾನ  ಮಾಡಿದ ಚಲುವರಾಯಸ್ವಾಮಿ ಕಳಂಕ ಹೊತ್ತುಕೊಂಡು ಕಾಂಗ್ರೆಸ್ ಸೇರಿ, ಅಲ್ಲಿಂದ ಟಿಕೆಟ್ ಗಿಟ್ಟಿಸಿದರು. ಕಾಂಗ್ರೆಸ್‌ನಲ್ಲಿದ್ದ ಸುರೇಶಗೌಡ ಮತ್ತು ಎಲ್.ಆರ್. ಶಿವರಾಮೇಗೌಡ ಜೆಡಿಎಸ್‌ಗೆ ಶಿಫ್ಟ್ ಆದರು. ಶತಾಯ ಗತಾಯ ಚಲುವರಾಯಸ್ವಾಮಿಗೆ ಮಣ್ಣು ಮುಕ್ಕಿಸಲೇಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತ್ರವಲ್ಲದೆ, ಅವರ ಇಡೀ ಕುಟುಂಬ ಟೊಂಕ ಕಟ್ಟಿ ನಿಂತಿತು. ಚಲುವರಾಯಸ್ವಾಮಿ ವಿರುದ್ಧ ಸುರೇಶಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಿ, ಇಡೀ ತಂಡವನ್ನು ಒಟ್ಟುಗೂಡಿಸಿದರು. ಖುದ್ದು ದೇವೇಗೌಡರೇ ಪ್ರತಿ ಗ್ರಾಮದ ಮುಖಂಡರು, ಕಾರ್ಯಕರ್ತರಿಗೆ ಫೋನಾಯಿಸಿ, ಚಲುವರಾಯಸ್ವಾಮಿ ಸೋಲಿಸಿ ಎನ್ನುವ ಸಂದೇಶ ನೀಡಿದ್ದರು. ಎಲ್ಲವೂ ದಳಪತಿಗಳು ಅಂದುಕೊಂಡಂತೆಯೇ ನಡೆಯಿತು. ಸುರೇಶಗೌಡ ಅವರು ನಾಗಮಂಗಲ ಇತಿಹಾಸದಲ್ಲೇ ದಾಖಲೆಯ ಮತಗಳ ಅಂತರದಿಂದ ಗೆದ್ದರು. ಚಲುವರಾಯಸ್ವಾಮಿ ಹೀನಾಯ ಸೋಲು ಕಂಡರು.

2023ರ ಮುಖಾಮುಖಿ

ಜೆಡಿಎಸ್ ಶಾಸಕ ಕೆ.ಸುರೇಶಗೌಡ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಪ್ತ ಬಳಗದಲ್ಲಿದ್ದಾರೆ. ಇವರಿಗೆ ಟಿಕೆಟ್ ಪೈಪೋಟಿ ಒಡ್ಡುವ ಪ್ರತಿಸ್ಪರ್ಧಿ ಇಲ್ಲ. ಇದ್ದ ಒಬ್ಬರೇ ನಾಯಕ ಎಲ್.ಆರ್. ಶಿವರಾಮೇಗೌಡರನ್ನು ನಾಲಿಗೆ ಹರಿಬಿಟ್ಟ ನೆಪದಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇತ್ತೀಚೆಗಷ್ಟೆ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿಯವರು ನಾಗಮಂಗಲದಲ್ಲಿ ಬೃಹತ್‌ ಸಮಾವೇಶ ಆಯೋಜನೆ ಮಾಡಿ, ವೇದಿಕೆಯಲ್ಲಿ ಸುರೇಶ್‌ಗೌಡ ಅವರನ್ನೂ ಇರಿಸಿಕೊಂಡು, ಅವರ ಪರ ಪಕ್ಷವಿದೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಹೀಗಾಗಿ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಸುರೇಶಗೌಡ ಹಾದಿ ಸುಗಮ. ಕಾಂಗ್ರೆಸ್‌ನಿಂದ ಪ್ರಭಾವಿ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹುರಿಯಾಳು. ಸದ್ಯ ಅತಂತ್ರರಾಗಿರುವ ಶಿವರಾಮೇಗೌಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಲೋಕಸಭೆ ಉಪ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ವಂಚಿತರಾದ ಡಾ. ಲಕ್ಷ್ಮಿ ಅಶ್ವಿನ್ ಗೌಡ ಕೂಡ ಬಿಜೆಪಿ ಸೇರಿದ್ದಾರೆ. ಕಮಲ ಪಾಳೆಯದ ಟಿಕೆಟ್ ರೇಸ್‌ನಲ್ಲಿ ಅವರೂ ಇದ್ದಾರೆ. ಒಟ್ಟಾರೆ, ತ್ರಿಕೋನ ಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ. ಸುರೇಶಗೌಡ, ಚಲುವರಾಯಸ್ವಾಮಿ, ಶಿವರಾಮೇಗೌಡ ಮೂವರೇ ನಿತ್ಯ ಕ್ಷೇತ್ರ ಪ್ರವಾಸದಲ್ಲಿ ಬ್ಯುಸಿಯಾಗಿದ್ದು, ಕಳೆದ ಆರೇಳು ತಿಂಗಳಿಂದಲೇ ಚುನಾವಣಾ ತಾಲೀಮು ನಡೆಸುತ್ತಿದ್ದಾರೆ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಶಾಸಕ ಕೆ.ಸುರೇಶಗೌಡ (ಜೆಡಿಎಸ್)
2. ಎನ್.ಚಲುವರಾಯಸ್ವಾಮಿ (ಕಾಂಗ್ರೆಸ್)
3. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್‌ ಗೌಡ(ಬಿಜೆಪಿ)

ಜಾತಿವಾರು ಮತದಾರರ ವಿವರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಮಂಡ್ಯ | ರೆಬೆಲ್‌ ಸ್ಟಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಫುಲ್‌ ಡಿಮ್ಯಾಂಡ್‌

Exit mobile version