Site icon Vistara News

Flag Controversy : ಶಿವಾಜಿ ನಗರದ ಬಿಬಿಎಂಪಿ ಧ್ವಜಸ್ತಂಭದಲ್ಲಿ ಹಸಿರು ಬಾವುಟ; ಏನ್ಮಾಡ್ತೀರಾ ಈಗ?

Flag Controversy Shivajinagar

ಬೆಂಗಳೂರು: ಮಂಡ್ಯ ಜಿಲ್ಲೆಯ (Mandya News) ಕೆರಗೋಡು ಗ್ರಾಮದಲ್ಲಿ ಸ್ಥಾಪಿಸಲಾಗಿರುವ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ (Hanuman Flag) ಹಾರಿಸಿದ್ದು ಮತ್ತು ತಾಲೂಕು ಆಡಳಿತ ತೆರವು ಮಾಡಿದ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳು (Flag Controversy) ಜೋರಾಗಿವೆ. ಈ ನಡುವೆ ಚರ್ಚೆಗೆ ಬಂದಿರುವ ಒಂದು ಪ್ರಮುಖ ವಿಚಾರವೆಂದರೆ, ಸಾರ್ವಜನಿಕ ಜಾಗದಲ್ಲಿ ನಾಡ ಧ್ವಜ ಮತ್ತು ರಾಷ್ಟ್ರ ಧ್ವಜವನ್ನು ಹೊರತುಪಡಿಸಿ ಯಾವುದೇ ಧಾರ್ಮಿಕ ಧ್ವಜಗಳನ್ನು ಹಾಕುವಂತಿಲ್ಲ. ಕೆಲವು ಸಂದರ್ಭದಲ್ಲಿ ಅನುಮತಿ ಪಡೆದು ತಾತ್ಕಾಲಿಕವಾಗಿ ಧ್ವಜಗಳನ್ನು ಹಾಕಲು ಅನುಮತಿ ನೀಡಲಾಗುತ್ತದೆ.

ಕೆರಗೋಡಿನಲ್ಲಿ ಸಾರ್ವಜನಿಕ ಜಾಗದಲ್ಲಿ ಹನುಮ ಧ್ವಜವನ್ನು ಹಾಕಲಾಗಿದೆ ಎಂಬ ಕಾರಣಕ್ಕಾಗಿ ಅದನ್ನು ತೆಗೆದ ಬೆನ್ನಿಗೇ ʻಹಾಗಿದ್ದರೆ ಸಾರ್ವಜನಿಕ ಜಾಗದಲ್ಲಿರುವ ಎಲ್ಲಾ ಧಾರ್ಮಿಕ ಧ್ವಜಗಳನ್ನು ತೆಗೆಸುವ ತಾಕತ್ತು ತೋರಿಸುತ್ತೀರಾʼ ಎಂಬ ಪ್ರಶ್ನೆಯನ್ನು, ಸವಾಲನ್ನು ಎತ್ತಲಾಗಿದೆ. ಕೆಲವರು ಸಾರ್ವಜನಿಕ ಜಾಗದಲ್ಲಿರುವ ಧಾರ್ಮಿಕ ಬಾವುಟಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತಿದ್ದಾರೆ. ಅದರಲ್ಲೂ ಹಿಂದೂ ಸಂಘಟನೆಗಳು ಸಾರ್ವಜನಿಕ ಪ್ರದೇಶದಲ್ಲಿ ಹಾಕಲಾಗಿರುವ ಮುಸ್ಲಿಂ ಧರ್ಮದ ಧ್ವಜಗಳನ್ನು ಟಾರ್ಗೆಟ್‌ ಮಾಡಿವೆ.

ಶಿವಾಜಿ ನಗರದ ಚಾಂದಿನಿ ಚೌಕ್‌ನಲ್ಲಿ ಹಸಿರು ಬಾವುಟ ಹಾರಾಟ

ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿ (Chandini Chowk in Shivaji Nagar) ಇರುವ ಬಿಬಿಎಂಪಿ ಧ್ವಜ ಸ್ತಂಭದಲ್ಲಿ (BBMP Flag Post) ಹಸಿರು ಬಾವುಟ ಕಳೆದ ಹಲವು ಸಮಯದಿಂದ ಹಾರಾಡುತ್ತಿದೆ. ಇದರ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಹಿಂದು ಸಂಘಟನೆಯ ಕಾರ್ಯಕರ್ತರು ಇದನ್ನು ಏನು ಮಾಡುತ್ತೀರಿ ಎಂದು ಸವಾಲು ಹಾಕಿದ್ದಾರೆ.

ʻʻಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ ಈ ಧ್ವಜ – ಯಾವ ಧರ್ಮದ್ದು? ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು..ತೆಗೆಸೋ ತಾಕತ್ ಇಲ್ವಾ? ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೋ..!ʼʼ ಎಂದು ವಿಕಾಸ್ ವಿಕ್ಕಿ ಹಿಂದೂ ಎಂಬ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ಶಿವಾಜಿ ನಗರದ ಈ ಜಾಗ ಸಾರ್ವಜನಿಕ ಜಾಗ, ಅಲ್ಲಿರುವ ಸ್ತಂಭ ಬಿಬಿಎಂಪಿಗೆ ಸೇರಿದ್ದು, ಅದರಲ್ಲಿ ಹಸಿರು ಧ್ವಜ ಹಾರುತ್ತಿದೆ ಎಂದರೆ ಅದು ಸಾರ್ವಜನಿಕ ಜಾಗದಲ್ಲೇ ಇದ್ದಂತಾಗಿದೆ. ಹೀಗಾಗಿ ಅದನ್ನು ಏನು ಮಾಡುತ್ತೀರಿ., ಕೆರಗೋಡಿನಲ್ಲಿ ತೋರಿಸಿದ ಧೈರ್ಯವನ್ನು ಇಲ್ಲೂ ತೋರಿಸುತ್ತೀರಾ ಎಂದು ಕೇಳಲಾಗಿದೆ.

ಇದನ್ನೂ ಓದಿ : Hanuman Flag : ಕೆರಗೋಡಿನಲ್ಲಿ 30 ವರ್ಷದ ಹಿಂದೆಯೇ ಹನುಮ ಧ್ವಜ ಇತ್ತು; ಸಾಕ್ಷ್ಯ ಇಲ್ಲಿದೆ

ಎಚ್ಚೆತ್ತ ಪೊಲೀಸರಿಂದ ತೆರವು

ಈ ಬಾವುಟದ ವಿಚಾರ ಜಾಲ ತಾಣದಲ್ಲಿ ಜೋರಾಗಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತ ಶಿವಾಜಿನಗರ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು. ಹಸಿರು ಬಾವುಟವನ್ನು ತೆಗಿಸಿ ರಾಷ್ಟ್ರ ಧ್ವಜವನ್ನು ಹಾರಿಸಲಾಗಿದೆ. ಯಾರೂ ಸಾರ್ವಜನಿಕ ಜಾಗದಲ್ಲಿ ಧಾರ್ಮಿಕ ಬಾವುಟಗಳನ್ನು ಹಾರಿಸದಂತೆ ಇಲಾಖೆ ಸೂಚನೆಯನ್ನು ನೀಡಿದೆ.

ಸಾರ್ವಜನಿಕ ಜಾಗದಲ್ಲಿ ಬಾವುಟಗಳನ್ನು ಹಾರಿಸುವ ವಿಚಾರದಲ್ಲಿ ನಿರ್ದಿಷ್ಟ ನಿಯಮಗಳೇ ಇವೆ. ಆದರೆ, ಕೆಲವೊಮ್ಮೆ ಇದರ ಬಗ್ಗೆ ಆಕ್ಷೇಪಗಳು ಬಾರದೆ ಇದ್ದರೆ ಆಡಳಿತ ವ್ಯವಸ್ಥೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ಆಕ್ಷೇಪ ಬಂದರೆ ಹಿಂದಕ್ಕೆ ಪಡೆಯುತ್ತದೆ.

Exit mobile version