ಮಂಡ್ಯ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಮಂಡ್ಯದಲ್ಲಿ ಕಲಾ ತಂಡಗಳು (Modi in Karnataka) ಸಜ್ಜಾಗಿವೆ. 500ಕ್ಕೂ ಹೆಚ್ಚಿ ಕಲಾವಿದರು ಸಂಭ್ರಮದಿಂದ ಕಾಯುತ್ತಿದ್ದಾರೆ. ಈಗಾಗಲೇ ಪ್ರಧಾನಿ ಮೋದಿಯವರು ಮೈಸೂರಿನಿಂದ ಮಂಡ್ಯದತ್ತ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದಾರೆ.
ಜಾನಪದ ಕಲಾವಿದರು, ವಿದ್ಯಾರ್ಥಿ ಕಲಾ ತಂಡಗಳು, ತಮಟೆ ಮೇಳ, ಕೀಲು ಕುದುರೆ, ಪಟದ ಕುಣಿತ, ಕೋಲಾಟ, ಸೋಮನ ಕುಣಿತ, ಆದಿವಾಸಿ ಕುಣಿತ, ಪೂಜಾ ಕುಣಿತ, ಡೊಳ್ಳು, ನಗಾರಿ, ವೀರಗಾಸೆ, ಲಂಬಾಣಿ ನೃತ್ಯ, ಕೊಂಬು- ಕಹಳೆ, ನಂದಿ ಧ್ವಜ, ಮಾರಿ ಕುಣಿತ ಸೇರಿದಂತೆ ಹತ್ತಾರು ಕಲಾತಂಡಗಳು ಭಾಗವಹಿಸುತ್ತಿವೆ. ಈಗಾಗಲೇ ವೇಷಭೂಷಣ ತೊಟ್ಟು ಸರ್ವೀಸ್ ರಸ್ತೆಯಲ್ಲಿ ಕಲಾವಿದರು ಜನರನ್ನು ರಂಜಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಗುತ್ತಿದೆ. ಮೈಸೂರು- ಬೆಂಗಳೂರು ಹೆದ್ದಾರಿ ಮೇಲ್ಸೇತುವೆ ಮೇಲೆ 50 ಮೀಟರ್ ನಡಿಗೆಯನ್ನು ಪ್ರಧಾನಿ ನಡೆಸಲಿದ್ದಾರೆ. ಜಿಲ್ಲಾಡಳಿತದಿಂದ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ. ಅಲಂಕೃತ ಬ್ಯಾರಿಕೇಡ್, ಗಿಡಗಳನ್ನು ಇಡಲಾಗಿದೆ.
ಬೆಂಗಳೂರು-ಮೈಸೂರು ದಶಪಥ ರಸ್ತೆ ಲೋಕಾರ್ಪಣೆಯ ವೇಳಾಪಟ್ಟಿ
ಬೆಳಿಗ್ಗೆ 11.20 ಕ್ಕೆ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಪ್ರಧಾನಿ ಮೋದಿಯವರು ಆಗಮಿಸಲಿದ್ದಾರೆ.
11.25 ಕ್ಕೆ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್ ರವರೆಗೆ ರೋಡ್ ಶೋ ನಡೆಸಲಿದ್ದಾರೆ.
ನಂತರ11.40 ಕ್ಕೆ ಒಟ್ಟು 8479 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 118 ಕಿ.ಮೀ ಉದ್ದದ ಮೈಸೂರು-ಬೆಂಗಳೂರು ದಶಪಥ ರಸ್ತೆಯನ್ನು ಹನಕೆರೆಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಮಧ್ಯಾಹ್ನ 12.15 ರಿಂದ 01.15 ರವರೆಗೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ರೂ.4128.92 ಕೋಟಿ ವೆಚ್ಚದ ಒಟ್ಟು 92.33 ಕಿ.ಮೀ ಉದ್ದದ 4 ಪಥದ ಮೈಸೂರು – ಕುಶಾಲನಗರ 4 ಪ್ಯಾಕೇಜ್‌ಗಳ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ಮಾಡಲಿದ್ದಾರೆ.
12.40 ರಿಂದ 1.15 ರವರೆಗೆ ಪ್ರಧಾನ ಮಂತ್ರಿಗಳು ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 1.15 ಗಂಟೆಗೆ ಮಂಡ್ಯದಿಂದ ನಿರ್ಗಮಿಸಲಿದ್ದಾರೆ.