Site icon Vistara News

Hanuman Flag: ಹನುಮಧ್ವಜ ವಿವಾದ; ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಲಿ ಎಂದ ಪ್ರಿಯಾಂಕ್‌ ಖರ್ಗೆ

Priyank Kharge

ಬೆಂಗಳೂರು: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಹಾರಾಟ (Hanuman Flag) ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ವಿವಾದವಾಗಿದೆ. ಈ ಸಂಬಂಧ ಬಿಜೆಪಿ-ಜೆಡಿಎಸ್‌ ಪ್ರತಿಭಟನೆಯನ್ನೂ ನಡೆಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದು ಹನುಮಾನ್‌ ಧ್ವಜ ವಿವಾದ ವಿವಾದವನ್ನು ಸೃಷ್ಟಿಸಿ ಕೋಮು ಸೌಹಾರ್ದವನ್ನು ಕೆಡಿಸಲು ಬಿಜೆಪಿ (BJP Karnataka) ಮಾಡುತ್ತಿರುವ ಹುನ್ನಾರವಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ವೇಳೆ ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಕೇಳಿರುವ ಪ್ರಿಯಾಂಕ್‌ ಖರ್ಗೆ, ಕಾನೂನು, ನೀತಿ ನಿಯಮಗಳೇನು ಬಿಜೆಪಿ ಕಾಲ ಕೆಳಗಿನ ಕಸದಂತೆ ನೋಡುವುದೇಕೆ? ಎಂದು ಕಿಡಿಕಾರಿದ್ದಾರೆ. ಬಿಜೆಪಿಗರಿಗೆ ದೇಶದ ಧ್ವಜ, ದೇಶದ ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ಅವರ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಲಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: CAA: ದೇಶಾದ್ಯಂತ ಒಂದೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಕೇಂದ್ರ ಮಹತ್ವದ ಘೋಷಣೆ

ಪ್ರಿಯಾಂಕ್‌ ಖರ್ಗೆ ಪೋಸ್ಟ್‌ನಲ್ಲೇನಿದೆ?

ಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘ ಪರಿವಾರ ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗವನ್ನು ಆರಂಭಿಸಿದೆ. ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎನಿಸುತ್ತದೆ.

ಮಂಡ್ಯದಲ್ಲಿ ಬೆಂಕಿ ಹೊತ್ತಿಸಿ ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ.

ವಿರೋಧ ಪಕ್ಷದ ನಾಯಕನೆಂದರೆ ಘನತೆಯುಕ್ತ ಸ್ಥಾನ, ಆ ಸ್ಥಾನದ ಗೌರವವನ್ನು ಮಣ್ಣುಪಾಲು ಮಾಡುತ್ತಿರುವ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರೇ, ನಿಮ್ಮ ಗಮನಕ್ಕೆ ಕೆಲವು ವಿಚಾರಗಳು…

29/12/2023 ರಂದು
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನವರು ಧ್ವಜ ಸ್ಥಂಭಕ್ಕೆ ಅನುಮತಿ ಕೇಳಿದ್ದಾರೆ.

17/01/2024ರಂದು
ಧ್ವಜ ಸ್ಥಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಬಿಟ್ಟು ಇನ್ನಿತರ ಯಾವುದೇ ರಾಜಕೀಯ, ಧಾರ್ಮಿಕ ಧ್ವಜವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಸಹಿ ಮಾಡಿದ್ದಾರೆ.

18/01/2024ರಂದು
ಕೆರಗೋಡು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣಕ್ಕೆ ಮಾತ್ರ ಷರತ್ತುಗಳೊಂದಿಗೆ ಅನುಮತಿ ಪತ್ರ ನೀಡಿದ್ದಾರೆ.

ಬಿಜೆಪಿ ಇಂದು ಉತ್ತರಿಸಲೇಬೇಕಾದ ಪ್ರಶ್ನೆಗಳು

ಬಿಜೆಪಿ ವಿರುದ್ಧ ಆಕ್ರೋಶವನ್ನು ಹೊರಹಾಕಿರುವ ಪ್ರಿಯಾಂಕ್‌ ಖರ್ಗೆ, ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದ RSS ಹೇಳಿಕೊಟ್ಟ ಪಾಠದಂತೆ ಬಿಜೆಪಿಯೂ ತಿರಂಗಾ ಕಂಡರೆ ಉರಿದು ಬೀಳುತ್ತಿದೆ, ರಾಷ್ಟ್ರ ಧ್ವಜಕ್ಕೆ ಕೈ ಮುಗಿಯುವ ಬದಲು ಕೆಂಡ ಕಾರುತ್ತಿದೆ.

ಬಿವೈ ವಿಜಯೇಂದ್ರ ಹಾಗೂ ಆರ್ ಅಶೋಕ್‌ರವರೇ, ಸರ್ಕಾರ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಆ ಧ್ವಜ ಸ್ಥಂಭದ ಉದ್ದೇಶವನ್ನು ಈಡೇರಿಸಿದೆ, ಹೀಗಿದ್ದೂ ನಿಮಗೆ ಇಷ್ಟೊಂದು ಉರಿ, ತಾಪವೇಕೆ?

ಇದನ್ನೂ ಓದಿ: Hanuman Flag : ಹನುಮ ಧ್ವಜ ಮರುಸ್ಥಾಪನೆಗೆ ಶಪಥ; ಕೆರಗೋಡಿನಿಂದ ಪಾದಯಾತ್ರೆ ಆರಂಭ

ರಾಷ್ಟ್ರ ಧ್ವಜವನ್ನು ದ್ವೇಷಿಸುವ ಮೂಲಕ ಬಿಜೆಪಿಗರು ತಮಗೆ ತಾವೇ ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದಾರೆ. ಬಿಜೆಪಿಗರಿಗೆ ದೇಶದ ಧ್ವಜ, ದೇಶದ ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ಅವರ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಲಿ. ಬಿಜೆಪಿಯ ಯಾವುದೇ ತಂತ್ರ, ಕುತಂತ್ರಗಳಿಗೆ ನಾವು ಬಗ್ಗುವುದಿಲ್ಲ, ಬಗ್ಗುಬಡಿಯುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

Exit mobile version