ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು (Keregodu Hanuman flag) ಗ್ರಾಮದಲ್ಲಿ ಧ್ವಜಸ್ತಂಭದಲ್ಲಿ ಹಾಕಿದ್ದ ಹನುಮ ಧ್ವಜವನ್ನು (Hanuman Flag) ತೆರವುಗೊಳಿಸಿದ್ದನ್ನು ಖಂಡಿಸಿ ಸೋಮವಾರ ಬಿಜೆಪಿ ಮತ್ತು ಜೆಡಿಎಸ್ (BJP and JDS Party) ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆ ಅಂತ್ಯಗೊಂಡಿದೆ. ತಮ್ಮ ಶಕ್ತಿ ಪ್ರದರ್ಶನ ಮಾಡಿದ ಹನುಮ ಭಕ್ತರು (Hanuman Devotees) ಇದೀಗ ಫೆಬ್ರವರಿ 9ರಂದು ಮಂಡ್ಯ ಬಂದ್‌ಗೆ ಕರೆ (Mandya bandh on February 9) ನೀಡಿದ್ದಾರೆ.
ಕೆರಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಸುಮಾರು 17 ಕಿಮೀ ಪಾದಯಾತ್ರೆ ನಡೆಸಿ ಮಂಡ್ಯ ತಲುಪಿ ದೊಡ್ಡ ಮಟ್ಟದ ಪ್ರತಿಭಟನಾ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಫೆಬ್ರವರಿ 9ರಂದು ಮಂಡ್ಯ ಬಂದ್ ನಡೆಯಲಿದೆ ಎಂದು ಘೋಷಿಸಿದರು.
ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಈ ಪ್ರತಿಭಟನೆ ಇಲ್ಲಿಗೆ ಮುಕ್ತಾಯವಾಗಿದೆ ಎಂದು ತಿಳಿದುಕೊಳ್ಳಬೇಡಿ. ಒಂದು ದೊಡ್ಡ ಹೋರಾಟ ಇಲ್ಲಿಂದ ಆರಂಭವಾಗಲಿದೆ ಎಂದು ಹೇಳಿದರು.
ಕೆರಗೋಡಿನ ಕೋದಂಡ ರಾಮ ದೇವಸ್ಥಾನದಲ್ಲಿ ಪೂಜೆ ಮಾಡಿದ ಬಳಿಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿತ್ತು. ಬಳಿಕ ಸುಮಾರು 17 ಕಿ.ಮೀ. ಮಾರ್ಗದಲ್ಲಿ ಹಲವು ಕಡೆ ಹನುಮ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅವರ ಗುರಿ ಇದ್ದದ್ದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಕುಮಾರ್ ಗಣಿಗ ಅವರ ಮೇಲೆ. ದಾರಿಯುದ್ದಕ್ಕೂ ಅವರ ಫ್ಲೆಕ್ಸ್ ಗಳು, ಭಾವಚಿತ್ರಗಳನ್ನು ಹರಿದು ಹಾಕಲಾಯಿತು.
ಇದನ್ನೂ ಓದಿ : Hanuman Flag: ಹನುಮಧ್ವಜ ವಿವಾದ; ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಲಿ ಎಂದ ಪ್ರಿಯಾಂಕ್ ಖರ್ಗೆ
Hanuman Flag : ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್
ಮಂಡ್ಯ ನಗರ ಪ್ರವೇಶ ಮಾಡಿದ ಮೇಲಂತೂ ಕಾರ್ಯಕರ್ತರ ಅಬ್ಬರ ಇನ್ನೂ ಜೋರಾಯಿತು. ಇಲ್ಲಿನ ಕೆಲವು ಶಾಸಕ ಗಣಿಗ ಅವರ ಫ್ಲೆಕ್ಸ್‌ಗಳಿಗೆ ಪೊಲೀಸರು ಟರ್ಪಾಲುಗಳನ್ನು ಮುಚ್ಚಿದ್ದರು. ಆದರೆ, ಪಾದಯಾತ್ರಿಗಳು ಇದರ ವಿರುದ್ಧ ಆಕ್ರೋಶಗೊಂಡು ಪೊಲೀಸರ ಜತೆಗೇ ಜಗಳಕ್ಕಿಳಿದರು. ಅಲ್ಲಲ್ಲಿ ಕಂಡ ಗಣಿಗ ಅವರ ಚಿತ್ರಗಳನ್ನು ಹರಿದು ಹಾಕಿ ಬೆಂಕಿ ಹಾಕಿದರು. ಈ ನಡುವೆ ಕಲ್ಲು ತೂರಾಟವೂ ನಡೆಯಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಮಂಡ್ಯದ ನಂದ ವೃತ್ತ, ಸಂಜಯ್ ವೃತ್ತ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇದ್ದ ಫ್ಲೆಕ್ಸ್‌ಗಳು ಕೂಡಾ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದವು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಸಂಘರ್ಘ ಏರ್ಪಟ್ಟಿತ್ತು. ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆದು ಸರ್ಕಾರದ ವಿರುದ್ಧ, ಶಾಸಕ ರವಿ ಗಣಿಗ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಪಾದ ಯಾತ್ರೆ ವೇಳೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜತೆಗೆ ಪಾದಯಾತ್ರೆ ಸಾಗಿ ಬಂದ ದಾರಿಯುದ್ದಕ್ಕೂ ಮುಸ್ಲಿಂ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕೆಲವು ಕಡೆ ಪಾದ ಯಾತ್ರೆ ನೋಡಲು ಬಂದ ಮುಸ್ಲಿಂ ಮಹಿಳೆಯರನ್ನು ಪೊಲೀಸರೇ ಮನೆಯ ಒಳಗೆ ಕಳುಹಿಸಿದರು.
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಅಬ್ಬರದ ಪಾದಯಾತ್ರೆ ಮತ್ತು ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರಾದ ಸಿ.ಟಿ. ರವಿ, ಪ್ರೀತಂ ಗೌಡ, ಜೆಡಿಎಸ್ ನಾಯಕರಾದ ಎಚ್.ಡಿ ಕುಮಾರಸ್ವಾಮಿ, ಮಾಜಿ ಶಾಸಕ ಅನ್ನದಾನಿ, ಕೆಆರ್‌ಪಿಪಿ ಪಕ್ಷದ ನಾಯಕ ಜನಾರ್ದನ ರೆಡ್ಡಿ ಮತ್ತು ಇತರರು ಭಾಗವಹಿಸಿದ್ದರು. ಮಂಡ್ಯದ ಸಂಸದೆ ಸುಮಲತಾ ಅವರು ಭಾಗವಹಿಸದೆ ಇರುವುದು ಅಚ್ಚರಿ ವ್ಯಕ್ತಪಡಿಸಿದರು.
Hanuman Flag : ವಿಜೃಂಭಿಸಿದ ಕೇಸರಿ ಶಾಲು, ಹನುಮ ಧ್ವಜ
ಕೆರಗೋಡು ಗ್ರಾಮದಲ್ಲಿ ಮತ್ತು ಹನುಮ ಧ್ವಜ ಮರು ಸ್ಥಾಪಿಸುವ ಶಪಥದೊಂದಿಗೆ ಆರಂಭಗೊಂಡ ಪಾದಯಾತ್ರೆಯಲ್ಲಿ ಹನುಮ ಭಕ್ತರು ಕೇಸರಿ ಶಾಲು ಹಾಕಿಕೊಂಡಿದ್ದರೆ, ಕೈಯಲ್ಲಿ ಹನುಮ ಧ್ವಜ ವಿಜೃಂಭಿಸುತ್ತಿತ್ತು. ಪ್ರತಿಭಟನಾಕಾರರು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಿದ್ದರು.