ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ (Keragodu Hanuman flag controversy) ಧ್ವಜಸ್ತಂಭದಲ್ಲಿ ಹಾಕಿದ್ದ ಹನುಮ ಧ್ವಜವನ್ನು (Hanuman Flag) ತೆರವುಗೊಳಿಸಿದ್ದನ್ನು ಖಂಡಿಸಿ ಸೋಮವಾರ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆ (BJP-JDS Padayatra) ಹಿಂಸಾರೂಪವನ್ನು ತಾಳಿತ್ತು. 17 ಕಿ.ಮೀ. ದೂರಕ್ಕೆ ನಡೆದ ಪಾದಯಾತ್ರೆ ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಹನುಮ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾರಿಯುದ್ದಕ್ಕೂ ಹಲವು ಕಡೆಗಳಲ್ಲಿ ಹನುಮ ಭಕ್ತರು ಮಂಡ್ಯ ಶಾಸಕ ರವಿ ಗಣಿಗ ಅವರ ಫ್ಲೆಕ್ಸ್‌ಗಳ ಮೇಲೆ ತಮ್ಮ ಸಿಟ್ಟನ್ನು (Ravikumar Ganiga Flex damaged) ಪ್ರದರ್ಶಿಸಿದರು. ಇದು ಲಾಠಿ ಚಾರ್ಜ್ (Police lati charge), ಕಲ್ಲು ತೂರಾಟಗಳಿಗೆ (Stone pelting in Mandya) ಕಾರಣವಾಯಿತು.
ಕೆರಗೋಡಿನಿಂದ ಪಾದಯಾತ್ರೆಯಲ್ಲಿ ಬರುತ್ತಿದ್ದ ವೇಳೆ ಸಾತನೂರು ಗ್ರಾಮಕ್ಕೆ ಪಾದಯಾತ್ರೆ ಬಂದಾಗ ಹನುಮ ಭಕ್ತರು ಸಿಟ್ಟಿನಿಂದ ಕುದಿಯ ತೊಡಗಿದರು. ಇದಕ್ಕೆ ಕಾರಣವಾಗಿದ್ದು ಮನೆಯೊಂದರ ಎದುರು ಹಾಕಲಾಗಿದ್ದ ಶಾಸಕ ರವಿ ಕುಮಾರ್ ಗಣಿಗ ಅವರ ಫ್ಲೆಕ್ಸ್. ಈ ಪ್ರಕರಣ ಇಷ್ಟೊಂದು ಬೆಳೆಯಲು ರವಿ ಕುಮಾರ್ ಗಣಿಗ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಫ್ಲೆಕ್ಸ್‌ಗಳನ್ನು ಹರಿದು ಹಾಕಿದರು.
ಮುಂದೆ ದಾರಿಯುದ್ದಕ್ಕೂ ಜನಾಕ್ರೋಶ ಜೋರಾಯಿತು. ಹಲವು ಊರುಗಳಲ್ಲಿ ಜನರು ಪಾದಯಾತ್ರೆಯನ್ನು ಸೇರಿಕೊಳ್ಳುತ್ತಿದ್ದಂತೆಯೇ ಜನಸಾಗರವೇ ಮಂಡ್ಯದತ್ತ ಹರಿದುಬರುವಂತೆ ಕಂಡಿತು.
Hanuman Flex : ಫ್ಲೆಕ್ಸ್‌ಗೆ ಎಸೆದ ಕಲ್ಲು ಸಾರ್ವಜನಿಕರ ತಲೆಗೆ
ಮಂಡ್ಯ ನಗರದ ಹೊರಭಾಗದಲ್ಲಿ ಕಂಡ ಶಾಸಕ ರವಿ ಗಣಿಗ ಅವರ ಫ್ಲೆಕ್ಸ್‌ಗಳ ಮೇಲಿನ ಆಕ್ರೋಶ ನಗರ ಪ್ರವೇಶ ಮಾಡುತ್ತಿದ್ದಂತೆಯೇ ಇನ್ನಷ್ಟು ಜೋರಾಯಿತು. ಮಂಡ್ಯದ ನಂದ ವೃತ್ತದಲ್ಲಿ ಗಣಿಗ ಅವರ ಫ್ಲೆಕ್ಸ್ ಮೇಲೆ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಶಾಸಕ ಗಣಿಗ ರವಿಕುಮಾರ್ ಫ್ಲೆಕ್ಸ್‌ಗೆ ಹೊಡೆದ ಕಲ್ಲು ವ್ಯಕ್ತಿಯೊಬ್ಬರ ತಲೆ ಮೇಲೆ ಬಿದ್ದು ಅವರು ಗಾಯಗೊಂಡರು. ತಕ್ಷಣವೇ ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇತ್ತ ಸಂಜಯ ವೃತ್ತದಲ್ಲೂ ಶಾಸಕ ರವಿ ಕುಮಾರ್ ಅವರ ಫ್ಲೆಕ್ಸ್ ಹರಿದು ಹಾಕಲಾಯಿತು. ಇಲ್ಲಿ ಪೊಲೀಸರು ಫ್ಲೆಕ್ಸ್‌ಗೆ ಅಡ್ಡಲಾಗಿ ತಮ್ಮ ವ್ಯಾನ್ ನಿಲ್ಲಿಸಿದ್ದರೂ ಪ್ರತಿಭಟನಾಕಾರರೂ ಇದನ್ನು ಲೆಕ್ಕಿಸದೆ ದಾಳಿ ಮಾಡಿದರು. ಕಲ್ಲು ಮಾತ್ರವಲ್ಲ, ಬಾಟಲ್‌ಗಳನ್ನೂ ಎಸೆಯಲಾಯಿತು. ಕೆಲವು ಫ್ಲೆಕ್ಸ್‌ಗಳನ್ನು ಎಸೆದು ಬೆಂಕಿಗೆ ಹಾಕಲಾಯಿತು.
ಮಂಡ್ಯದ ಮಹಾವೀರ ವೃತ್ತದಲ್ಲಿ ಹಾಕಲಾಗಿದ್ದ ಚಲುವರಾಯಸ್ವಾಮಿ, ಗಣಿಗ ರವಿಕುಮಾರ್ ಫ್ಲೆಕ್ಸ್ ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಯಿತು. ಈ ವೇಳೆ ಕಾರ್ಯಕರ್ತರನ್ನು ತಡೆದ ಪೊಲೀಸರು ಅವರನ್ನು ಚದುರಿಸಿದರು.
ಇದಲ್ಲದೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಳವಡಿಸಿದ್ದ ಶುಭಾಶಯ ಕೋರುವ ಫ್ಲೆಕ್ಸ್‌ಗಳೂ ಜನಾಕ್ರೋಶಕ್ಕೆ ಬಲಯಾದವು. ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಶಾಸಕ ರವಿ ಗಣಿಗ ಫ್ಲೆಕ್ಸ್ ಕೂಡಾ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಬಲಿಯಾಯಿತು. ಅಂತಿಮವಾಗಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು.
Hanuman Flag : ಚಿಕ್ಕಮಂಡ್ಯದ ಮುಸ್ಲಿಂ ಪ್ರದೇಶಗಳಲ್ಲಿ ಭದ್ರತೆ
ಬೆಳಗ್ಗೆ ಕೆರಗೋಡು ಕೋದಂಡರಾಮ ದೇವಸ್ಥಾನದಲ್ಲಿ ಆರಂಭಗೊಂಡ ಪಾದಯಾತ್ರೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಚಿಕ್ಕ ಮಂಡ್ಯ ಕೆರೆ ಬಡಾವಣೆ ಬಳಿ ಬಂದಿದೆ. ಚಿಕ್ಕಮಂಡ್ಯದ ಕೆರೆ ಅಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿರುವುದರಿಂದ ಮುಸ್ಲಿಂ ಏರಿಯಾಕ್ಕೆ ಹೊಂದಿಕೊಂಡಂತಿರೊ ಬೀದಿಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Hanuman Flag : ಹನುಮ ಧ್ವಜ ಮರುಸ್ಥಾಪನೆಗೆ ಶಪಥ; ಕೆರಗೋಡಿನಿಂದ ಪಾದಯಾತ್ರೆ ಆರಂಭ