Site icon Vistara News

Hanuman Flag : ಕಾಂಗ್ರೆಸ್‌ ಶಾಸಕ ರವಿ ಗಣಿಗ ಫ್ಲೆಕ್ಸ್‌ ಹರಿದು ಛಿದ್ರಗೊಳಿಸಿದ ಹನುಮ ಭಕ್ತರು

Hanuman Flag Ravi Ganiga

ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭದಲ್ಲಿ ಹಾಕಿದ್ದ ಹನುಮ ಧ್ವಜವನ್ನು (Hanuman Flag) ತೆರವುಗೊಳಿಸಿದ್ದನ್ನು ಖಂಡಿಸಿ ಸೋಮವಾರ ಬಿಜೆಪಿ ಮತ್ತು ಜೆಡಿಎಸ್‌ ನೇತೃತ್ವದಲ್ಲಿ ಹನುಮ ಭಕ್ತರು (Hanuman devotees) ಕೆರಗೋಡಿನಿಂದ ಮಂಡ್ಯದ ವರೆಗೆ ಬೃಹತ್‌ ಪಾದಯಾತ್ರೆ (Padayatra to mandya) ನಡೆಸಿದ್ದಾರೆ. ಈ ವೇಳೆ ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಹನುಮ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಯ ವೇಳೆ ಹುಲಿವಾನ ಗ್ರಾಮದಲ್ಲಿ, ಸಾತನೂರು ಬಳಿ ರಸ್ತೆಯುದ್ದಕ್ಕೂ ಹಾಕಲಾದ ಶಾಸಕ ಗಣಿಗ ರವಿಕುಮಾರ್ (Mandya MLA Ravikumar Ganiga) ಅವರನ್ನು ಅಭಿನಂದಿಸುವ ಫ್ಲೆಕ್ಸ್‌ ಹರಿದು ಆಕ್ರೋಶ (Ravikumar Ganiga Flex damaged) ವ್ಯಕ್ತಪಡಿಸಲಾಗಿದೆ.

ಕೆರಗೋಡಿನಿಂದ ಪಾದಯಾತ್ರೆಯಲ್ಲಿ ಬರುತ್ತಿದ್ದ ವೇಳೆ ಸಾತನೂರು ಗ್ರಾಮಕ್ಕೆ ಪಾದಯಾತ್ರೆ ಬಂದಾಗ ಮನೆಯೊಂದರ ಎದುರು ಹಾಕಲಾಗಿದ್ದ ಫ್ಲೆಕ್ಸ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹನುಮ ಭಕ್ತರು. ಈ ಭಾಗದಲ್ಲಿ ರಸ್ತೆಯ ಹಲವು ಕಡೆಗಳಲ್ಲಿ ಗಣಿಗ ಅವರ ಫ್ಲೆಕ್ಸ್‌ ಗಳನ್ನು ಹಾಕಲಾಗಿತ್ತು. ಈ ಪ್ರಕರಣ ಇಷ್ಟೊಂದು ಬೆಳೆಯಲು ರವಿ ಕುಮಾರ್‌ ಗಣಿಗ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಫ್ಲೆಕ್ಸ್‌ಗಳನ್ನು ಹರಿದು ಹಾಕಿದರು.

Hanuman Flag : ಚಿಕ್ಕಮಂಡ್ಯದ ಮುಸ್ಲಿಂ ಪ್ರದೇಶಗಳಲ್ಲಿ ಭದ್ರತೆ

ಬೆಳಗ್ಗೆ ಕೆರಗೋಡು ಕೋದಂಡರಾಮ ದೇವಸ್ಥಾನದಲ್ಲಿ ಆರಂಭಗೊಂಡ ಪಾದಯಾತ್ರೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಚಿಕ್ಕ ಮಂಡ್ಯ ಕೆರೆ ಬಡಾವಣೆ ಬಳಿ ಬಂದಿದೆ. ಚಿಕ್ಕಮಂಡ್ಯದ ಕೆರೆ ಅಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿರುವುದರಿಂದ ಮುಸ್ಲಿಂ ಏರಿಯಾಕ್ಕೆ ಹೊಂದಿಕೊಂಡಂತಿರೊ ಬೀದಿಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯ ಹನುಮಭಕ್ತರು ಭಾಗಿಯಾಗಿರುವುದರಿಂದ ಯಾತ್ರೆ ನೋಡಲು ಆಗಮಿಸಿದ ಮುಸ್ಲಿಂ ಸಮುದಾಯದವರನ್ನು ಮನೆಯೊಳಗೆ ಕಳುಹಿಸಲಾಗಿದೆ.

ಕಟೌಟ್‌ಗೆ ಟರ್ಪಾಲು ಮುಚ್ಚಿ ರಕ್ಷಿಸಿದ ಪೊಲೀಸರು

ಈ ನಡುವೆ, ಮಂಡ್ಯದ ಕಾಳಿಕಾಂಬ ದೇವಾಲಯದ ಬಳಿ ಹಾಕಲಾಗಿರುವ ಶಾಸಕ ರವಿ ಗಣಿಗ ಅವರ ಫ್ಲೆಕ್ಸ್‌ಗಳಿಗೆ ಟರ್ಪಾಲು ಮುಚ್ಚಿ ಪೊಲೀಸರು ರಕ್ಷಣೆ ನೀಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪಾದಯಾತ್ರಿಗಳ ನಡುವೆ ಭಾರಿ ನೂಕಾಟ ತಳ್ಳಾಟ ನಡೆಯಿತು. ಸ್ವತಃ ಎಸ್‌ ಪಿ ಯತೀಶ್‌ ಅವರೇ ಸ್ಥಳಕ್ಕೆ ಆಗಮಿಸಿದ್ದರು. ಒಂದು ಹಂತದಲ್ಲಿ ಜನರನ್ನು ತೆರವುಗೊಳಿಸಲು ಸಣ್ಣಗೆ ಲಾಠಿ ಚಾರ್ಜ್‌ ನಡೆಸಿದರು.

ಇದನ್ನೂ ಓದಿ: Hanuman Flag : ಹನುಮ ಧ್ವಜ ಮರುಸ್ಥಾಪನೆಗೆ ಶಪಥ; ಕೆರಗೋಡಿನಿಂದ ಪಾದಯಾತ್ರೆ ಆರಂಭ

Hanuman Flag : ಮೈಸೂರಿನಲ್ಲೂ ಭಾರಿ ಪ್ರತಿಭಟನೆ

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲೂ ಬಿಜೆಪಿ ಪ್ರತಿಭಟನೆ ನಡೆದಿದೆ. ಮೈಸೂರಿನ ಗಾಂಧಿ ವೃತ್ತದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ, ನಗರಾಧ್ಯಕ್ಷ ಎಲ್.ನಾಗೇಂದ್ರ ಭಾಗಿಯಾಗಿದ್ದರು.

ʻʻಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ಕೆಳಗಿಳಿಸಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಕೆರಗೋಡು ಗ್ರಾಮದ ಮನೆ ಮನೆಗಳ ಮೇಲೆ ಹನುಮ ಧ್ವಜ ಹಾರಾಟಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ನಾವು ಸಹ ಇಡೀ ರಾಜ್ಯಾದ್ಯಂತ ಹನುಮ ಧ್ವಜ ಹಾರಾಟಕ್ಕೆ ಕರೆ ಕೊಡುತ್ತೇವೆ. ನಿಮಗೆ ತಾಕತ್ತಿದ್ದರೆ ಅದನ್ನು ತಡೆಯಿರಿ. ಹನುಮ ಧ್ವಜ, ರಾಮ ವಿರೋಧಿಯಾದ ನಿಮಗೆ ಲೋಕಸಭೆಯಲ್ಲಿ ಜನ ಪಾಠ ಕಲಿಸುತ್ತಾರೆʼʼ ಎಂದು ಮಾಜಿ ಶಾಸಕ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಸವಾಲ್ ಹಾಕಿದರು.

Hanuman Flag : ಪಾದಯಾತ್ರೆಗೆ ಬಾರದೆ ಅಂತರ ಕಾಯ್ದುಕೊಂಡ ಸುಮಲತಾ

ಸೋಮವಾರದ ಪಾದಯಾತ್ರೆಯಲ್ಲಿ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರೂ ಸಂಸದೆ ಸುಮಲತಾ ಅಂಬರೀಶ್ ಅವರು ಇನ್ನೂ ಬಂದಿಲ್ಲ. ಅವರು ಈ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ. ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಭಾಗವಹಿಸಿದ್ದಾರೆ. ಆದರೆ, ಇಷ್ಟೊಂದು ದೊಡ್ಡಮಟ್ಟದ ಹೋರಾಟ ನಡೆಯುತ್ತಿದ್ದರೂ ಇತ್ತ ತಲೆ ಹಾಕದ ಸುಮಲತಾ ಅಂಬರೀಶ್ ಅವರ ನಡೆ ಚರ್ಚೆಗೆ ಕಾರಣವಾಗಿದೆ.

Exit mobile version