Site icon Vistara News

Modi in Karnataka: ಸಂಸದ ಪ್ರತಾಪ್‌ ಸಿಂಹರನ್ನು ಮತ್ತೆ ಕಡೆಗಣಿಸಿದರೇ ಮೋದಿ?

#image_title

ಬೆಂಗಳೂರು: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ(Modi in Karnataka) , ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹರನ್ನು ಕಡೆಗಣಿಸಿದರೇ ಎಂಬ ಚರ್ಚೆ ಬಿಜೆಪಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಹೆದ್ದಾರಿಯನ್ನು ತಮ್ಮ ಸ್ವಂತ ಪರಿಶ್ರಮದಿಂದಾಗಿ ಅಭಿವೃದ್ಧಿ ಮಾಡಲಾಗಿದೆ ಎಂದು ಪ್ರತಾಪ್‌ ಸಿಂಹ ಅನೇಕ ಸಂದರ್ಭಗಳಲ್ಲಿ ತಿಳಿಸಿದ್ದಾರೆ. ಈ ಹೆದ್ದಾರಿಗೆ ಅಗತ್ಯ ಅನುದಾನ ತರುವುದರಿಂದ ವಿವಿಧ ಅಡೆತಡೆ ನಿವಾರಿಸಲು ತಾವು ಪಟ್ಟ ಶ್ರಮವನ್ನು ವಿಡಿಯೋಗಳ ಮೂಲಕವೂ ಪ್ರಚಾರ ಮಾಡಿದ್ದಾರೆ. ಈ ನಡುವೆ, ತಮ್ಮದಲ್ಲದ ಕ್ಷೇತ್ರಕ್ಕೆ ಆಗಮಿಸಿ ಹೆದ್ದಾರಿ ಕುರಿತು ಕ್ರಿಯಾಶೀಲವಾಗಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅವರೊಂದಿಗೂ ಮಾತಿನ ಚಕಮಕಿಯನ್ನು ಪ್ರತಾಪ್‌ ಸಿಂಹ ನಡೆಸಿದ್ದರು.

ಸಂಸದೆ ಸುಮಲತಾ ಅವರಿಂದ ಸಾವಯವ ಬೆಲ್ಲವನ್ನು ಉಡುಗೊರೆಯಾಗಿ ಪಡೆದ ಪ್ರಧಾನಿ ಮೋದಿ.

ಭಾನುವಾರ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಪ್ರಕಾರ ಸಂಸದೆ ಸುಮಲತಾ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಅದೇ ರೀತಿ, ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣವು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸೇರುವುದರಿಂದ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರನ್ನೂ ಶಿಷ್ಟಾಚಾರದ ಪ್ರಕಾರ ಆಹ್ವಾನಿಸಲಾಗಿತ್ತು.

ವೇದಿಕೆಯಲ್ಲಿ ಮೋದಿಯವರಿಗೆ ಪೇಟ ತೊಡಿಸುವ ಅವಕಾಶವನ್ನು ಪ್ರತಾಪ್‌ ಸಿಂಹ ಅವರಿಗೆ ನೀಡಲಾಗಿತ್ತು. ಮೋದಿಯವರಿಗೆ ಸಂಸದೆ ಸುಮಲತಾ, ಮಂಡ್ಯದ ಸಾವಯವ ಬೆಲ್ಲ ನೀಡಿದರು. ಸುಮಲತಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಮಾತನಾಡಿದ್ದು, ಪ್ರತಾಪ್‌ ಸಿಂಹ ಅವರೊಂದಿಗೆ ಈ ಆತ್ಮೀಯತೆ ಕಂಡುಬರಲಿಲ್ಲ. ಭಾಷಣ ಮುಗಿದ ನಂತರವೂ ಸುಮಲತಾ ಅವರನ್ನು ಮಾತನಾಡಿಸಿದ ಪ್ರಧಾನಿ, ಪ್ರತಾಪ್‌ ಸಿಂಹ ಅವರನ್ನು ಮಾತನಾಡಿಸದೆ ತೆರಳಿದರು.

ಇದೆಲ್ಲದಕ್ಕೂ ಹೆಚ್ಚಾಗಿ, ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆಯ ಫಲಕದಲ್ಲಿ ಪ್ರಧಾನಿ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಸಿಎಂ ಬಸವರಾಜ ಬೊಮ್ಮಾಯಿ, ಕೆ.ಆರ್.‌ ಪೇಟೆ ಶಾಸಕ ಡಾ. ಕೆ. ಸಿ. ನಾರಾಯಣಗೌಡ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಹೆಸರು ಮಾತ್ರ ಇತ್ತು. ಇದರಲ್ಲಿ ಪ್ರತಾಪ್‌ ಸಿಂಹ ಹೆಸರು ಇರಲಿಲ್ಲ, ಹಾಗಾಗಿ ಪ್ರತಾಪ್‌ ಸಿಂಹ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಮೈಸೂರಿಗೆ ಆಗಮಿಸಿದ ವೇಳೆ ಶಾಸಕ ರಾಮದಾಸ್‌ ಜತೆ ಮೋದಿ ಮಾತುಕತೆ.

ಇದರ ಜತೆಗೆ, ಮೈಸೂರಿಗೆ ಆಗಮಿಸಿದ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶಾಸಕರ ಎಸ್‌.ಎ. ರಾಮದಾಸ್‌ ಸ್ವಾಗತಿಸಿದ್ದಾರೆ. ಈ ವೇಳೆ ರಾಮದಾಸ್‌ ಹೆಗಲಿನ ಮೇಲೆ ಮೋದಿ ಕೈಯಿಟ್ಟು ಮಾತನಾಡುತ್ತಿರುವ ಫೋಟೊ ವೈರಲ್‌ ಆಗಿದೆ. ಈ ಹಿಂದೆ ಜೂನ್‌ 21ರಂದು ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಾಗಲೂ, ಪ್ರತಾಪ್‌ ಸಿಂಹ ಬದಲಿಗೆ ರಾಮದಾಸ್‌ ಅವರೊಂದಿಗೆ ಮೋದಿ ಆತ್ಮೀಯತೆ ಪ್ರದರ್ಶೀಸಿದ್ದರು ಎಂಬ ಚರ್ಚೆ ನಡೆದಿತ್ತು.

ಇದೆಲ್ಲ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ. “ಕಾರ್ಯಕ್ರಮ ಮಂಡ್ಯದಲ್ಲಿ ನಡೆಯುತ್ತಿದ್ದ ಕಾರಣ ಸ್ಥಳೀಯ ಸಂಸದೆ ಸುಮಲತಾ ಮೇಡಂ ಹೆಸರನ್ನು ಡಿಜಿಟಲ್ ಇನ್ವಿಟೇಶನ್ ನಲ್ಲಿ ಹಾಕಲಾಗಿತ್ತು ಅಷ್ಟೇ. ತಪ್ಪು ತಿಳಿವಳಿಕೆ ಬೇಡ” ಎಂದಿದ್ದಾರೆ.

Exit mobile version